ADVERTISEMENT

ತಂತ್ರಜ್ಞಾನದೊಂದಿಗೆ ಕನ್ನಡ ಮುನ್ನಡೆ: ಕಂಬಾರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:15 IST
Last Updated 2 ಫೆಬ್ರುವರಿ 2011, 18:15 IST
ತಂತ್ರಜ್ಞಾನದೊಂದಿಗೆ ಕನ್ನಡ ಮುನ್ನಡೆ: ಕಂಬಾರ
ತಂತ್ರಜ್ಞಾನದೊಂದಿಗೆ ಕನ್ನಡ ಮುನ್ನಡೆ: ಕಂಬಾರ   

ಬೆಂಗಳೂರು:  ‘ತಾಂತ್ರಿಕತೆಯ ಅಭಿವೃದ್ಧಿಯೊಂದಿಗೆ ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಅಳವಡಿಸಬೇಕು. ಆಗ ಮಾತ್ರ ಕನ್ನಡ ಅಭಿವೃದ್ಧಿಯಾಗುತ್ತದೆ’ ಎಂದು ನಾಟಕಕಾರ ಡಾ.ಚಂದ್ರಶೇಖರ ಕಂಬಾರ ಅವರು ಅಭಿಪ್ರಾಯಪಟ್ಟರು.

ನಗರದಲ್ಲಿ ಬುಧವಾರ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಕುವೆಂಪು ಕನ್ನಡ ತಂತ್ರಾಂಶ 2.0’,  ‘ಕುವೆಂಪು ಕನ್ನಡ ತಂತ್ರಾಂಶ (ಯೂನಿಕೋಡ್ ಆವೃತ್ತಿ 1.0)’ ಸಾಫ್ಟವೇರ್‌ಗಳ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕುವೆಂಪು ತಮ್ಮ ಕಾಲಕ್ಕನುಗುಣವಾಗಿ ಕನ್ನಡದ ಅಭಿವೃದ್ಧಿಯ ಬಗ್ಗೆ ಯೋಚಿಸಿದ್ದರು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಂಪ್ಯೂಟರ್ ಬಳಕೆ ಮೂಲಕ ಕನ್ನಡವನ್ನು ಬೆಳೆಸುವ ಬಗ್ಗೆ ಪ್ರಯತ್ನಗಳನ್ನು ಮಾಡಿದ್ದರು’ ಎಂದು ಸ್ಮರಿಸಿದರು.

‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುವೆಂಪು ವಿ.ವಿ. ವಿಶ್ರಾಂತ ಕುಲಪತಿ ಡಾ.ಚಿದಾನಂದ ಗೌಡ ಅವರ ನೇತೃತ್ವದಲ್ಲಿ ಕನ್ನಡ ಸಾಫ್ಟವೇರ್ ಅಭಿವೃದ್ಧಿಗೆ ಸಮಿತಿ ರಚಿಸಿದ್ದರು. ಆದರೆ ಸಮಿತಿ ವರದಿ ನೀಡಿ ಏಳು ತಿಂಗಳಾದರೂ ಆ ಬಗ್ಗೆ ಆದೇಶ ಇನ್ನೂ ಹೊರಬಿದ್ದಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸರ್ಕಾರವನ್ನು ನೆಚ್ಚಿಕೊಳ್ಳದೇ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು’ ಎಂದು ಹೇಳಿದ ಅವರು, ‘ಕನ್ನಡ ಭಾಷೆಯಲ್ಲಿ ಸಾಫ್ಟವೇರ್‌ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಒತ್ತಾಯಿಸಲು ತೇಜಸ್ವಿ ಅವರೊಂದಿಗೆ ವಿಧಾನಸೌಧಕ್ಕೆ ತೆರಳಿದಾಗ ಸಚಿವರು ನಮ್ಮನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರೇ ಹೊರತು ಕೆಲಸ ಮಾತ್ರ ಮಾಡಿಕೊಡಲಿಲ್ಲ’ ಎಂದು ವಿಷಾದಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಮಾತನಾಡಿ, ‘ಜಾತ್ರೆ, ಉತ್ಸವ, ನುಡಿತೇರಿನಂಥ ಕಾರ್ಯಕ್ರಮಗಳು ಕನ್ನಡದ ವಾತಾವರಣ ನಿರ್ಮಿಸಲು ಕಾರಣವಾಗಬಲ್ಲುದೇ ಹೊರತು, ಇಷ್ಟರಿಂದಲೇ ಕನ್ನಡ ಅಭಿವೃದ್ಧಿ ಆಗಲಾರದು. ತಂತ್ರಜ್ಞಾನದ ಮೂಲಕ ಭಾಷೆಯ ಅಭಿವೃದ್ಧಿ ಸಾಧ್ಯವಾಗಲಿದೆ.

ಈಗಾಗಲೇ ಜಾನಪದ ಅಕಾಡೆಮಿಯೊಂದಿಗೆ ಸಹಯೋಗದಲ್ಲಿ ಜಾನಪದ ನಿಘಂಟನ್ನು ಹೊರತರಲಾಗುತ್ತಿದೆ. ವಿ.ವಿ. ಸಾಫ್ಟವೇರ್ ಅಭಿವೃದ್ಧಿಪಡಿಸಲು ಹಣಕಾಸು ನೆರವು ನೀಡಲು ಪ್ರಾಧಿಕಾರ ಸಿದ್ಧವಿದೆ’ ಎಂದು ಭರವಸೆ ನೀಡಿದರು.
ಸಾಫ್ಟ್‌ವೇರ್‌ನ ಸಿ.ಡಿ.ಗಳನ್ನು ಬಿಡುಗಡೆ ಮಾಡಿದ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್, ‘ಪಂಜಾಬಿ, ಹಿಂದಿ, ಉರ್ದು ಭಾಷೆಗಳ ಅನುವಾದ ಕಾರ್ಯವು ಏಕಕಾಲಕ್ಕೆ ನಡೆಯುವ ಯೋಜನೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಜಾರಿಯಲ್ಲಿದೆ.

 ಯೂರೋಪ್ ಖಂಡದಲ್ಲಿ 23 ಭಾಷೆಗಳು ಬಳಕೆಯಲ್ಲಿದ್ದು, ಏಕಕಾಲದಲ್ಲಿಯೇ ಅಲ್ಲಿ ಭಾಷಾಂತರ ಪ್ರಕ್ರಿಯೆ ನಡೆಯುತ್ತಿದೆ. ದ್ರಾವಿಡ ಭಾಷೆಯ ಕನ್ನಡ, ತಮಿಳು, ತೆಲುಗು, ತುಳು ಭಾಷೆಗಳ ಕೃತಿಗಳ ಭಾಷಾಂತರ ನಡೆಯಬೇಕು’ ಎಂದು ಸಲಹೆ ನೀಡಿದರು.

ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಹಂಪಿ ಕನ್ನಡ ವಿ.ವಿ.ಕುಲಪತಿ ಡಾ.ಎ.ಮುರಿಗೆಪ್ಪ ಅವರು, ‘ಕನ್ನಡ ವಿ.ವಿ.ಯಲ್ಲಿ ಭಾಷಾಂತರ ವಿಭಾಗವಿದ್ದು, ಈಗ ಲೇಖಕರ ಮೂಲಕವೇ ಕೃತಿಗಳನ್ನು ಭಾಷಾಂತರ ಮಾಡಿಸಲಾಗುತ್ತಿದೆ. ಯಾಂತ್ರಿಕವಾಗಿ ಮಾಡಿಸುವ ಮುನ್ನ ಆ ಭಾಷೆಯ ಜಾಯಮಾನವನ್ನು ಅಧ್ಯಯನ ಮಾಡ ಬೇಕಾಗುತ್ತದೆ.

 ಆ ನಿಟ್ಟಿನಲ್ಲಿಯೂ ವಿ.ವಿ. ದಾಪುಗಾಲು ಹಾಕುತ್ತಿದೆ. ಕುವೆಂಪು ತಂತ್ರಾಂಶವನ್ನು ಎಲ್ಲರಿಗೂ ಮುಕ್ತವಾಗಿಡಲಾಗಿದೆ. ಏನಾದರೂ ನ್ಯೂನತೆ ಕಂಡು ಬಂದಲ್ಲಿ ಮುಂದಿನ ಆವೃತ್ತಿಯಲ್ಲಿ ಸರಿಪಡಿಸಲಾಗುವುದು’ ಎಂದು ನುಡಿದರು.

‘ರಾಜ್ಯ ಸರ್ಕಾರವು ಓಸಿಆರ್ ಹಾಗೂ ಆನ್‌ಲೈನ್ ನಿಘಂಟು ಯೋಜನೆಗಳನ್ನು ನಮ್ಮ ವಿ.ವಿ.ಯೊಂದಿಗೆ ಜಾರಿಗೆ ತರುತ್ತಿದ್ದು, ಅಚ್ಚುಮೊಳೆ ಮೂಲಕ ಮುದ್ರಿಸಲಾದ ಕೃತಿಗಳನ್ನು ಸ್ಕ್ಯಾನ್ ಮಾಡಿ, ಈಗ ಇರುವ ತಂತ್ರಜ್ಞಾನಕ್ಕೆ ವರ್ಗಾಯಿಸಬಹುದಾಗಿದೆ’ ಎಂದು ವಿವರಿಸಿದರು.

ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಈ ಸಾಫ್ಟ್‌ವೇರ್ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು. ಕನ್ನಡ ವಿ.ವಿ. ಕುಲಸಚಿವ ಡಾ.ಮಂಜುನಾಥ ಬೇವಿನಕಟ್ಟಿ, ಕುಲಸಚಿವ ಡಾ.ಕೆ.ಪ್ರೇಮ್‌ಕುಮಾರ್, ಮೈಸೂರಿನ ಜೆ.ಸಿ.ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕ ಪ್ರೊ.ಟಿ.ಎನ್.ನಾಗಭೂಷಣ ಹಾಗೂ ಸಾಫ್ಟವೇರ್ ಅಭಿವೃದ್ಧಿಪಡಿಸಿದ ಆನಂದ್, ಸುಧೀರ್ ಹಾಗೂ ಮಂಜಾಚಾರ್ಯ ಅವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.