ವಿಜಯಪುರ: ಸನ್ನಡತೆ ಆಧಾರದಲ್ಲಿ ನಗರದ ದರ್ಗಾ ಜೈಲಿನಿಂದ ಮಂಗಳವಾರ ಬಿಡುಗಡೆಯಾದ ಕೈದಿಗಳ ಬೀಳ್ಕೊಡುಗೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಇಬ್ಬರು ಯುವತಿಯರಿಂದ ‘ಐಟಂ ಹಾಡು’ಗಳಿಗೆ ನೃತ್ಯ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜೈಲಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 38 ಕೈದಿಗಳಿಗೂ ಬಿಡುಗಡೆ ಪತ್ರ ವಿತರಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಂಸದೀಯ ಕಾರ್ಯದರ್ಶಿಗಳಿಬ್ಬರು ಸೇರಿದಂತೆ ಗಣ್ಯರು ಹೊರ ಹೋದ ನಂತರ ಈ ನೃತ್ಯ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ.
ಜನಪ್ರತಿನಿಧಿಗಳು ಹಾಜರಿದ್ದ ಸಂದರ್ಭದಲ್ಲಿ ಅಧಿಕಾರಿಗಳು ಕೈದಿಗಳಿಂದಲೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು.
ಅತಿಥಿಗಳು ಹೊರ ನಡೆಯುತ್ತಿದ್ದಂತೆಯೇ, ನೃತ್ಯಗಾರ್ತಿಯರನ್ನು ಜೈಲಿನೊಳಗೆ ಕರೆಸಿಕೊಂಡು ಅದೇ ವೇದಿಕೆಯಲ್ಲಿ ಹಿಂದಿ, ಕನ್ನಡ ಚಲನಚಿತ್ರ ಗೀತೆಗಳ ‘ಐಟಂ ಹಾಡು’ಗಳಿಗೆ ನೃತ್ಯ ಮಾಡಿಸಿದರು ಎಂದು ತಿಳಿದುಬಂದಿದೆ.
ಅರ್ಧ ತಾಸಿಗೂ ಹೆಚ್ಚು ಕಾಲ ಈ ಕಾರ್ಯಕ್ರಮ ನಡೆದಿದೆ ಎನ್ನಲಾಗಿದೆ. ಇದರ ವಿಡಿಯೊ ಕ್ಲಿಪ್ಪಿಂಗ್ ಲಭ್ಯವಾಗಿದ್ದು, ಯುವತಿ ನೃತ್ಯ ಮಾಡುವಾಗ ಸ್ಥಳದಲ್ಲಿದ್ದ ಕೆಲವರು ನೋಟಿನ ಸುರಿಮಳೆಗೈದ ದೃಶ್ಯವೂ ಇದೆ.
ಕಾರಾಗೃಹ ಡಿಜಿಪಿ ಭೇಟಿ: ‘ಯುವತಿಯರನ್ನು ಕರೆಸಿ ಜೈಲಿನೊಳಗೆ ನೃತ್ಯ ಮಾಡಿಸಲಾಗಿದೆ ಎಂಬ ವಿಷಯ ಬುಧವಾರ ಮಧ್ಯಾಹ್ನ ಜಿಲ್ಲಾ ಪೊಲೀಸರ ಗಮನಕ್ಕೆ ಬಂದಿದೆ. ಜೈಲು ನಮ್ಮ ವ್ಯಾಪ್ತಿಗೆ ಬಾರದ ಕಾರಣ ನಾವು ಏನೂ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದರೆ ಕಾರಾಗೃಹಗಳ ಡಿಜಿಪಿ ಎಚ್.ಎನ್. ಸತ್ಯನಾರಾಯಣರಾವ್ ಅವರಿಗೆ ವಿಷಯ ಗೊತ್ತಾಗಿದ್ದು ಇಲ್ಲಿಗೆ ಬಂದು ಗುರುವಾರ ತನಿಖೆ ನಡೆಸಲಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದರು.
*
ಸಂಪರ್ಕಕ್ಕೆ ಸಿಗದ ಅಧೀಕ್ಷಕರು
ಜೈಲಿನಲ್ಲಿ ನಡೆದಿದೆ ಎನ್ನಲಾದ ನೃತ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ‘ಪ್ರಜಾವಾಣಿ’ ಪ್ರತಿಕ್ರಿಯೆ ಪಡೆ ಯಲು ದರ್ಗಾ ಜೈಲಿನ ಪ್ರಭಾರ ಅಧೀಕ್ಷಕ ಪಿ.ಎಸ್. ಅಂಬೇಕರ ಅವರ ಮೊಬೈಲ್‌ಗೆ ಯತ್ನಿಸಿದರೂ ಕರೆ ಸ್ವೀಕರಿಸಲಿಲ್ಲ. ಜೈಲಿನ ಸ್ಥಿರ ದೂರವಾಣಿಗೆ ಯತ್ನಿಸಿದಾಗ ಸಿಬ್ಬಂದಿ ಕರೆ ಸ್ವೀಕರಿಸಿದರು. ಅಧೀಕ್ಷಕರಿಗೆ ಫೋನ್ ಕೊಡಲು ಕೇಳಿದಾಗ ಅವರು ‘ರೌಂಡ್ಸ್‌ನ ಲ್ಲಿದ್ದಾರೆ’ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.