ADVERTISEMENT

ತಪ್ಪು ಮಾಡಿಲ್ಲ, ವಿಚಾರಣೆ ನಂತರ ಸತ್ಯ ಹೊರಬರಲಿದೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಮಂಗಳೂರು:  `ನಾನು ತಪ್ಪು ಮಾಡಿಲ್ಲ, ಸದನ ಸಮಿತಿ ವಿಚಾರಣೆಯ ನಂತರ ನಿಜಾಂಶ ಹೊರಬರಲಿದೆ. ನನ್ನ ಕ್ಷೇತ್ರದ ಜನತೆಗೆ ನಾನು ಏನು ಎಂಬುದು ಗೊತ್ತಿದೆ. ನನ್ನ ಮೇಲೆ ಆರೋಪ ಮಾಡಿದವರಿಗೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಆಗುವುದು ನಿಶ್ಚಿತ....~

ಹೀಗೆ ಖಡಕ್ ಮಾತನಾಡಿದವರು ಮಾಜಿ ಸಚಿವ ಕೃಷ್ಣ ಪಾಲೆಮಾರ್. ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ತಲೆದಂಡ ತೆತ್ತ ಮೂವರು ಸಚಿವರ ಪೈಕಿ ಒಬ್ಬರಾದ ಪಾಲೆಮಾರ್ ಈ ವಿವಾದದ ಬಳಿಕ ಇದೇ ಪ್ರಥಮ ಬಾರಿಗೆ ಸೋಮವಾರ ಮಂಗಳೂರಿಗೆ ಆಗಮಿಸಿದ್ದು, ಅವರ ಮನೆಗೆ ತೆರಳಿದ ಕೆಲವು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು.

`ಸ್ಪೀಕರ್ ಅವರಿಗೆ ನಾನು ಉತ್ತರ ನೀಡಿದ್ದೇನೆ. ಅದರಲ್ಲಿ ಏನೇನು ಅಂಶ ಇದೆ ಎಂಬುದನ್ನು ಈಗ ಬಹಿರಂಗಪಡಿಸಲಾಗದು, ಕಾರಣ ಸದನ ಸಮಿತಿ ವಿಚಾರಣೆ ನಡೆಸುತ್ತಿದೆ. ನನ್ನ ಆತ್ಮಸಾಕ್ಷಿಯಂತೆಯೇ ನಾನು ಕೆಲಸ ಮಾಡುವವ. ನಾನು ತಪ್ಪು ಮಾಡಿಲ್ಲ ಎಂದು ನನ್ನ ಆತ್ಮಸಾಕ್ಷಿ ಸದಾ ಹೇಳುತ್ತಿದೆ~ ಎಂದು ಅವರು ತಿಳಿಸಿದರು.

`ನಾನು ಏನೂ ತಪ್ಪು ಮಾಡಿಲ್ಲ, ಆದರೂ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ವಿರುದ್ಧ ವಿನಾ ಕಾರಣ ಆರೋಪ ಮಾಡಲಾಗಿದೆ. ಹೀಗೆ ಆರೋಪ ಮಾಡಿದವರಿಗೆ ಮುಂದಿನ ದಿನಗಳಲ್ಲಿ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಡುವುದು ನಿಶ್ಚಿತ.

ಇಂತಹ ಆರೋಪ ಎದುರಾದಾಗ ಮಾಧ್ಯಮಗಳು ನಡೆದುಕೊಂಡ ರೀತಿಯಿಂದಲೂ ನನಗೆ ಬಹಳ ನೋವಾಗಿದೆ. ಈ ಆಘಾತದಿಂದ ಹೊರಬರಲು ನನಗೆ ಇಷ್ಟು ದಿನ ಬೇಕಾಯಿತು. ಹಾಗಾಗಿ ತವರು ಜಿಲ್ಲೆಗೆ ಆಗಮಿಸಿರಲಿಲ್ಲ~ ಎಂದು ಪಾಲೆಮಾರ್ ತಿಳಿಸಿದರು.

`ನನ್ನ ಕ್ಷೇತ್ರದ ಜನ ನನ್ನ ಕೈಬಿಡುವುದಿಲ್ಲ ಎಂಬ ದೃಢ ವಿಶ್ವಾಸ ನನ್ನದು. ನಾನು ನಿರಪರಾಧಿಯಾಗಿಯೇ ಹೊರಬರುವುದರ ಬಗ್ಗೆ ಸಹ ನನ್ನ ಕ್ಷೇತ್ರದ ಜತೆಗೆ ವಿಶ್ವಾಸ ಇದೆ. ಅವರ ಈ ವಿಶ್ವಾಸದಿಂದಾಗಿಯೇ ನಾನು ಮತ್ತೆ ನನ್ನ ಕ್ಷೇತ್ರದಲ್ಲಿ ಜನ ಸಂಪರ್ಕಕ್ಕೆ ಇಳಿಯುತ್ತಿದ್ದೇನೆ~ ಎಂದು ಪಾಲೆಮಾರ್ ನುಡಿದರು.

ಎಲ್ಲಾ ಆರೋಪಗಳಿಂದ ಮುಕ್ತವಾದ ಬಳಿಕ ಮತ್ತೆ ಸಚಿವ ಸ್ಥಾನ ನಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದಷ್ಟೇ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.