ಮಡಿಕೇರಿ: ‘ಸಮ್ಮೇಳನದ ಅಧ್ಯಕ್ಷರ ಭಾಷಣವನ್ನು ಸಂಕ್ಷಿಪ್ತಗೊಳಿಸುವಂತೆ ಸೂಚಿಸಿದ್ದರಿಂದ ಅವಮಾನವಾಗಿದೆ ಎಂದು ಅವರು ಭಾವಿಸಿದ್ದರೆ ಅದಕ್ಕೆ ನಾನು ನಾ. ಡಿಸೋಜ ಅವರಲ್ಲಿ ಬೇಷರತ್ ಕ್ಷಮೆ ಯಾಚಿಸುತ್ತೇನೆ' ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.
80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನದ ಕೊನೆಯ ದಿನವಾದ ಗುರುವಾರ, ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೊದಲ ದಿನ ಸಮಯದ ಕೊರತೆ ಇತ್ತು. ಸಭಿಕರು ಹಸಿದಿದ್ದರು. ಹೀಗಾಗಿ ಭಾಷಣ ಸಂಕ್ಷಿಪ್ತಗೊಳಿಸುವಂತೆ ಸೂಕ್ಷ್ಮವಾಗಿ ತಿಳಿಸಿದೆವು’ ಎಂದು ವಿವರಣೆ ನೀಡಿದರು.
‘ಸಮ್ಮೇಳನಾಧ್ಯಕ್ಷರ ಭಾಷಣವನ್ನು ಯಾವಾಗ ಮತ್ತು ಹೇಗೆ ನಿಗದಿಪಡಿಸಬೇಕು ಎಂಬ ಬಗ್ಗೆ ಯೋಚಿಸುವ ಪಾಠವನ್ನು ಈ ಪ್ರಸಂಗ ಕಲಿಸಿದೆ ಎಂದರು.
ಶಾಸಕರ ವರ್ತನೆಗೆ ಆಕ್ಷೇಪ: ಡಾ. ಕಸ್ತೂರಿ ರಂಗನ್ ವರದಿ ಕುರಿತು ಡಿಸೋಜ ಅವರು ಅಧ್ಯಕ್ಷ ಭಾಷಣದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳದೆ ಸ್ಥಳೀಯ ಶಾಸಕರು ವೇದಿಕೆ ಏರಿ ಆಕ್ರೋಶ ವ್ಯಕ್ತಪಡಿಸಿದ್ದು ಸರಿಯಲ್ಲ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಅವರು ಹಾಗೆ ಮಾಡಿರುವಂತಿದೆ. ಈ ಕುರಿತು ಶಾಸಕರು ವಿಷಾದ ವ್ಯಕ್ತಪಡಿಸುತ್ತಾರೆ ಎಂದು ಭಾವಿಸುವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೊಡಗಿನ ಸಮಸ್ಯೆಗಳ ಬಗ್ಗೆ ಈ ಸಮ್ಮೇಳನ ಪ್ರಭುತ್ವದ ಗಮನ ಸೆಳೆದಿದೆ. ಅವುಗಳಲ್ಲಿ ಕೆಲವಕ್ಕಾದರೂ ಪರಿಹಾರ ದೊರೆತರೆ ಸಮ್ಮೇಳನ ಸಾರ್ಥಕವಾದಂತೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.