ADVERTISEMENT

ದ.ಕ ಈಗ ಐ.ಎಸ್‌ ತರಬೇತಿ ಕೇಂದ್ರ?

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 20:08 IST
Last Updated 4 ಅಕ್ಟೋಬರ್ 2017, 20:08 IST
ದ.ಕ ಈಗ ಐ.ಎಸ್‌ ತರಬೇತಿ ಕೇಂದ್ರ?
ದ.ಕ ಈಗ ಐ.ಎಸ್‌ ತರಬೇತಿ ಕೇಂದ್ರ?   

ಮಂಗಳೂರು: ವಹಾಬಿ ಸಂಘಟನೆಯೊಂದರ ಮುಖಂಡರ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕೇರಳದಲ್ಲಿ ಸಕ್ರಿಯವಾಗಿರುವ ಐಎಸ್‌ ಸಂಘಟನೆಯ ಕಾರ್ಯ ಚಟುವಟಿಕೆ, ಇದೀಗ ದಕ್ಷಿಣ ಕನ್ನಡ ಜಿಲ್ಲೆಗೂ ಕಾಲಿಟ್ಟಿರುವ ಬಗ್ಗೆ ಆತಂಕ ಎದುರಾಗಿದೆ.

ಈ ಸಂಭಾಷಣೆ ಬ್ಯಾರಿ ಭಾಷೆಯಲ್ಲಿದ್ದು, ಜಿಲ್ಲೆಯ ಪೊಲೀಸರಿಗೆ ಮತ್ತೊಂದು ಸವಾಲು ಎದುರಾಗಿದೆ. ಜಿಲ್ಲೆಯ ಬಂಟ್ವಾಳ, ಬಿ.ಸಿ. ರೋಡ್‌, ಉಳ್ಳಾಲಗಳಲ್ಲಿ ಐಎಸ್‌ ಸಂಘಟನೆಗೆ ಯುವಕರನ್ನು ಸೆಳೆಯುವ ಕೆಲಸ ಮಾಡಲಾಗುತ್ತಿದೆ ಎನ್ನುವ ಮಾತುಗಳು ಆಡಿಯೊದಲ್ಲಿ ಕೇಳಿ ಬಂದಿದ್ದು, ಗುಪ್ತಚರ ಇಲಾಖೆಯ ಅಧಿಕಾರಿಗಳು ಆಡಿಯೊ ತುಣುಕನ್ನು ಪರಿಶೀಲಿಸುತ್ತಿದ್ದಾರೆ. ಸಂಭಾಷಣೆಯ ಅನುವಾದ ಮಾಡಿದ ನಂತರವಷ್ಟೇ ಅದರಲ್ಲಿರುವ ಮಾಹಿತಿ ಸ್ಪಷ್ಟವಾಗಲಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಸಂಭಾಷಣೆಯಲ್ಲಿ ಐಎಸ್‌ನ ಹೆಸರು ಪ್ರಸ್ತಾಪವಾಗಿದ್ದು, ‘ಕೇರಳದ ಸಲಫಿ ಮುಖಂಡರೊಬ್ಬರು, ಮಂಗಳೂರಿನಲ್ಲಿ ಐಎಸ್‌ ಉಗ್ರರಿಗೆ ತರಬೇತಿ ನೀಡುತ್ತಿದ್ದಾರೆ. ಬಿ.ಸಿ. ರೋಡ್‌ನ ಸಮೀಪದ ಮಸೀದಿಯನ್ನೇ ತರಬೇತಿ ಕೇಂದ್ರವನ್ನಾಗಿ ಮಾಡಲಾಗಿದೆ’ ಎನ್ನುವ ಮಾಹಿತಿಯೂ ಇದರಲ್ಲಿದೆ.

ADVERTISEMENT

ಪಕ್ಕದ ಕೇರಳದಲ್ಲಿ ಈಗಾಗಲೇ ಐಎಸ್‌ ಸಂಘಟನೆಗೆ ಸೇರುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಪಡನ್ನಾದ ಯುವಕರು ಅಫ್ಗಾನಿಸ್ತಾನ ಮತ್ತು ಯೆಮನ್‌
ಗಳಲ್ಲಿ ಈ ಸಂಘಟನೆಯನ್ನು ಸೇರಿರುವುದು ರಾಷ್ಟ್ರೀಯ ತನಿಖಾ ದಳದ ತನಿಖೆಯಿಂದ ಸ್ಪಷ್ಟವಾಗಿದೆ.

ಇದೇ ಮಾದರಿಯ ತರಬೇತಿ ಕೇಂದ್ರಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾರ್ಯಾಚರಿಸುತ್ತಿವೆ ಎನ್ನುವ ವಾದಕ್ಕೆ ಇದೀಗ ಪುಷ್ಟಿ ಸಿಕ್ಕಂತಾಗಿದ್ದು, ಪೊಲೀಸ್‌ ಅಧಿಕಾರಿಗಳು ಮಾತ್ರ ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

‘ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಅಡಿಯೊ ತುಣುಕನ್ನು ಪರಿಶೀಲಿಸಲಾಗುತ್ತಿದೆ. ಅದರಲ್ಲಿ ಇರುವ ಮಾಹಿತಿಯನ್ನು ಅನುವಾದ ಮಾಡಿದ ನಂತರವಷ್ಟೇ ವಿಷಯ ಸ್ಪಷ್ಟವಾಗಲಿದೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಈಗಲೇ ಏನನ್ನೂ ಹೇಳುವುದು ಸಾಧ್ಯವಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.