ADVERTISEMENT

ತರಬೇತಿ ಕೇಂದ್ರಗಳು ಅತಂತ್ರ

ಎಎನ್‌ಎಂ ಪ್ರವೇಶ ಪ್ರಕ್ರಿಯೆಗೆ ಗ್ರಹಣ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST
ಉಡುಪಿ ನಗರದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ	– ಪ್ರಜಾವಾಣಿ ಚಿತ್ರ/ ಹೇಮನಾಥ್‌ ಪಡುಬಿದ್ರಿ
ಉಡುಪಿ ನಗರದಲ್ಲಿರುವ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ – ಪ್ರಜಾವಾಣಿ ಚಿತ್ರ/ ಹೇಮನಾಥ್‌ ಪಡುಬಿದ್ರಿ   

ಉಡುಪಿ: ನಿಗದಿತ ಅವಧಿ ಮುಗಿದು ಆರು ತಿಂಗಳು ಕಳೆದರೂ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ (ಆಕ್ಸಿ­ಲರಿ ನರ್ಸಸ್‌ ಮಿಡ್‌ವೈಫರಿ, ಎ­ಎನ್‌ಎಂ) ತರಬೇತಿ ಕೋರ್ಸ್‌ಗೆ ಪ್ರವೇಶ ನೀಡುವ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ರಾಜ್ಯದ­ಲ್ಲಿ­ರುವ ಸುಮಾರು ಅರವತ್ತಕ್ಕೂ ಅಧಿಕ ತರಬೇತಿ ಕೇಂದ್ರಗಳು ಅತಂತ್ರವಾಗಿವೆ.

ರಾಜ್ಯದ 28 ಜಿಲ್ಲೆಗಳಲ್ಲಿ ಎಎನ್‌ಎಂ ತರಬೇತಿ ಕೇಂದ್ರಗಳಿದ್ದು ಸರ್ಕಾರ ಕೋಟ್ಯಂ­ತರ ರೂಪಾಯಿ ವೆಚ್ಚ ಮಾಡಿ ಮೂಲ ಸೌಕರ್ಯ ಒದಗಿಸಿದೆ. ನೂರಾರು ಸಿಬ್ಬಂದಿ ಮತ್ತು ಅರೆಕಾಲಿಕ ಸಿಬ್ಬಂದಿ­ಯನ್ನೂ ನಿಯೋಜನೆ ಮಾಡಿದೆ. ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಜೂನ್‌ ತಿಂಗಳಿನಲ್ಲಿಯೇ ಪ್ರವೇಶ ಪ್ರಕ್ರಿಯೆ ಆರಂಭವಾಗಬೇಕಿತ್ತು.

ಪ್ರವೇಶ ನೀಡಲು ಕೇಂದ್ರಗಳು ಸಿದ್ಧತೆ ಮಾಡಿಕೊಂಡಿದ್ದವು. ಆದರೆ ಎಲ್ಲ ತರಬೇತಿ ಕೇಂದ್ರಗಳ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯು­ಕ್ತರು ಮುಂದಿನ ಆದೇಶ ನೀಡುವ ವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಸೂಚನೆ ನೀಡಿದ್ದರು. ಆದರೆ, ಶೈಕ್ಷಣಿಕ ವರ್ಷದ ಅರ್ಧ ಅವಧಿ ಮುಗಿದರೂ ಇನ್ನೂ ಯಾವುದೇ ನಿರ್ಧಾರವನ್ನು ಇಲಾಖೆ ಕೈಗೊಂಡಿಲ್ಲ.

ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅವಧಿ ಸೆಪ್ಟೆಂಬರ್‌ ತಿಂಗಳಿಗೆ ಮುಗಿಯಲಿದೆ. ದ್ವಿತೀಯ ವರ್ಷದ ಪರೀಕ್ಷೆ ಮುಗಿದರೆ ಈ ಕೇಂದ್ರಗಳಿಗೆ ಬೀಗ ಹಾಕುವುದು ಅನಿ­ವಾರ್ಯವಾಗಲಿದೆ. ಖಾಸಗಿ ತರ­ಬೇತಿ ಕೇಂದ್ರಗಳದ್ದೂ ಇದೇ ಪರಿಸ್ಥಿತಿ ಇದೆ.
ಇಲಾಖೆಯ ಯೋಜನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಸೇರಿ­ದಂತೆ ಇಲಾಖೆ ಮತ್ತು ಜನರ ಮಧ್ಯೆ ಕೊಂಡಿ­ಯಾಗಿ ಆರೋಗ್ಯ ಸಹಾಯಕಿ­ಯರು ಕೆಲಸ ಮಾಡುತ್ತಾರೆ.

ಮೊದಲು ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿತ್ತು, ಎರಡು ವರ್ಷದ ನಂತರ ಇದನ್ನು ಪರಿಷ್ಕರಿಸಿ ಪಿಯುಸಿಗೆ ಏರಿಸಲಾಯಿತು. ಕೋರ್ಸ್‌ ಅವಧಿ­ಯನ್ನು ಒಂದೂವರೆ ವರ್ಷದಿಂದ ಎರಡು ವರ್ಷಕ್ಕೆ ನಿಗದಿ ಮಾಡಲಾಗಿದೆ. ಈಗ ಏಕಾಏಕಿ ಪ್ರವೇಶವನ್ನು ಸ್ಥಗಿತ­ಗೊಳಿಸಿರುವುದು ಹಲವು ಅನುಮಾನ­ಗಳಿಗೆ ಕಾರಣವಾಗಿದೆ.

‘ಮುಂದಿನ ಆದೇಶದ ವರೆಗೆ ಕಾಯಿರಿ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುತ್ತೋಲೆ ಕಳುಹಿಸಿ ಹಲವು ತಿಂಗಳು ಕಳೆದರೂ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿರುವುದಕ್ಕೆ ವೈದ್ಯರು, ಸಿಬ್ಬಂದಿ ಹಾಗೂ ಕೋರ್ಸ್‌ ಸೇರ ಬಯಸುವ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಇಂಡಿಯನ್‌ ನರ್ಸಿಂಗ್‌ ಕೌನ್ಸಿಲ್‌ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಎಎನ್‌ಎಂ ತರಬೇತಿಯನ್ನು ಸ್ಥಗಿತ­ಗೊಳಿ­ಸು­ವಂತೆ ಸೂಚನೆ ನೀಡಿದೆ. ಎಎನ್ಎಂ ಬದಲಾಗಿ ಜಿಎನ್ಎಂ (ಜನರಲ್‌ ನರ್ಸಿಂಗ್‌ ಮಿಡ್‌ವೈಫರಿ)  ತರಬೇತಿ ಆರಂ­ಭಿಸುವಂತೆ ತಿಳಿಸಿದೆ. ಆದರೆ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಇಲಾ­ಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಎನ್‌ಎಂ ಕೋರ್ಸ್‌ ಸಂಪೂರ್ಣ­ವಾಗಿ ಸ್ಥಗಿತಗೊಳಿಸಿದರೆ ಈಗಾಗಲೇ ಕೋರ್ಸ್‌ ಮುಗಿಸಿ ಉದ್ಯೋಗ ಅವಕಾಶ­ಕ್ಕಾಗಿ ಕಾದು ಕುಳಿತಿರುವ ಆಕಾಂಕ್ಷಿಗಳ ಸ್ಥಿತಿ ಏನು? ಜಿಎನ್‌ಎಂ ಕೋರ್ಸ್‌ ಪೂರೈ­ಸಿ­ದವರನ್ನು ಮಾತ್ರ ಉದ್ಯೋಗಕ್ಕೆ ಪರಿಗಣಿ­ಸಿದರೆ ಎಎನ್‌ಎಂ ಕೋರ್ಸ್‌ ಮಾಡಿರುವವರ ಗತಿ ಏನು, ಎಎನ್‌ಎಂ ಅರ್ಹತೆಯನ್ನು ಇನ್ನು ಮುಂದೆ ಈ ಹುದ್ದೆಗೆ ಪರಿಗಣಿಸುವುದಿಲ್ಲವೇ? ಈ ರೀತಿಯ ಹಲವು ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಬೇಕಿದೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಂಸ್ಥೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿದರೂ ಅಧಿಕಾರಿಗಳಿಂದ ಉತ್ತರ ಸಿಗಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.