ADVERTISEMENT

ದಂಪತಿ ಆಸ್ತಿ ಮುಟ್ಟುಗೋಲಿಗೆ ಮುಂದಾದ ಇ.ಡಿ

ಇಂಡಿಯನ್‌ ಮುಜಾಹಿದ್ದೀನ್‌ ಉಗ್ರರಿಗೆ ಹಣಕಾಸು ನೆರವು ಆರೋಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2017, 19:30 IST
Last Updated 15 ಅಕ್ಟೋಬರ್ 2017, 19:30 IST

ಮಂಗಳೂರು: ಇಂಡಿಯನ್‌ ಮುಜಾಹಿದ್ದೀನ್‌ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಬಿಹಾರದ ಲಖಿಸರಾಯ್‌ ಪೊಲೀಸರಿಂದ ಬಂಧಿತರಾಗಿದ್ದ ಆಯೇಷಾ ಬಾನು ಮತ್ತು ಝುಬೈರ್‌ ದಂಪತಿ ಮಂಗಳೂರಿನ ಪಂಜಿಮೊಗರುವಿನಲ್ಲಿ ಹೊಂದಿರುವ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪ್ರಾರಂಭಿಸಿದೆ.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪ್ರಾಥಮಿಕ ಹಂತದ ಪ್ರಕ್ರಿಯೆ ಆರಂಭಿಸಿರುವ ಇ.ಡಿ ದೆಹಲಿ ಬ್ಯೂರೋ ಅಧಿಕಾರಿಗಳು, ಈ ಸಂಬಂಧ ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಅವರ ಕೋರಿಕೆಯಂತೆ ಪಂಜಿಮೊಗರುವಿನಲ್ಲಿರುವ ಆಯೇಷಾ ಮನೆಗೆ ಭೇಟಿ ನೀಡಿರುವ ಕಂದಾಯ ಇಲಾಖೆ ಸಿಬ್ಬಂದಿ, ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿ ವರದಿಯೊಂದನ್ನು ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇ.ಡಿ ಹಿರಿಯ ಅಧಿಕಾರಿಯೊಬ್ಬರು, ಅಕ್ರಮ ಹಣದ ವರ್ಗಾವಣೆ ಆರೋಪದಡಿ ಆಯೇಷಾ ಬಾನು ದಂಪತಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅವರ ಆಸ್ತಿ ಮುಟ್ಟುಗೋಲು ಸಂಬಂಧ ಪ್ರಾಥಮಿಕ ಹಂತದ ಪ್ರಕ್ರಿಯೆಯನ್ನು ಇ.ಡಿ ದೆಹಲಿ ಘಟಕದ ಅಧಿಕಾರಿಗಳು ಆರಂಭಿಸಿದ್ದಾರೆ.

ADVERTISEMENT

ಆರೋಪಿಗಳ ವಿರುದ್ಧ ಪೊಲೀಸರು ದಾಖಲಿಸಿರುವ ಪ್ರಕರಣದ ವಿಚಾರಣೆ ಪೂರ್ಣಗೊಂಡ ಬಳಿಕ ಅಂತಿಮ ಹಂತದ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ’ ಎಂದು ತಿಳಿಸಿದರು.

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಪಾಟ್ನಾದಲ್ಲಿ ನಡೆಸಿದ್ದ ಹೂಂಕಾರ್‌ ರ‍್ಯಾಲಿಯಲ್ಲಿ ಬಾಂಬ್‌ ಸ್ಫೋಟಿಸಲಾಗಿತ್ತು. ಈ ಪ್ರಕರಣದಲ್ಲಿ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆಯ ನಾಲ್ವರನ್ನು ಲಖಿಸರಾಯ್‌ ಪೊಲೀಸರು 2013ರ ನವೆಂಬರ್‌ ತಿಂಗಳಿನಲ್ಲಿ ಬಂಧಿಸಿದ್ದರು. ಅವರನ್ನು ವಿಚಾರಣೆ ನಡೆಸಿದಾಗ ಆಯೇಷಾ ಬಾನು ತನ್ನ ಬ್ಯಾಂಕ್‌ ಖಾತೆಗಳ ಮೂಲಕ ಉಗ್ರರಿಗೆ ಹಣ ವರ್ಗಾವಣೆ ಮಾಡುತ್ತಿರುವುದು ಗೊತ್ತಾಗಿತ್ತು.

ಆಯೇಷಾ ಬಾನು ಹೊಂದಿದ್ದ ಏಳು ಬ್ಯಾಂಕ್‌ ಖಾತೆಗಳ ಮೂಲಕ ಇಂಡಿಯನ್‌ ಮುಜಾಹಿದ್ದೀನ್‌ ಸದಸ್ಯರಿಗೆ ₹ 25 ಕೋಟಿಯನ್ನು ವರ್ಗಾವಣೆ ಮಾಡಿದ ಆರೋಪವಿದೆ. ಈ ಸಂಬಂಧ ಈ ಆರೋಪದಡಿ ಆಯೇಷಾ ಮತ್ತು ಝುಬೈರ್‌ನನ್ನು ಪೊಲೀಸರು ಬಂಧಿಸಿದ್ದರು. ದಂಪತಿ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.

ಆಯೇಷಾ, ಝುಬೈರ್‌ ದಂಪತಿಯ ಹಿರಿಯ ಮಗ ಮಂಗಳೂರಿನಲ್ಲಿ ಸರಕು ಸಾಗಣೆ ವಾಹನವೊಂದರ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮಗಳು ಬಿಲಾಸ್‌ಪುರದಲ್ಲಿ ಅಜ್ಜಿಯ ಜೊತೆಗಿದ್ದಾಳೆ. ಬಂಧಿತರಾಗುವಾಗ ಒಂದು ವರ್ಷದವನಾಗಿದ್ದ ಕಿರಿಯ ಮಗ ಬಿಲಾಸ್‌ಪುರದಲ್ಲಿ ಶಾಲೆಗೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಕುಟುಂಬದವರಿಂದ ಲಭ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಝುಬೈರ್‌ ಅಣ್ಣ ಅಜ್ಮಲ್‌ ಅಲಿ, ‘ಆಯೇಷಾ, ಝುಬೈರ್‌ ಅವರ ಹಿರಿಯ ಮಗ ಪಂಜಿಮೊಗರು ಮನೆಯಲ್ಲೇ ಇದ್ದಾನೆ. ಇತ್ತೀಚೆಗೆ ಕಂದಾಯ ಇಲಾಖೆ ಅಧಿಕಾರಿಗಳು ಬಂದು ದಾಖಲೆ ಪರಿಶೀಲಿಸಿ ಹೋಗಿದ್ದಾರೆ ಎಂದು ನಮಗೆ ತಿಳಿಸಿದ್ದಾನೆ. ವಿಚಾರಣೆ ಮುಗಿಯುವ ಮುನ್ನವೇ ಹೇಗೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಾರೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.