ADVERTISEMENT

ತುಮಕೂರು ನಗರ ಡೆಂಗಿ ಪೀಡಿತ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 19:30 IST
Last Updated 8 ಜುಲೈ 2017, 19:30 IST
ತುಮಕೂರು ನಗರ ಡೆಂಗಿ ಪೀಡಿತ
ತುಮಕೂರು ನಗರ ಡೆಂಗಿ ಪೀಡಿತ   

ತುಮಕೂರು: ನಗರ ಡೆಂಗಿ ಪೀಡಿತ ನಗರವಾಗಿದ್ದು, ಮಹಾನಗರ ಪಾಲಿಕೆಯ 35 ವಾರ್ಡ್‌ಗಳ ಪೈಕಿ 22 ಅನ್ನು ಡೆಂಗಿ ಪೀಡಿತ ವಾರ್ಡ್‌ಗಳೆಂದು ಆರೋಗ್ಯ  ಇಲಾಖೆ ಗುರುತಿಸಿದೆ.

ಜ್ವರ ಪೀಡಿತರಿಂದ ನಗರದ ಖಾಸಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ನಗರದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದೆ ನೂರಾರು ಜನರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.

ನಗರ ಮಾತ್ರವಲ್ಲದೆ ಜಿಲ್ಲೆಯಲ್ಲೂ ಸಾಂಕ್ರಾಮಿಕ ಜ್ವರ ವ್ಯಾಪಕವಾಗಿ ಹರಡುತ್ತಿದೆ. ಈವರೆಗೆ 44 ಗ್ರಾಮಗಳನ್ನು ಡೆಂಗಿ ಪೀಡಿತ  ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ADVERTISEMENT

‘ಜಿಲ್ಲೆಯಲ್ಲಿ ಈವರೆಗೆ 145 ಡೆಂಗಿ ಪ್ರಕರಣಗಳು ದೃಢಪಟ್ಟಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ ತಿಳಿಸಿದ್ದಾರೆ.
‘ಎಲ್ಲ ಖಾಸಗಿ ಆಸ್ಪತ್ರೆಗಳು ಜ್ವರ ಪೀಡಿತರಿಂದ ತುಂಬಿ ಹೋಗಿವೆ. ಹಾಸಿಗೆ ಲಭ್ಯ ಇಲ್ಲದೆ ನನ್ನ ರೋಗಿಗಳನ್ನೆ ದಾಖಲಿಸಲು ನನಗೆ ಸಾಧ್ಯವಾಗುತ್ತಿಲ್ಲ.

ಎಷ್ಟೋ ಪ್ರಕರಣಗಳಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಬೆಂಗಳೂರಿಗೂ ಶಿಫಾರಸು ಮಾಡಲಾಗುತ್ತಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ರಂಗೇಗೌಡ ತಿಳಿಸಿದರು.

‘ಜಿಲ್ಲಾಸ್ಪತ್ರೆಯ ರಕ್ತ ಪ್ರಯೋಗಾಲಯದಲ್ಲಿ ಮ್ಯಾಕ್ ಎಲಿಸಾ ರಕ್ತ ಪರೀಕ್ಷೆಯಲ್ಲಿ ದೃಢಪಟ್ಟ ಪ್ರಕರಣಗಳನ್ನು ಮಾತ್ರ  ದಾಖಲೆಗಳಲ್ಲಿ ದಾಖಲಿಸಲಾಗುತ್ತಿದೆ ಎಂದರು.

***

ಬಾಲಕಿ ಸಾವು
ಗುಬ್ಬಿ:
  ತಾಲ್ಲೂಕಿನ ಕಸಬ ಹೋಬಳಿ ನಡುವಲು ಪಾಳ್ಯದ ಲತಾ ಅವರ ಪುತ್ರಿ, 3ನೇ ತರಗತಿ ವಿದ್ಯಾರ್ಥಿನಿ ಕೋಮಲಾ (8) ಡೆಂಗಿ ಜ್ವರದಿಂದ ಶನಿವಾರ ಸಾವಿಗೀಡಾಗಿದ್ದಾಳೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದಳು. ಡೆಂಗಿ ಜ್ವರದಿಂದ ಬಳಲುತ್ತಿದ್ದ ಬಾಲಕಿಯನ್ನು ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.