ಹುಬ್ಬಳ್ಳಿ: ಕೇರಳ ರಾಜ್ಯದಾದ್ಯಂತ 39 ಲಕ್ಷ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದರೊಂದಿಗೆ ಸಾಮಾಜಿಕವಾಗಿ ಹಾಗೂ ಕೌಟುಂಬಿಕ ವಲಯದಲ್ಲಿ ಅವರು ಸ್ವಾಭಿಮಾನದ ಜೀವನ ನಡೆಸಲು ನೆರವಾದ ‘ಕುಟುಂಬಶ್ರೀ’ ಯಶೋಗಾಥೆ ನಗರದಲ್ಲಿ ದೇಶಪಾಂಡೆ ಫೌಂಡೇಷನ್ ಹಮ್ಮಿಕೊಂಡಿರುವ ಅಭಿವೃದ್ಧಿ ಸಂವಾದದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳಲ್ಲಿ ಅಚ್ಚರಿ ಮೂಡಿಸಿತು.
ಕಾರ್ಯಕ್ರಮದ ಎರಡನೇ ದಿನವಾದ ಮಂಗಳವಾರ ಬೆಳಿಗ್ಗೆ ನಡೆದ ‘ಯೋಜನೆಗಳ ಒಂದುಗೂಡಿಸುವಿಕೆ’ ಎಂಬ ಗೋಷ್ಠಿಯಲ್ಲಿ ‘ಕುಟುಂಬಶ್ರೀ’ ಕುರಿತು ಮಾಹಿತಿ ನೀಡಿದ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಬಿ. ವತ್ಸಲಾ ಕುಮಾರಿ, ಮಹಿಳಾ ಅಭಿವೃದ್ಧಿ ಕುರಿತ ಗೋಷ್ಠಿಯಲ್ಲಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಯೋಜನೆಯ ವಿಸ್ತೃತ ಮಾಹಿತಿ ಒದಗಿಸಿದರು.
ಬಡ ಕುಟುಂಬಗಳ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದ ‘ಅಯಲ್ಕೂಟ್ಟಂ’ (ನೆರೆಮನೆ ಸಂಘಗಳು) ಪರಿಕಲ್ಪನೆ ಯಶಸ್ಸು ಕಂಡ ಬಗೆಯನ್ನು ವಿವರಿಸುತ್ತಿದ್ದಂತೆ ಎರಡೂ ಗೋಷ್ಠಿಗಳಲ್ಲಿ ಪ್ರೇಕ್ಷಕರು ಚಪ್ಪಾಳೆಯ ಮಳೆ ಸುರಿಸಿದರು. ‘ಕುಟುಂಬಶ್ರೀ’ ಯೋಜನೆಯ ಫಲಾನುಭವಿಗಳ ಮಕ್ಕಳು ‘ಬಾಲಸಭಾ’ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು ಇದು ಕೂಡ ರಾಜ್ಯದ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳುತ್ತಿದ್ದಂತೆ ಚಪ್ಪಾಳೆಯ ಸದ್ದು ಇನ್ನಷ್ಟು ಹೆಚ್ಚಾಯಿತು.
‘ಬಡತನವನ್ನು ನೀಗಿಸಲು ಯೂನಿಸೆಫ್ ಸಹಯೋಗದಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಹಮ್ಮಿಕೊಂಡ ಈ ಪ್ರಾಯೋಗಿಕ ಯೋಜನೆ ಅತ್ಯಂತ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಯಿತು. ಈಗ 39 ಲಕ್ಷ ಬಡ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದರು.
ಒಟ್ಟು ಒಂಬತ್ತು ಲಕ್ಷ ಮಂದಿ ಮಕ್ಕಳು ‘ಬಾಲಸಭೆ’ಗಳ ಮೂಲಕ ಗ್ರಾಮಗಳ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಧಾನವನ್ನು ವಿವರಿಸಿದ ಅವರು, ಬುದ್ಧಿಮಾಂದ್ಯ ಮಕ್ಕಳಿಗಾಗಿ ಕುಟುಂಬಶ್ರೀ ಯೋಜನೆಯ ಮೂಲಕ 55 ಶಾಲೆಗಳನ್ನು ನಡೆಸುತ್ತಿರುವುದಾಗಿಯೂ ಬರಡು ಭೂಮಿಯನ್ನು ಭೋಗ್ಯಕ್ಕೆ ಪಡೆದುಕೊಂಡು ಮಹಿಳೆಯರೇ ಕೃಷಿ ಮಾಡುತ್ತಿರುವುದಾಗಿಯೂ ತಿಳಿಸಿದರು.
ಕುರಿ ಸಾಕಣೆ, ಹೈನುಗಾರಿಕೆ, ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗಾವಕಾಶ ಒದಗಿಸುವುದು ಇತ್ಯಾದಿ ಚಟುವಟಿಕೆ ಮಾತ್ರವಲ್ಲದೆ ಯಾವುದೇ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಫಲಾನುಭವಿಗಳೇ ಪರಿಹರಿಸಿಕೊಳ್ಳುವ ಬಗೆಯನ್ನು ಕೂಡ ವಿವರಿಸಿದರು.
‘ಕುಟುಂಬಶ್ರೀ ಮೂಲಕ ಕೇರಳದ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ, ಸಮಾಜದಲ್ಲಿ ಗೌರವ ಲಭಿಸಿದೆ. ಅಲ್ಲಿನ ಮಹಿಳೆಯರು ಈಗ ಪರರ ಮನೆಯ ಮುಸುರೆ ತಿಕ್ಕುವುದಕ್ಕಾಗಿ ಪಟ್ಟಣಗಳಿಗೆ ಪ್ರಯಾಣ ಬೆಳೆಸುವುದಿಲ್ಲ. ಅವರ ಅನುಭವ ಕಥನಗಳು ಪ್ರತಿ ಹಳ್ಳಿಯಲ್ಲಿ ಸಿದ್ಧವಾಗುತ್ತಿದ್ದು ಅದರ ಪೈಕಿ ಉತ್ತಮವಾದುದನ್ನು ಆಯ್ಕೆ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು’ ಎಂದು ವತ್ಸಲಾ ಕುಮಾರಿ ವಿವರಿಸಿದರು.
‘ಕುಟುಂಬ ಶ್ರೀ ಯೋಜನೆ ವಿವಿಧ ರಾಜ್ಯಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗಿದ್ದು ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ರಾಜ್ಯಗಳು ಸೇರಿದಂತೆ ಒಟ್ಟು ಹತ್ತು ರಾಜ್ಯಗಳಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸುವ ಯೋಜನೆ ಇದೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.