ADVERTISEMENT

ತೀವ್ರ ವಿದ್ಯುತ್‌ ಅಭಾವ ಆತಂಕ

ಕಲ್ಲಿದ್ದಲು ಕೊರತೆ: ಕೇಂದ್ರ ಸರ್ಕಾರದ ಅಸಹಕಾರ?

ರಾಜೇಶ್ ರೈ ಚಟ್ಲ
Published 2 ಡಿಸೆಂಬರ್ 2017, 19:38 IST
Last Updated 2 ಡಿಸೆಂಬರ್ 2017, 19:38 IST
ತೀವ್ರ ವಿದ್ಯುತ್‌ ಅಭಾವ ಆತಂಕ
ತೀವ್ರ ವಿದ್ಯುತ್‌ ಅಭಾವ ಆತಂಕ   

ಬೆಂಗಳೂರು: ಕಲ್ಲಿದ್ದಲು ಕೊರತೆಯಿಂದ ರಾಯಚೂರು (ಆರ್‌ಟಿಪಿಎಸ್) ಮತ್ತು ಬಳ್ಳಾರಿ (ಬಿಟಿಪಿಎಸ್) ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ನಿರೀಕ್ಷಿತ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗದೆ ಇರುವುದರಿಂದ ತೀವ್ರ ವಿದ್ಯುತ್‌ ಅಭಾವದ ಆತಂಕ ಎದುರಾಗಿದೆ.

ಕೇಂದ್ರ ಸರ್ಕಾರ ಸ್ವಾಮ್ಯದ ಕೋಲ್ ಇಂಡಿಯಾ ಕಂಪೆನಿ (ಸಿಐಎಲ್‌) ಕಲ್ಲಿದ್ದಲು ಪೂರೈಕೆ ಒಪ್ಪಂದದಂತೆ (ಸಿಎಸ್‌ಎ) ಕಲ್ಲಿದ್ದಲು ಒದಗಿಸುತ್ತಿಲ್ಲ. ಒಡಿಶಾದ ಗೋಗ್ರಪಳ್ಳಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರದೇಶದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ಮಂಜೂರಾತಿ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ಕಾರಣಕ್ಕೂ ವ್ಯತ್ಯಯ ಉಂಟಾಗದಂತೆ ಕ್ರಮ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಅಗತ್ಯ ಪ್ರಮಾಣದ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಜೊತೆಗೆ, ವಿದ್ಯುತ್‌ ಖರೀದಿಗೂ ತೀರ್ಮಾನಿಸಿದೆ. ಈಗಾಗಲೇ ಪ್ರತಿ ಯುನಿಟ್‌ಗೆ ತಲಾ ₹ 4.08 ದರದಲ್ಲಿ 1,000 ಮೆಗಾ ವಾಟ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು, 500 ಮೆಗಾ ವಾಟ್‌ ಈಗಾಗಲೇ ಪೂರೈಕೆಯಾಗುತ್ತಿದೆ.

ADVERTISEMENT

ಸಿಎಸ್‌ಎ ಒಪ್ಪಂದದಂತೆ ಆರ್‌ಟಿಪಿಎಸ್‌ಗೆ ಪ್ರತಿ ವರ್ಷ 90 ಲಕ್ಷ ಟನ್‌ ಕಲ್ಲಿದ್ದಲು ಬೇಕಾಗಿದೆ. ಸಿಐಎಲ್‌ ಅಡಿಯಲ್ಲಿರುವ ವೆಸ್ಟರ್ನ್‌ ಕೋಲ್‌ ಕಂಪೆನಿ (ಡಬ್ಲ್ಯುಸಿಎಲ್‌) 24.75 ಲಕ್ಷ ಟನ್‌ ಮತ್ತು ಮಹಾನದಿ ಕೋಲ್‌ ಕಂಪೆನಿ (ಎಂಸಿಎಲ್‌) 25.75 ಲಕ್ಷ ಟನ್‌ ಪೂರೈಸಬೇಕು. ಆಂಧ್ರ ಪ್ರದೇಶದ ಸಿಂಗರೇಣಿ ಕಂಪೆನಿ 30.10 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಬೇಕು. ಉಳಿದ 10 ಲಕ್ಷ ಟನ್‌ ಪೂರೈಕೆಗೆ ಸಿಂಗರೇಣಿ ಜೊತೆಗೆ ಒಡಂಬಡಿಕೆ (ಎಂಓಯು) ಮಾಡಿಕೊಂಡು ಶೇ 25ರಷ್ಟು ಹೆಚ್ಚು ದರ ನೀಡಿ ಖರೀದಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

‘ಆದರೆ, ಏಪ್ರಿಲ್‌ನಿಂದ ಈವರೆಗೆ (ನವೆಂಬರ್‌ ಅಂತ್ಯ) ಡಬ್ಲ್ಯುಸಿಎಲ್‌ 15.75 ಲಕ್ಷ ಟನ್‌ ಕಲ್ಲಿದ್ದಲು ಪೂರೈಸಬೇಕಿತ್ತು. ಕೇವಲ 7.3 ಲಕ್ಷ ಟನ್‌ (ಶೇ 46) ಪೂರೈಕೆ ಮಾಡಿದೆ. ಎಂಸಿಎಲ್‌ 16.52 ಲಕ್ಷ ಟನ್‌ ಬದಲು 15.70 ಲಕ್ಷ ಟನ್‌ ಸರಬರಾಜು ಮಾಡಿದೆ’ ಎಂದು ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ವ್ಯವಸ್ಥಾಪಕ ನಿರ್ದೇಶಕ ಜಿ. ಕುಮಾರ ನಾಯಕ ‘ಪ್ರಜಾವಾಣಿ’ಗೆ’ ತಿಳಿಸಿದರು.

‘ಬಿಟಿಪಿಎಸ್ 1 ಮತ್ತು 2ನೇ ಘಟಕಕ್ಕೆ 52 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆ ಸಂಬಂಧ ಸಿಂಗರೇಣಿ ಜತೆ ಎಂಒಯು ಮಾಡಿಕೊಳ್ಳಲಾಗಿದೆ. ಆದರೆ, ಈ ಘಟಕಗಳಿಗೂ ಪೂರ್ಣ ಪ್ರಮಾಣದಲ್ಲಿ ಕಲ್ಲಿದ್ದಲು ಲಭ್ಯ ಇಲ್ಲದಿರುವುದರಿಂದ, ಈ ಹಿಂದೆಯೇ ಒಂದು ಘಟಕ ಸ್ಥಗಿತಗೊಳಿಸಲಾಗಿತ್ತು. ಎರಡು ದಿನಗಳ ಹಿಂದೆ ಮೂರನೇ ಘಟಕದ ಕಾರ್ಯಾಚರಣೆಯನ್ನೂ ನಿಲ್ಲಿಸಲಾಗಿದ್ದು, ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ತಿಳಿಸಿದರು.

‘ಕಲ್ಲಿದ್ದಲು ಕೊರತೆಯಿಂದ ಯರಮರಸ್‌ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್‌) ಇದುವರೆಗೆ ಕಾರ್ಯಾರಂಭವನ್ನೇ ಮಾಡಿಲ್ಲ. ಕಲ್ಲಿದ್ದಲು ಸಂಗ್ರಹ ಇಲ್ಲದೆ ಆರ್‌ಟಿಪಿಎಸ್‌ನ ಏಳು ಘಟಕಗಳಲ್ಲಿ ಎರಡು ಸ್ಥಗಿತಗೊಂಡಿವೆ. ಒಂದು ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ನಿಲ್ಲಿಸಲಾಗಿದೆ. 5 ಘಟಕಗಳು ನಿತ್ಯ ಪೂರೈಕೆಯಾಗುವ ಕಲ್ಲಿದ್ದಲು ಅವಲಂಬಿಸಿ ಕಾರ್ಯಾಚರಿಸುತ್ತಿವೆ. ಕಲ್ಲಿದ್ದಲು ಪೂರೈಕೆಯಲ್ಲಿ ತುಸು ಏರುಪೇರಾದರೂ ಉತ್ಪಾದನೆ ಸ್ಥಗಿತಗೊಳಿಸಬೇಕಾದ ಸ್ಥಿತಿ ಇದೆ’ ಎಂದರು.

‘ನಿತ್ಯ 8–9 ರೇಕು (ಒಂದು ರೇಕು– 59 ಬೋಗಿಗಳಿರುವ ಸರಕು ಸಾಗಣೆ ರೈಲು, ಸುಮಾರು 3,600 ಟನ್‌) ಕಲ್ಲಿದ್ದಲು ಪೂರೈಸುವಂತೆ ಸಿಂಗರೇಣಿಗೆ ಮನವಿ ಮಾಡಲಾಗಿದೆ. ಆದರೆ, ಅಕ್ಟೋಬರ್‌ ಅಂತ್ಯದವರೆಗೆ 4 ರೇಕು ಪೂರೈಕೆ ಆಗುತ್ತಿತ್ತು. ಕಳೆದ ತಿಂಗಳು ನಿತ್ಯ 5 ರೇಕು ಬಂದಿದೆ. ಡಿಸೆಂಬರ್‌ನಿಂದ ಹೆಚ್ಚುವರಿ ಇನ್ನೂ ಒಂದು ರೇಕು ನೀಡುವಂತೆ ಪತ್ರ ಬರೆಯಲಾಗಿದೆ’ ಎಂದು ವಿವರಿಸಿದರು.

ಬಿಟಿಪಿಎಸ್‌ನ ತಲಾ 500 ಮೆಗಾ ವಾಟ್ ಸಾಮರ್ಥ್ಯದ ಎರಡು ಘಟಕಗಳಿಗೆ ಮಹಾರಾಷ್ಟ್ರದಲ್ಲಿರುವ ನಿಕ್ಷೇಪದಿಂದ ಕಲ್ಲಿದ್ದಲು ಸರಬರಾಜು ಆಗಬೇಕಿತ್ತು. ಅಲ್ಲಿ ಗಣಿಗಾರಿಕೆ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಸಿಂಗರೇಣಿ ಜೊತೆ ಎಂಒಯು ಮಾಡಿಕೊಂಡು ಈ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಗೆ ವ್ಯವಸ್ಥೆ ಮಾಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಈಗಾಗಲೇ ₹ 900 ಕೋಟಿಗೂ ಹೆಚ್ಚು ಹೊರೆ ಬಿದ್ದಿದೆ.

‘ವೈಟಿಪಿಎಸ್‌, ಬಿಟಿಪಿಎಸ್‌ 3ನೇ ಘಟಕ ಮತ್ತು ಛತ್ತೀಸಗಡದ ಗೋದ್ನಾದಲ್ಲಿ ಆರಂಭಿಸುವ ಘಟಕಕ್ಕೆ ಗೋಗ್ರಪಳ್ಳಿಯ ನಿಕ್ಷೇಪದಿಂದ ಕಲ್ಲಿದ್ದಲು ಪೂರೈಕೆಗೆ ಅನುಮತಿ ಕೇಳಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಅನುಮತಿ ನೀಡಬೇಕಿದೆ’ ಎಂದರು.
*
ಕಲ್ಲಿದ್ದಲು ಮಹಾರಾಷ್ಟ್ರ ಪಾಲು?
‘ಕೋಲ್‌ ಇಂಡಿಯಾ ಕಂಪೆನಿ 19–10 ರೇಕು ಸಾಗಣೆ ಮಾಡುವಾಗ ಕರ್ನಾಟಕಕ್ಕೆ ಎರಡು ದಿನಗಳಿಗೆ ತಲಾ ಮೂರು ರೇಕು ಕೊಡಲು ಹಿಂದೇಟು ಹಾಕುತ್ತಿದೆ. ಆದರೆ, 15–18 ರೇಕು ಮಹಾರಾಷ್ಟಕ್ಕೆ ಪೂರೈಕೆಯಾಗುತ್ತಿದೆ. ರಾಜ್ಯಕ್ಕೆ ಪೂರೈಕೆ ಆಗಬೇಕಿದ್ದ ಕಲ್ಲಿದ್ದಲನ್ನೂ ಮಹಾರಾಷ್ಟ್ರ ಬಲವಂತವಾಗಿ ಪಡೆಯುತ್ತಿದ್ದು, ಅಲ್ಲಿಂದ ಗುಜರಾತಿಗೆ ಸಾಗಣೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.
*
ಕಲ್ಲಿದ್ದಲು ಒದಗಿಸುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಎಷ್ಟೆ ತೊಂದರೆಯಾದರೂ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ಹೆಚ್ಚಿನ ದರ ನೀಡಿ ವಿದ್ಯುತ್ ಖರೀದಿಸಲಾಗುವುದು
ಡಿ.ಕೆ.ಶಿವಕುಮಾರ್,
ಇಂಧನ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.