ADVERTISEMENT

ಢಂ ಢಂ ಪಟಾಕಿ; ಶಿವಕಾಶಿ ಸುತ್ತಮುತ್ತ ಸೈರನ್!

ರಾಜೇಶ್ ರೈ ಚಟ್ಲ
Published 10 ನವೆಂಬರ್ 2012, 19:30 IST
Last Updated 10 ನವೆಂಬರ್ 2012, 19:30 IST

ಹುಬ್ಬಳ್ಳಿ: ಎಲ್ಲೆಡೆ ಈಗ ಢಂ, ಢಂ ಪಟಾಕಿ ಸದ್ದು. ಹಾದಿ-ಬೀದಿಯಲ್ಲಿ ಖರೀದಿ ಭರಾಟೆ. ಇವೆಲ್ಲವೂ `ಮೇಡ್ ಇನ್ ಶಿವಕಾಶಿ~ ಮಹಿಮೆ!

ಪಟಾಕಿ ಅಂದಾಕ್ಷಣ ನೆನಪಾಗುವುದು ತಮಿಳುನಾಡಿನ ವಿರುಧ ನಗರ ಜಿಲ್ಲೆಗೆ ಸೇರಿದ ಶಿವಕಾಶಿ. ದೇಶದಾದ್ಯಂತ ಪೂರೈಕೆಯಾಗುವ ಶೇ 90ರಷ್ಟು ಬಾಣ ಬಿರುಸು, ಸಿಡಿಮದ್ದುಗಳು ಪೂರೈಕೆಯಾಗುವುದು ಈ `ಗಂಧಕ~ ನಗರದಿಂದಲೇ!

`ಶಿವಕಾಶಿ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿರುವ 400ಕ್ಕೂ ಹೆಚ್ಚು ಪಟಾಕಿ ತಯಾರಿಕೆ ಘಟಕಗಳಲ್ಲಿ ದಿನದ 24 ಗಂಟೆಯೂ ಸೈರನ್ ಮೊಳಗುತ್ತಿದೆ. 25 ಸಾವಿರಕ್ಕೂ ಹೆಚ್ಚು ಜನರು ಕಳೆದ ಮೂರು ತಿಂಗಳಿನಿಂದ ಪಟಾಕಿ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ತಲ್ಲೆನರಾಗಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ `ಓಂ ಶಿವ ಶಕ್ತಿ ಕ್ರ್ಯಾಕರ್ಸ್~ ಕಂಪೆನಿಯಲ್ಲಿ ಸಂಭವಿಸಿದ ದುರಂತದಲ್ಲಿ 54 ಮಂದಿ ಸಾವಿಗೀಡಾದ ಘಟನೆ ಇಲ್ಲಿನ ಕಾರ್ಮಿಕರನ್ನೇನೂ ಕಾಡುತ್ತಿಲ್ಲ~ ಎನ್ನುತ್ತಾರೆ ತಮಿಳುನಾಡು ಪಟಾಕಿ ಅಂಗಡಿ ಮತ್ತು ಸಿಡಿಮದ್ದು ತಯಾರಕರ ಸಂಘದ (ಟಿಎನ್‌ಎಫ್‌ಎಎಂಎ) ಸದಸ್ಯ ಮುರುಗನ್. ಪಟಾಕಿ ಸಗಟು ಮಾರಾಟಕ್ಕಾಗಿ ನಗರಕ್ಕೆ ಬಂದಿದ್ದ ಅವರು, ಶಿವಕಾಶಿಯಲ್ಲಿರುವ ಪಟಾಕಿ ಉದ್ದಿಮೆಯ ಸದ್ಯದ ಸ್ಥಿತಿ ಬಗ್ಗೆ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

`ಕಳೆದ 10 ವರ್ಷಗಳಲ್ಲಿ ಶಿವಕಾಶಿಯಲ್ಲಿರುವ 75ಕ್ಕೂ ಹೆಚ್ಚು ಪಟಾಕಿ ತಯಾರಕ ಅಂಗಡಿಗಳಲ್ಲಿ ನಿರಂತರವಾಗಿ 90ಕ್ಕೂ ಹೆಚ್ಚು ಅವಘಡಗಳಾಗಿವೆ. 250ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 1934ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭಗೊಂಡ ಈ ಉದ್ದಿಮೆ, ಈಗ ಬೆಳೆದಿರುವ ಬೃಹದಾಕಾರವನ್ನು ಅಲ್ಲಿಗೇ ಬಂದು ನೋಡಬೇಕು. ನನ್ನಂತಹ ಸಾವಿರಾರು ಜನರಿಗೆ ಈ ಉದ್ದಿಮೆ ಉದ್ಯೋಗ ಕಲ್ಪಿಸಿದೆ. ಅಷ್ಟೇ ಅಪಾಯಕಾರಿ ಬದುಕು ಇದು. ಆದರೆ ಹೆಸರುವಾಸಿ ಕಂಪೆನಿಗಳು ತಯಾರಿಸುವ ಪಟಾಕಿಗಳ ಬಗ್ಗೆ ಗ್ರಾಹಕರು ಆತಂಕಪಡುವ ಅಗತ್ಯ ಇಲ್ಲ~ ಎಂದರು.

`ಇತ್ತೀಚೆಗೆ ಇಲ್ಲಿನ ದೊಡ್ಡ ದೊಡ್ಡ ಕಂಪೆನಿಗಳು ಸುರಕ್ಷಾ ವ್ಯವಸ್ಥೆ ಅಳವಡಿಸಿಕೊಂಡಿವೆ. ಸಣ್ಣ ಮತ್ತು ಮಧ್ಯಮ ಕಂಪೆನಿಗಳು ಸುರಕ್ಷತೆ ಕಡೆಗೆ ಹೆಚ್ಚು ಗಮನವಹಿಸುತ್ತಿಲ್ಲ. ಆದರೆ ಹಳ್ಳಿ ಮನೆಗಳಲ್ಲಿ 10 ಅಡಿ ಉದ್ದ, 10 ಅಡಿ ಅಗಲದ ಕೊಠಡಿಗಳಲ್ಲಿ ಅನಧಿಕೃತವಾಗಿ ಪಟಾಕಿ ತಯಾರಿ ನಡೆಯುತ್ತಿದೆ. ಇಂತಹ ಕಡೆಗಳಲ್ಲಿ ರಾಸಾಯನಿಕಗಳು ಸ್ಫೋಟಗೊಂಡು ಆಗಾಗ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇತ್ತೀಚೆಗೆ ಸರ್ಕಾರ ಕಠಿಣ ಸುರಕ್ಷತಾ ಕ್ರಮ ಕೈಗೊಂಡ ಕಾರಣ ಇಂತಹ 40ಕ್ಕೂ ಹೆಚ್ಚು ಘಟಕಗಳು ಮುಚ್ಚಿಕೊ       ಂಡಿವೆ~ ಎಂದರು.

`ಶಿವಕಾಶಿಯಲ್ಲಿ ವಾರ್ಷಿಕ ರೂ 2000ದಿಂದ 3000 ಕೋಟಿ ವ್ಯವಹಾರ ನಡೆಯುತ್ತಿದೆ. ಇದು ವರ್ಷಕ್ಕೆ ಶೇ 10ರಷ್ಟು ಹೆಚ್ಚುತ್ತಿದೆ. 2002ರಲ್ಲಿ ಕೇವಲ ಐದು ಲಕ್ಷ ವ್ಯವಹಾರ ನಡೆಸಿದ ಪಟಾಕಿ ತಯಾರಕ ಕಂಪೆನಿಯೊಂದು ಈಗ ವರ್ಷಕ್ಕೆ ರೂ 80-90 ಲಕ್ಷ ವ್ಯವಹಾರ ನಡೆಸುತ್ತಿದೆ~ ಎಂದರು.

`ಶಿವಕಾಶಿಯಲ್ಲಿ ಮಳೆ ಕಡಿಮೆ. ಒಣ ಹವೆ ಇದೆ. ಹೀಗಾಗಿ ಇಲ್ಲಿ ಪಟಾಕಿ ಅಂಗಡಿಗಳು ಹೆಚ್ಚಿವೆ. ನಿರಂತರವಾಗಿ ಪಟಾಕಿ ಪೂರೈಸುವವರನ್ನು ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಕಂಪೆನಿಗಳು ಗಮನಹರಿಸಿವೆ. ಇತ್ತೀಚಿನ ಅವಘಡಗಳಿಂದಾಗಿ ಉತ್ಪಾದನೆ ಶೇ 40ರಷ್ಟು ಕಡಿಮೆಯಾಗಿದೆ. ಅಧಿಕಾರಿಗಳ ನಿರಂತರ ದಾಳಿಯಿಂದ ಪಟಾಕಿ ತಯಾರಿಕಾ ಘಟಕಗಳು ಮುಚ್ಚುತ್ತಿವೆ. ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವ ಪ್ರಮಾಣವೂ ಕಡಿಮೆಯಾಗಿದೆ~ ಎಂದರು.


`ಈ ಬಾರಿ ಶಿವಕಾಶಿಯಲ್ಲೇ ಪಟಾಕಿಗಳಿಗೆ ಶೇ 15ರಷ್ಟು ಬೆಲೆ ಹೆಚ್ಚಿದೆ. ಹೀಗಾಗಿ ನಾವೂ ಬೆಲೆ ಹೆಚ್ಚಿಸಬೇಕಾಗಿದೆ. ಶಿವಕಾಶಿಯಲ್ಲಿ ಇತ್ತೀಚೆಗೆ ಘಟಿಸಿದ ಅವಘಡಗಳ ಬಳಿಕ ಪಟಾಕಿ ಉತ್ಪಾದನೆ ಭಾರಿ ಪ್ರಮಾಣದಲ್ಲಿ ಕುಸಿದಿದೆ~ ಎಂದು ನಗರದ ಖ್ಯಾತ ಪಟಾಕಿ ವ್ಯಾಪಾರಸ್ಥ ಎಚ್.ಎಂ. ಖಾಜಾಪುರ ತಿಳಿಸಿದರು.
`ಪಟಾಕಿಗಳ ಒಳಗಿರುವ ರಾಸಾಯನಿಕಗಳ ಗುಣಮಟ್ಟ ಪರೀಕ್ಷಿಸುವ ಯಾವುದೇ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಹಕರು ಸ್ಥಳೀಯವಾಗಿ ತಯಾರಿಸಿದ ಪಟಾಕಿಗಳನ್ನು ಖರೀದಿಸದೆ, ಕಂಪೆನಿಗಳಿಂದ ತಯಾರಾದ ಪಟಾಕಿಗಳನ್ನೇ ಖರೀದಿಸಬೇಕು~ ಎಂದು ಸಲಹೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.