ಶಿವಮೊಗ್ಗ: ಬೆಂಗಳೂರಿನಲ್ಲಿ ಈಚೆಗೆ ಪತ್ರಕರ್ತರ ಮೇಲೆ ವಕೀಲರು ನಡೆಸಿದ ದೌರ್ಜನ್ಯದ ದೃಶ್ಯಗಳು ಸಂಪೂರ್ಣ ವಿಡಿಯೋ ಚಿತ್ರೀಕರಣವಾಗಿದೆ. ತಪ್ಪಿತಸ್ಥ ವಕೀಲರನ್ನು ಬಂಧಿಸಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಿಲ್ಲ. ಇದನ್ನೇ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕೀಲರ ಅಟ್ಟಹಾಸವನ್ನು ವಿಡಿಯೋದಲ್ಲಿ ಕಂಡ ಮೇಲೂ ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ವಕೀಲರು ತಪ್ಪು ಎಸಗಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಸಾಮಾನ್ಯ ವ್ಯಕ್ತಿ ತಪ್ಪು ಮಾಡಿದಾಗ ನೀಡುವ ಶಿಕ್ಷೆಯನ್ನೇ ಈ ಪ್ರಕರಣದಲ್ಲೂ ವಿಧಿಸಬೇಕು. ನ್ಯಾಯಾಂಗ ತನಿಖೆ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗ ಕಾರ್ಯ ನಿರ್ವಹಿಸಲು ಅಡೆತಡೆ ಮಾಡುವುದು ಸರಿಯಲ್ಲ. ಕಾನೂನು ರಕ್ಷಣೆ ಮಾಡುವವರೇ ಅದನ್ನು ಮುರಿಯುವುದು ಸೂಕ್ತವಲ್ಲ. ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ದೌರ್ಜನ್ಯ ಎಸಗಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.