ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಆಗುತ್ತಿರುವುದರಿಂದ ತೃತೀಯ ರಂಗದ ಚಿಂತನೆ ಆರಂಭವಾಗಿದೆ. ಇದಕ್ಕೆ ಪೂರಕವಾಗಿ ಕೆಜೆಪಿಯನ್ನು ಸಂಘಟಿ ಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಬಿಜೆಪಿಯೊಂದಿಗೆ ಸ್ನೇಹ ಬೆಳೆಸುವುದಿಲ್ಲ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.
ರಾಜ್ಯಪಾಲರ ಭಾಷಣದ ಚರ್ಚೆಯಲ್ಲಿ ಭಾಗವಹಿಸಿ ಶುಕ್ರವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, `ರಾಜಕಾರಣ ನಿಂತ ನೀರಲ್ಲ. ಲೋಕಸಭಾ ಚುನಾವಣೆ ನಂತರ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಬಹುದು. ಅಲ್ಲಿಯವರೆಗೆ ಕಾದು ನೋಡುತ್ತೇವೆ. ಸೋಲಿನಿಂದ ಹತಾಶರಾಗದೆ ಪಕ್ಷ ಕಟ್ಟುವ ಕಾರ್ಯದಲ್ಲಿ ತೊಡಗುತ್ತೇವೆ' ಎಂದರು.
`ಕೆಜೆಪಿ ಬಗ್ಗೆ ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನ ಗಳು ನಡೆದಿರುವುದು ಸರಿಯಲ್ಲ. ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪಕ್ಷದಿಂದ ಹೊರ ಹೋಗುವ ವಾತಾವರಣ ಸೃಷ್ಟಿಸಿದ ಬಿಜೆಪಿಯವರು ಈಗಲಾದರೂ ಗೌರವದಿಂದ ಬದುಕಲು ನನಗೆ ಅವಕಾಶ ಮಾಡಿಕೊಡಬೇಕು' ಎಂದು ಮನವಿ ಮಾಡಿದರು.
`40 ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಏರಿಳಿತಗಳು, ಸವಾಲುಗಳನ್ನು ಎದುರಿಸಿದ್ದೇನೆ. ಬಿಜೆಪಿ ಯವರು ದುರುದ್ದೇಶದಿಂದ ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಕೆಜೆಪಿ ಸ್ಥಾಪಿಸಿ ಸೋಲಿನಲ್ಲೂ ಗೆಲುವು ಕಂಡಿದ್ದೇನೆ. ರಾಜಕಾರಣ ಕಾಯುವ ಆಟ. ಜನರ ಅಪೇಕ್ಷೆಯಂತೆ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ' ಎಂದರು.
ಕಾಂಗ್ರೆಸ್‌ಗೆ ಸಕಾರಾತ್ಮಕವಾದ ಜನಾದೇಶ ಬಂದಿಲ್ಲ. ವಿಶೇಷವಾದ ಸಂದರ್ಭದಿಂದಾಗಿ ಆ ಪಕ್ಷ ಅಧಿಕಾರಕ್ಕೆ ಬಂದಿದೆ. ಬಿಜೆಪಿ - ಕೆಜೆಪಿ ಮತಗಳು ಒಟ್ಟಿಗೆ ಸೇರಿದ್ದರೆ ಕಾಂಗ್ರೆಸ್‌ಗೆ 27-28 ಸ್ಥಾನಗಳು ಕಡಿಮೆ ಆಗುತ್ತಿದ್ದವು. ಮತದಾನದ ಅಂಕಿಅಂಶಗಳನ್ನು ನೋಡಿ ದರೆ ಕಾಂಗ್ರೆಸ್‌ಗಿಂತ ಪ್ರತಿಪಕ್ಷ ಗಳಿಗೆ ಹೆಚ್ಚಿನ ಮತಗಳು ಬಂದಿವೆ. ಹೀಗಾಗಿ ನಮ್ಮ ಮಾತಿಗೂ ಮನ್ನಣೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಎಸ್‌ವೈ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.