ADVERTISEMENT

ತುಂಗಭದ್ರೆ ತುಂಬಿದರೂ ದಟ್ಟ ಬರದ ಛಾಯೆ

ಬರ ಬದುಕು ಭಾರ: ಕೊಪ್ಪಳ ಜಿಲ್ಲೆ - 3

ಶರತ್‌ ಹೆಗ್ಡೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಕೊಪ್ಪಳ: `ಜಿಲ್ಲೆಯಲ್ಲಿ ಬರ ಇಲ್ಲ ಎಂದು ಪೇಪರ್‌ನಲ್ಲಿ ಓದಿದ್ದೀವಿ. ನೋಡಿ, ಇದನ್ನು ಏನಂತ ಕರೀತೀರಿ?

ತಾಲ್ಲೂಕಿನ ಗುಡ್ಲಾನೂರು ಗ್ರಾಮದ ರೈತ ಮಂಜುನಾಥ ಹೀಗೆ ಪ್ರಶ್ನಿಸಿದ...

-ಇದು ಜಿಲ್ಲೆಯ ಅಲ್ಲಲ್ಲಿ ಹಸಿರಿನ ನಡುವೆಯೂ ಕಾಣುತ್ತಿರುವ ಬರ ಪೀಡೆಯ ಛಾಯೆ, ರೈತರ ಹತಾಶೆಯ ಚಿತ್ರ.

ತುಂಗಭದ್ರೆ ತುಂಬಿ ಹರಿದು ಅಣೆಕಟ್ಟೆ ಭರ್ತಿಯಾಗಿದೆ. ಜಿಲ್ಲೆಯ ಒಂದು ಭಾಗದಲ್ಲಿ ಮಾತ್ರ ಹಸಿರು ಕಾಣಿಸಿಕೊಂಡಿದೆ. ಆದರೆ, ಜಿಲ್ಲೆಯಲ್ಲಿ ಜೂನ್ ಆರಂಭದ ಬಳಿಕ ಬೇಸಾಯಕ್ಕಾಗುವಷ್ಟು ಮಳೆ ಸುರಿದಿಲ್ಲ. ಮಳೆಗಾಲ ಪೂರ್ತಿ ಮುಗಿಯುವ ಮುನ್ನವೇ ಬರದ ಛಾಯೆ ಆವರಿಸುವ ಎಲ್ಲ ಲಕ್ಷಣಗಳು ದಟ್ಟವಾಗಿವೆ.
ಜಿಲ್ಲೆಯಲ್ಲಿ ಸಂಚರಿಸಿದ `ಪ್ರಜಾವಾಣಿ'ಗೆ ಕಂಡ ಕೆಲವು ಚಿತ್ರಗಳು ಹೀಗಿವೆ.

ಕೊಪ್ಪಳ ತಾಲ್ಲೂಕು: ಆರಂಭಿಕ ಮಳೆಯಿಂದ ಖುಷಿಯಾದ ರೈತರು ಸಮೃದ್ಧವಾಗಿ ಬಿತ್ತನೆ ಮಾಡಿದ್ದಾರೆ. ತುಂಗಭದ್ರಾ ಅಣೆಕಟ್ಟೆಯ ಹಿನ್ನೀರು ಪ್ರದೇಶಗಳಾದ ಬೆಟಗೇರಿ, ಡಂಬ್ರಳ್ಳಿ, ಬಿಸರಹಳ್ಳಿ, ಬೇಳೂರು ಭಾಗಗಳಲ್ಲಿ ಹಸಿರು ನಳನಳಿಸುತ್ತಿದೆ.

ಕೊಪ್ಪಳದಿಂದ ಹಿರೇಸಿಂಧೋಗಿ, ಬೆಟಗೇರಿಗೆ ಹೋಗುವಾಗ ರಸ್ತೆಯ ಎಡಭಾಗದಲ್ಲಿ ಸಮೃದ್ಧ ಹಸಿರು, ಬಲಭಾಗದಲ್ಲಿ ಸೊರಗಿದ ಬೆಳೆ ಕಾಣುತ್ತಿದೆ. ರೈತರ ಪ್ರಕಾರ ಈ ಬೆಳೆ ಫಲ ನೀಡುವುದಿಲ್ಲ. ಮಳೆ ಹಾಗೂ ಅದೃಷ್ಟ ನಂಬಿ ಬಿತ್ತ್ದ್ದಿದೇವೆ ಎನ್ನುತ್ತಾರೆ.

ತಾಲ್ಲೂಕಿನ ಕಿನ್ನಾಳ ರಸ್ತೆಯ ಚಿಲವಾಡಗಿ ಸಮೀಪ ಸೀಮೆ ಎಂಬಲ್ಲಿ ವೆಂಕಟೇಶ್ ಅವರ ಹೊಲದಲ್ಲಿ ಹಾಕಿದ ನಾಲ್ಕು ಕೊಳವೆ ಬಾವಿಗಳ ಪೈಕಿ ಮೂರು ವಿಫಲವಾಗಿವೆ. `ಇಷ್ಟು ವರ್ಷ ಆಳುಗಳ ಮೂಲಕ ಶೇಂಗಾ ಕೀಳಬೇಕಿತ್ತು. ಈ ಬಾರಿ ಹೊಲವನ್ನು ಹರಗಿಸಿ (ಉಳುಮೆ ಮಾಡಿ) ಕಿತ್ತಿದ್ದೇವೆ, 40 ಚೀಲ ಬರುವಲ್ಲಿ ಕೇವಲ 15 ಚೀಲ ಉತ್ಪಾದನೆ ಬಂದಿದೆ' ಎಂದರು ವೆಂಕಟೇಶ್.

ಕುಷ್ಟಗಿ: ತಾಲ್ಲೂಕು ಬಹುತೇಕ ಕೆಂಪುಮಣ್ಣು ಪ್ರದೇಶ. ಶೇ 20ರಷ್ಟು ಎರೆಭೂಮಿ (ಕಪ್ಪುಮಣ್ಣು) ಇದೆ. ಇಲ್ಲಿ ಕಳೆದ ವರ್ಷವೂ ಸಮರ್ಪಕ ಬಿತ್ತನೆ ಆಗಲಿಲ್ಲ. ಈ ಬಾರಿ ಬಿತ್ತನೆ ಚೆನ್ನಾಗಿ ಆದರೂ ಮಳೆ ಇಲ್ಲದೇ ಬೆಳೆ ಉಳಿಯುವ ಖಾತ್ರಿ ಇಲ್ಲ. ಸಜ್ಜೆ ಮತ್ತು ಮೆಕ್ಕೆಜೋಳ ತೆನೆಕಟ್ಟುವ ಕಾಲದಲ್ಲಿ ಮಳೆ ಕೈಕೊಟ್ಟಿದೆ. 

ತಾಲ್ಲೂಕಿನ ಹನುಮಸಾಗರ, ಹನುಮನಾಳು ಭಾಗದಲ್ಲಿ ತಾಲ್ಲೂಕಿನ ಬೆಳೆ ಸ್ಥಿತಿಗತಿ ಸ್ವಲ್ಪ ಉತ್ತಮ. ಮಳೆ ಬಂದರೆ ಇನ್ನಷ್ಟು ಸುಧಾರಿಸಬಹುದು ಎಂಬುದು ರೈತರ ಅಭಿಪ್ರಾಯ.

ಯಲಬುರ್ಗಾ: ತಾಲ್ಲೂಕಿನ ಕೆಲವೆಡೆ ಮಳೆ ಹಿನ್ನಡೆಯ ಆತಂಕದಿಂದ ಮಂಗಳೂರು, ರ‌್ಯಾವಣಕಿ, ಕುಕನೂರು, ಬೇವೂರು ಸೇರಿದಂತೆ ಹಲವೆಡೆ ರೈತರು ಬಿತ್ತನೆಗೆ ಮುಂದಾಗಿಲ್ಲ. ಕೊಳವೆಬಾವಿ ಮೂಲಕವಾದರೂ ನೀರುಣಿಸಲು ಸಮರ್ಪಕ ವಿದ್ಯುತ್ ಪೂರೈಕೆಯೂ ಇಲ್ಲ.

ಗಂಗಾವತಿ: ಬತ್ತದ ಕಣಜದಲ್ಲಿ ಈ ಬಾರಿ ಬಹುತೇಕ ಸಮೃದ್ಧಿಯಿದೆ. ಮಳೆ ಇಲ್ಲವಾದರೂ ತುಂಗಭದ್ರೆಯ ಕೃಪೆಯಿಂದ ರೈತರ ಗದ್ದೆಗಳಲ್ಲಿ ಹಸಿರು ನಳನಳಿಸುತ್ತಿದೆ. ಭತ್ತ, ಕಬ್ಬು, ಬಾಳೆ ಚೆನ್ನಾಗಿ ಬೆಳೆದಿವೆ. ಬರ ಜಿಲ್ಲೆಗೆ ತಟ್ಟಿದರೂ ಅದನ್ನು ಎದುರಿಸುವ ಸಾಮರ್ಥ್ಯ ತಾಲ್ಲೂಕಿನ ರೈತರಿಗಿದೆ.

ಕೆಲವೆಡೆ ಸಮಸ್ಯೆ
ಜಿಲ್ಲೆಯ ಕೆಲವೆಡೆ ಬೆಳೆ ಬಾಡಿರುವ ಸಮಸ್ಯೆ ಇದೆ. ಅಳವಂಡಿ, ಕುಕನೂರು ಭಾಗದಲ್ಲಿ ಕೆಲವು ರೈತರು ತೊಂದರೆಗೊಳಗಾಗಿದ್ದಾರೆ. ಕೆಲವೆಡೆ ಎಲೆಕವಚ ರೋಗವೂ ಇದೆ. ಶೇ 50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗುವ ಸಾಧ್ಯತೆ ಇದ್ದರೆ ರೈತರಿಗೆ ಪೂರಕ ಸಬ್ಸಿಡಿ ನೀಡಲು ಇಲಾಖೆಯಲ್ಲಿ ಅವಕಾಶವಿದೆ. ಅಂತರ್ಜಲ ವಿಪರೀತ ಬಳಕೆಯಿಂದ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿತಮಿತವಾಗಿ ನೀರು ಬಳಸಿದರೆ ಕಡಿಮೆ ನೀರಿನಲ್ಲಿಯೂ ಬೆಳೆ ಬೆಳೆಯುವ ಸಾಮರ್ಥ್ಯ ಹೊಂದುತ್ತದೆ. ಕೆಲವೆಡೆ ವಿಪರೀತ ರಸಗೊಬ್ಬರ ಬಳಕೆಯಿಂದಲೂ ಬೆಳೆ ಹಾನಿಯಾಗಿದೆ.
-ಪದ್ಮಯ ನಾಯಕ್, ಜಂಟಿ ಕೃಷಿ ನಿರ್ದೇಶಕ

ಬ್ಯಾಂಕ್ ಸಾಲ ಬೇಡ
ಕಳೆದ ಬಾರಿ, ಈ ಬಾರಿ ಬೆಳೆ ಒಣಗಿ ಹೋಗಿದೆ. ಬ್ಯಾಂಕ್‌ನವರು ಬಂದರೆ ಏನು ತೋರಿಸಲಿ? ಖಾಲಿ ಭೂಮಿ ನೋಡಿ ಸಾಲ ಕೊಡುತ್ತಾರೆಯೇ? ಉಳ್ಳವರಿಂದ ರೊಕ್ಕ ಪಡೆದು ಬೇಸಾಯ ಮಾಡುವುದು ಅನಿವಾರ್ಯ. 4 ಎಕರೆ ಭೂಮಿಯಲ್ಲಿ ಹಾಕಿದ ಶೇಂಗಾ, ಹೆಸರು ಬೆಳೆ ಫಲ ದೇವರೇ ಬಲ್ಲ. ಬ್ಯಾಂಕ್ ಸಾಲ ಮಾಡಿ, ಇದ್ದ ಜಮೀನೂ ಹೋದರೆ ಮತ್ತೇನು ಗತಿ?
-ಗಿರಿಯಪ್ಪ ಬೆಳಗೆರೆ, ಯಲಬುರ್ಗಾ ತಾಲ್ಲೂಕು

ಕೃಷಿ ಭೂಮಿ ವಿವರ
* ಒಟ್ಟಾರೆ ಕೃಷಿ ಭೂಮಿ -2,52,500
* ಬಿತ್ತನೆ ಆದದ್ದು -2,41,724 (ಶೇ 95.73)
* ಸೆಪ್ಟೆಂಬರ್ ಮೊದಲ ವಾರದ ವಾಡಿಕೆ ಮಳೆ -309.25
* ಇದುವರೆಗೆ ಸುರಿದ ಮಳೆ- 272.03

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT