ಉಡುಪಿ: `ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ರೈತರ ಪರ ಪ್ರತಿಭಟನೆ ಮಾಡಿದ್ದು ತೋಳ ಕುರಿ ಕಾಯಲು ಹೋದಂತೆ ಇತ್ತು~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ರೈತರು ಭೂಮಿ ಉಳಿಸಿಕೊಳ್ಳಲು ಮಾಡಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಖೇಣಿ ಅವರು ಎಷ್ಟು ಮಂದಿ ರೈತರ ಭೂಮಿ ವಶಪಡಿಸಿಕೊಂಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ಹತ್ತು ರೂಪಾಯಿಗೆ ಖರೀದಿಸಿದ ರೈತರ ಭೂಮಿಯನ್ನು ಅವರು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ಸಿಬಿಐ ತನಿಖೆಯಾಗಲಿ: ಹಣ, ಜಾತಿ ಬಳಸಿ ಚುನಾವಣೆಯಲ್ಲಿ ಜಯ ಸಾಧಿಸಿರುವ ಕುರಿತು ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಚುನಾವಣಾ ಆಯೋಗ ಹಾಗೂ ರಾಜ್ಯಪಾಲರಿಗೂ ಈ ಬಗ್ಗೆ ದೂರು ನೀಡಲಾಗುತ್ತದೆ ಎಂದು ಹೇಳಿದರು.
ಮೊದಲ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಪ್ರಗತಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಆದರೆ ಕಾರ್ಖಾನೆಗಳು ಬರಲಿಲ್ಲ. ರೈತರು ಆ ಜಾಗದಲ್ಲಿ ಉಳುಮೆ ಮಾಡುವಂತಿಲ್ಲ. ಪರಿಹಾರವೂ ಸಿಕ್ಕಿಲ್ಲ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತುಮಕೂರಿನಲ್ಲಿ ಏರ್ಪಡಿಸಿದ್ದ ಔತಣಕೂಟದ ಚಿತ್ರೀಕರಣ ಮಾಡಲು ತೆರಳಿದ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ನಡೆದದ್ದು ಖಂಡನೀಯ. ಬಿಜೆಪಿ ಅಭ್ಯರ್ಥಿಯೇ ಔತಣಕೂಟದ ಬಗ್ಗೆ ಮಾಹಿತಿ ನೀಡಿದ್ದರು ಎಂಬ ಮಾಹಿತಿ ಇದೆ. ಅವರ ಕಡೆಯವರೇ ಹಲ್ಲೆ ನಡೆಸಿರುವ ಸಾಧ್ಯತೆಯೂ ಇದೆ ಎಂದು ಅವರು ಸಂಶಯವನ್ನು ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.