ದೇಶದ ಪ್ರಥಮ ಬೃಹತ್ ಯೋಜನೆ
ಹಾವೇರಿ: `ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಕಳೆದ 30-40 ವರ್ಷಗಳಿಂದ ನೆನೆಗುದಿಗೆ ಬಿದ್ದ, ಅದರಲ್ಲೂ ಅಪೂರ್ಣಗೊಂಡ ಯೋಜನೆಗಳಿಗೆ ಹೆಚ್ಚಿನ ಅನುದಾನ ಒದಗಿಸಿ ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ದೇಶದ ಪ್ರಥಮ ಬೃಹತ್ ತುಂತುರು ನೀರಾವರಿ ಯೋಜನೆಯಾದ ಶಿಗ್ಗಾವಿ ಏತ ನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಕ್ರವಾರ ನಾಡಿಗೆ ಅರ್ಪಣೆ ಮಾಡಿ ಮಾತನಾಡಿದರು.
ಕಡಿಮೆ ನೀರು ಬಳಕೆ ಮಾಡುವ ನೀರಾವರಿ ಯೋಜನೆಗಳ ಪ್ರಸ್ತಾವ ಬಂದರೆ, ಅವುಗಳಿಗೆ ತಕ್ಷಣವೇ ಅನುಮೋದನೆ ನೀಡಿ, ಹಣಕಾಸಿನ ನೆರವು ಕೊಡಿಸುವ ಭರವಸೆ ನೀಡಿದ ಅವರು, ಶಿಗ್ಗಾವಿ ಏತ ನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿಗೆ ಹಣಕಾಸಿನ ನೆರವು ನೀಡುವುದಾಗಿ ತಿಳಿಸಿದರು.
`ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದ 2.54 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಹೊಸದಾಗಿ ಬಹಳಷ್ಟು ನೀರಾವರಿ ಯೋಜನೆಗಳನ್ನು ಘೋಷಿಸಿ, ಅದಕ್ಕೆ ಹಣ ತೆಗೆದಿರಿಸಿದೆ. ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಲ್ಲದೇ ನಮ್ಮ ಅಧಿಕಾರಾವಧಿಯಲ್ಲೇ ಉದ್ಘಾಟನೆ ಮಾಡಿರುವ ಶ್ರೇಯಸ್ಸು ರಾಜ್ಯ ಬಿಜೆಪಿಗೆ ಸಲ್ಲುತ್ತದೆ~ ಎಂದರು.
`ಶಿಗ್ಗಾವಿ ಏತ ನೀರಾವರಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಈ ಯೋಜನೆಗೆ ಸರ್ಕಾರ ರೂ 238 ಕೋಟಿ ವೆಚ್ಚ ಮಾಡಿದೆ. ರೈತರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು. ಮುಂದಿನ ದಿನಮಾನಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಉತ್ಪಾದನೆ ಮಾಡುವಂತಹ ತಂತ್ರಜ್ಞಾನ ಜಾರಿಗೆ ತರಬೇಕಿದೆ~ ಎಂದರು.
ಜಿಲ್ಲೆಯ ಸವಣೂರು ತಾಲ್ಲೂಕಿನ ಹಲಸೂರು ಬಳಿ ಶಿಗ್ಗಾವಿ ಏತ ನೀರಾವರಿ ಯೋಜನೆಗಾಗಿ ವರದಾ ನದಿಗೆ ಹೊಂದಿಕೊಂಡು ನಿರ್ಮಿಸಲಾದ ಜಾಕ್‌ವೆಲ್ ಹಾಗೂ ಪಂಪ್‌ಹೌಸನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಉದ್ಘಾಟಿಸಿದರೆ, ಕೊಳವೆ ಮಾರ್ಗದ ಮೂಲಕ ಜಮೀನುಗಳಿಗೆ ನೀರು ಪೂರೈಸುವ ತುಂತುರು ನೀರಾವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಗಮನ ಹರಿಸಿ: ಈಗಾಗಲೇ ಘೋಷಿಸಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಬೇಕು. ಕೆರೆಕಟ್ಟೆಗಳ ಹೂಳು ತೆಗೆದು ಅವುಗಳಿಗೆ ನೀರು ತುಂಬಿಸುವತ್ತ ಗಮನ ಹರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಕ್ಕೆ ಸಲಹೆ ಮಾಡಿದರು.
ಸ್ವಾತಂತ್ರ್ಯದ ನಂತರದ ಯಾವ ಸರ್ಕಾರಗಳೂ ರೈತರ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅದೇ ಕಾರಣಕ್ಕೆ ರೈತರು ಇನ್ನೂ ತೊಂದರೆಯಲ್ಲಿದ್ದಾರೆ. ಅವರನ್ನು ಮೇಲೆತ್ತುವ ಏಕೈಕ ಉದ್ದೇಶದಿಂದ ತಾವು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ನೀರಾವರಿ ಕ್ಷೇತ್ರಕ್ಕೆ ಸುಮಾರು 30 ಸಾವಿರ ರೂ. ಖರ್ಚು ಮಾಡಲಾಗಿದೆ ಎಂದರು.
ಇದಕ್ಕೂ ಮುನ್ನ ಹಲಸೂರ ಬಳಿ ವರದಾ ನದಿಗೆ ಬ್ಯಾರೇಜ್ ನಿರ್ಮಿಸಲು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಗುದ್ದಲಿ ಪೂಜೆ ನೆರವೇರಿಸಿದರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖ ಅಂಶಗಳು
-ಒಟ್ಟು 9,900 ಹೆಕ್ಟೇರ್ (24,463 ಎಕರೆ) ಪ್ರದೇಶಕ್ಕೆ ತುಂತುರು ನೀರಾವರಿ ಸೌಲಭ್ಯ
-ಯೋಜನೆಯ ಒಟ್ಟು ವೆಚ್ಚ ರೂ 251.71 ಕೋಟಿ
-ವರದಾ ನದಿಯಿಂದ 1.50 ಟಿ.ಎಂ.ಸಿ.ನೀರು ಬಳಕೆ
-ಜಿಲ್ಲೆಯ ಶಿಗ್ಗಾವಿ, ಸವಣೂರು, ಹಾನಗಲ್ಲ ತಾಲ್ಲೂಕುಗಳ 23 ಗ್ರಾಮಗಳಿಗೆ ಪ್ರಯೋಜನ
-1287 ಕಿ.ಮೀ. ಕೊಳವೆ ಅಳವಡಿಕೆ.
-ದ್ವಿದಳ ಹಾಗೂ ವಾಣಿಜ್ಯ ಬೆಳೆಗಳ ಉತ್ಪಾದನೆಗೆ ಪೂರಕ
-ಎರಡು ವರ್ಷ ಸರ್ಕಾರದಿಂದಲೇ ನಿರ್ವಹಣೆ, ರೈತರಿಗೆ ಖರ್ಚು ಇಲ್ಲ
ಯೋಜನೆಯ ವೈಶಿಷ್ಟಗಳು
-ದೇಶದಲ್ಲಿಯೇ ಸರ್ಕಾರದ ಪ್ರಥಮ ಬೃಹತ್ ತುಂತುರು ನೀರಾವರಿ ಯೋಜನೆ
-ಕಾಲುವೆ ನಿರ್ಮಾಣದ ಸಮಸ್ಯೆ ಇಲ್ಲ
-ಸಂಪುಗಳಿಗೆ ಗುರುತ್ವಾಕರ್ಷಣೆ ಆಧಾರಿತ ಹೊಲಗಾಲುವೆ
-ವಿದ್ಯುತ್, ನೀರಿನ ಉಳಿತಾಯ
-ಕೃಷಿ ವೆಚ್ಚದಲ್ಲಿ ಕಡಿತ
-ಕಡಿಮೆ ನೀರಿನಲ್ಲಿ ಉತ್ತಮ ಫಸಲು
-ಸವಳು-ಜವಳು ಅಪಾಯವಿಲ್ಲ
-ಮಣ್ಣಿನ ಆರೋಗ್ಯದಲ್ಲಿ ಸುಧಾರಣೆ ತರಲು ಸಾಧ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.