ADVERTISEMENT

ತುಂಬಿ ತುಳುಕಿದ ಹರ್ಷ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬಹಳ ವರ್ಷಗಳ ನಂತರ ಸರ್ಕಾರ ನನ್ನನ್ನು ಗುರುತಿಸಿರುವುದು ಸಂತೋಷವಾಗಿದೆ. 58 ವರ್ಷದಿಂದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ಸರ್ಕಾರದಿಂದ ಗುರುತಿಸುವಿಕೆಗಾಗಿ ಎದುರು ನೋಡುತ್ತಿದ್ದೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರೊಂದಿಗೆ ಕೆಲಸ ಮಾಡಿದ್ದೆ. ಅವರ ಹೆಸರಿನ ಪ್ರಶಸ್ತಿ ನನಗೆ ಸಿಕ್ಕಿರುವುದು ಸಂತಸ ತಂದಿದೆ. ಇಂಥ ಪ್ರಶಸ್ತಿಗಳು ಪ್ರೋತ್ಸಾಹದಾಯಕವಾಗಿದ್ದು ಇನ್ನಷ್ಟು ಕೆಲಸ ಮಾಡಲು ಉತ್ಸಾಹ ತುಂಬುತ್ತವೆ. ಪುಟ್ಟಣ್ಣ ಒಬ್ಬ ಶ್ರೇಷ್ಠ ನಿರ್ದೇಶಕ. `ರತ್ನಗಿರಿ ರಹಸ್ಯ~ ಅವರೊಂದಿಗೆ ನಾನು ಕೆಲಸ ಮಾಡಿದಮೊದಲ ಚಿತ್ರ.
 -ಸಿ.ವಿ.ಶಿವಶಂಕರ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪುರಸ್ಕೃತರು

ತುಂಬಾ ಸಂತೋಷವಾಗುತ್ತಿದೆ. ಮಹಾನ್ ನಟನ ಹೆಸರಿನ ಪ್ರಶಸ್ತಿ ಪಡೆದಿದ್ದು ನಾನು ಕಲಾವಿದನಾಗಿದ್ದಕ್ಕೆ ಸಾರ್ಥಕವಾಯಿತು ಎನ್ನುವಂತೆ ಮಾಡಿದೆ. ಚಿತ್ರರಂಗಕ್ಕೆ ಪ್ರವೇಶ ಪಡೆದ ಆರಂಭದ ದಿನದಲ್ಲಿಯೇ `ಇಮ್ಮಡಿ ಪುಲಿಕೇಶಿ~, `ಕರುಳಿನ ಕರೆ~, `ಕೃಷ್ಣದೇವರಾಯ~, `ನಾಡಿನ ಭಾಗ್ಯ~ ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೆವು. ನಂತರ `ನೀ ನನ್ನ ಗೆಲ್ಲಲಾರೆ~, `ಹಾವಿನ ಹೆಡೆ~, `ಸಮಯದ ಗೊಂಬೆ~ ಸಿನಿಮಾಗಳಲ್ಲಿ ರಾಜಕುಮಾರ್ ಅವರೊಂದಿಗೆ ಖಳನಾಗಿ ನಟಿಸಿದ್ದೆ.  
 -ಆರ್.ಎನ್.ಸುದರ್ಶನ್, ಡಾ.ರಾಜ್‌ಕುಮಾರ್ ಪ್ರಶಸ್ತಿ ಪುರಸ್ಕೃತರು

ಖುಷಿ ಆಗ್ತಿದೆ. ನನ್ನ ಜೀವನದಲ್ಲಿ ಇದೇ ದೊಡ್ಡ ಪ್ರಶಸ್ತಿ. ಈಗಲಾದರೂ ಸರ್ಕಾರ ನನ್ನನ್ನು ಗುರುತಿಸಿದ್ದಕ್ಕೆ ಸಂತೋಷವಾಗುತ್ತಿದೆ. 
-ಎಸ್.ಡಿ.ಅಂಕಲಗಿ, ಡಾ.ವಿಷ್ಣುವರ್ಧನ್ ಪ್ರಶಸ್ತಿ ಪುರಸ್ಕೃತರು

ಕನ್ನಡ ಚಿತ್ರರಂಗದಲ್ಲಿ ಮಾಡಿದ ಅಪರೂಪದ ಪ್ರಯತ್ನವನ್ನು ಗುರುತಿಸಿ ನೀಡಿರುವ ಗೌರವವಿದು. ಕುವೆಂಪು ಅವರಂತಹ ಮಹಾನ್ ವ್ಯಕ್ತಿಯ ಬದುಕನ್ನು ಚಿತ್ರರೂಪದಲ್ಲಿ ದಾಖಲಿಸುವ ಪುಣ್ಯಕಾರ್ಯಕ್ಕೆ ದೊರಕಿದ ಪ್ರತಿಫಲ ಈ ಪ್ರಶಸ್ತಿ.
 -ಋತ್ವಿಕ್ ಸಿಂಹ, ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ `ರಸಋಷಿ~ ಚಿತ್ರದ ನಿರ್ದೇಶಕ

ಪ್ರಶಸ್ತಿ ಬರುತ್ತದೆ ಎಂದು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಎರಡನೇ ಸಲ ಅತ್ಯುತ್ತಮ ನಟಿ ಪ್ರಶಸ್ತಿ ಸಿಗುತ್ತಿದೆ ಎಂಬುದನ್ನು ನಂಬಲೂ ಆಗುತ್ತಿಲ್ಲ. ರೋಮಾಂಚನ ಮತ್ತು ಸಂತೋಷ ಎರಡೂ ಆಗುತ್ತಿದೆ 
-ಅನುಪ್ರಭಾಕರ್, ಅತ್ಯುತ್ತಮ ನಟಿ ಪ್ರಶಸ್ತಿ ಪುರಸ್ಕೃತರು

ಆನಂದ, ಪರಮಾನಂದ, ಪರಮಾತ್ಮಾನಂದ. `ಮಣಿ~, `ಮುಂಗಾರು ಮಳೆ~ ಚಿತ್ರಗಳಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಕೊಟ್ಟಿತ್ತು. ಈಗ `ಮನಸಾರೆ~ ಸರದಿ. ಇನ್ನೂ ಜವಾಬ್ದಾರಿಯಿಂದ ಸಿನಿಮಾ ಮಾಡಬೇಕಾಗಿದೆ. ರಾಜ್ಯ ಸರ್ಕಾರಕ್ಕೆ, ಜನತೆಗೆ ನಾನು ಋಣಿ.
-ಯೋಗರಾಜ ಭಟ್, ನಿರ್ದೇಶಕ

ಕನ್ನಡತನದ ಪ್ರತೀಕ ಕುವೆಂಪು ಅವರನ್ನು ಕುರಿತು ಮಾಡಿದ ಸಾಂಸ್ಕೃತಿಕ ಚಿತ್ರಕ್ಕೆ ರಾಜ್ಯಮಟ್ಟದ ಗೌರವ ಸಂದಿದೆ. ಕುವೆಂಪು ಅವರನ್ನು ಚಲನಚಿತ್ರ ರೂಪದಲ್ಲಿ ಚಿತ್ರಿಸುವ ವಿಶಿಷ್ಟ ಪ್ರಯತ್ನಕ್ಕೆ ಪ್ರಶಸ್ತಿ ದೊರಕಿರುವುದು ಹೆಮ್ಮೆ ಎನಿಸುತ್ತಿದೆ.
 -ಸಿ.ಆರ್.ಸಿಂಹ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.