ADVERTISEMENT

ತಜ್ಞ ವೈದ್ಯರ ಸೇವೆ ಪಡೆಯಲು ಕ್ರಮ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಬೆಂಗಳೂರು: `ರಾಜ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ತಜ್ಞ ವೈದ್ಯರ ಕೊರತೆಯೇ ದೊಡ್ಡ ಅಡ್ಡಗಾಲಾಗಿದ್ದು, ಸೇವೆ ನೀಡಲು ಮುಂದೆ ಬರುವ ತಜ್ಞ ವೈದ್ಯರ ಜೊತೆ ಸರ್ಕಾರ ಅವರಿಗೆ ಪೂರಕವಾದಂತಹ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದೆ~ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅರವಿಂದ ಲಿಂಬಾವಳಿ ಪ್ರಕಟಿಸಿದರು.

ಕಾಡುಗೋಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬೆಂಗಳೂರು ವಿಭಾಗಮಟ್ಟದ ವಾಜಪೇಯಿ ಆರೋಗ್ಯಶ್ರೀ ಯೋಜನೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. `ಎಷ್ಟೇ ಕೇಳಿದರೂ ತಜ್ಞರು ಖಾಸಗಿ ಆಸ್ಪತ್ರೆ ಬಿಟ್ಟು ಸಾರ್ವಜನಿಕರ ಸೇವೆಗೆ ಲಭ್ಯರಾಗುತ್ತಲೇ  ಇಲ್ಲ~ ಎಂದು ಬೇಸರ ವ್ಯಕ್ತಪಡಿಸಿದರು.

`ಕಾಲೇಜಿನಲ್ಲಿ ಓದುವಾಗ ಸರ್ಕಾರವೂ ತಮ್ಮ ಶಿಕ್ಷಣಕ್ಕಾಗಿ ದುಡ್ಡು ಖರ್ಚು ಮಾಡಿರುತ್ತದೆ ಎಂಬುದನ್ನು ವೈದ್ಯರು ನೆನಪಿಗೆ ತಂದುಕೊಳ್ಳಬೇಕು. ಹಣ ಮಾಡುವುದನ್ನೇ ಗುರಿ ಮಾಡಿಕೊಳ್ಳದೆ ಬಡ ಜನರ ಸೇವೆಗೂ ಸಮಯ ಕೊಡಬೇಕು~ ಎಂದು ಒತ್ತಾಯಿಸಿದರು.

`ಶಿಕ್ಷಣದ ಹಕ್ಕಿನಂತೆಯೇ ಆರೋಗ್ಯ ಹಕ್ಕು ಕಾಯ್ದೆಯನ್ನೂ ಜಾರಿಗೆ ತರಲು ಸರ್ಕಾರ ಚಿಂತಿಸುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಚರ್ಚೆ ನಡೆಸುತ್ತಿವೆ. ಆರೋಗ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಬಂದರೆ ಪ್ರತಿಯೊಬ್ಬ ಪ್ರಜೆಗೂ ಶ್ರೀಮಂತರಿಗೆ ಸಿಗುವಷ್ಟೇ ಉತ್ತಮ ಆರೋಗ್ಯ ಸೌಲಭ್ಯ ದೊರಕಲಿದೆ~ ಎಂದು ವಿವರಿಸಿದರು.

`ರಾಜ್ಯದ ಹೊರಗೆ ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಸದ್ಯದ ವ್ಯವಸ್ಥೆಯಲ್ಲಿ ಅವಕಾಶ ಇಲ್ಲ. ಯೋಜನೆ ನಿಯಮಾವಳಿಗೆ ಶೀಘ್ರವೇ ತಿದ್ದುಪಡಿ ಮಾಡಲಾಗುತ್ತಿದ್ದು, ಅಗತ್ಯ ವೈದ್ಯಕೀಯ ಸೌಲಭ್ಯ ದೊರಕುವ ಹತ್ತಿರದ ನಗರದಲ್ಲಿ ಚಿಕಿತ್ಸೆಗೆ ಅನುವು ಮಾಡಿಕೊಡಲಾಗುತ್ತದೆ~ ಎಂದು ಲಿಂಬಾವಳಿ ಹೇಳಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ರಾಜ್ಯದಲ್ಲಿ ಇದುವರೆಗೆ 13 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದ್ದು, 33 ಲಕ್ಷ ಬಿಪಿಎಲ್ ಕುಟುಂಬಗಳನ್ನು ಯೋಜನೆ ವ್ಯಾಪ್ತಿಗೆ ತರಲಾಗಿದೆ. 20 ಸಾವಿರ ಫಲಾನುಭವಿಗಳು ಚಿಕಿತ್ಸಾ ಸೌಲಭ್ಯ ಪಡೆದಿದ್ದು, ಅದಕ್ಕಾಗಿ ರೂ 113 ಕೋಟಿ ಖರ್ಚು ಮಾಡಲಾಗಿದೆ~ ಎಂದು ಹೇಳಿದರು.

`ಬಿಪಿಎಲ್ ಕುಟುಂಬಗಳ ವಾರ್ಷಿಕ ವಿಮಾ ಕಂತು ತಲಾ 300 ರೂಪಾಯಿಯನ್ನು ಸರ್ಕಾರವೇ ಭರಿಸಲಿದೆ~ ಎಂದೂ ಅವರು ಪ್ರಕಟಿಸಿದರು.

`ಆರೋಗ್ಯ ಇಲಾಖೆಗೆ ಸರ್ಕಾರ ರೂ 3,391 ಕೋಟಿ ಅನುದಾನ ಒದಗಿಸಿದ್ದು, ದೇಶದ ಬೇರೆಲ್ಲಿಯೂ ಇಲ್ಲದ ಜನಪರ ಆರೋಗ್ಯ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ~ ಎಂದು ತಿಳಿಸಿದರು. `ಗರ್ಭಿಣಿಯರ ಆರೋಗ್ಯದ ಮೇಲೆ ವಿಶೇಷ ನಿಗಾ ವಹಿಸಿದ ಪರಿಣಾಮ ಶಿಶು ಮರಣಗಳ ಸಂಖ್ಯೆ ಸಾವಿರಕ್ಕೆ 41ರಿಂದ 38ಕ್ಕೆ ಇಳಿದಿದೆ~ ಎಂದು ಶೆಟ್ಟರ್ ವಿವರಿಸಿದರು.

`ರಾಜ್ಯದಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗೆ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರವೇ ಎಲ್ಲೆಡೆ ವೈದ್ಯರ ಸೇವೆ ಲಭ್ಯವಾಗಲಿದೆ~ ಎಂದ ಅವರು, `ವೈದ್ಯಕೀಯ ಕಾಲೇಜುಗಳೇ ಇಲ್ಲದ ಏಳು ಜಿಲ್ಲೆಗಳಲ್ಲಿ ಸರ್ಕಾರದಿಂದಲೇ ಕಾಲೇಜು ಆರಂಭಿಸಲು ತೀರ್ಮಾನಿಸಲಾಗಿದೆ~ ಎಂದು ಹೇಳಿದರು.

ಚಿತ್ರನಟ ದರ್ಶನ್ ತೂಗದೀಪ ಮಾಹಿತಿ ಪರಿಕರ ಬಿಡುಗಡೆ ಮಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪ ಮುಖ್ಯಮಂತ್ರಿ ಆರ್. ಅಶೋಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ,

ವಿಧಾನ ಪರಿಷತ್ ಸದಸ್ಯ ಬಿ.ಎಸ್. ಸುರೇಶ್, ಮಹದೇವಪುರ ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ಶೆಟ್ಟಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ರಜನೀಶ್ ಗೋಯಲ್, ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ವಿ.ಬಿ. ಪಾಟೀಲ್, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ನಿರ್ದೇಶಕ ಡಾ.ವಿಶಾಲ್ ಮತ್ತಿತರರು ಹಾಜರಿದ್ದರು. 

4,000 ಜನರ ತಪಾಸಣೆ
ಶಿಬಿರದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಜನ ತಪಾಸಣೆಗೆ ಒಳಗಾಗಿದ್ದು, 138 ಜನಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ.

`ನಗರದ ಹೈಟೆಕ್ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು~ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.  ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ತೊಂದರೆ, ಅಪಘಾತ ಸೇರಿದಂತೆ ಎಲ್ಲ ಬಗೆಯ ಕಾಯಿಲೆಗಳಿಗೆ ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ದೊರೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.