ADVERTISEMENT

ದರ್ಬಾರಿನಿಂದ `ಮುಕ್ತಿ' ಪಡೆದ ಸುವರ್ಣ ವಿಧಾನಸೌಧ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಳಗಾವಿ: ಹಲಗಾ ಗುಡ್ಡದ ಪ್ರದೇಶ ಗುರುವಾರ ಮುಸ್ಸಂಜೆ ಹೊತ್ತಿನಲ್ಲಿ ನಿರಾಳ ಭಾವ ಅನುಭವಿಸುತ್ತಿತ್ತು. ಕಳೆದ ಹತ್ತು ದಿನಗಳಿಂದ ಕಂಡಿದ್ದ ಗೌಜು-ಗದ್ದಲ, ಸಚಿವ-ಶಾಸಕರ ದರ್ಬಾರು, ಗೂಟದ ಕಾರುಗಳ ಕಾರುಬಾರು, ಪೊಲೀಸರ ಸರ್ಪಗಾವಲು ಎಲ್ಲದರಿಂದ ಒಮ್ಮೆಲೇ `ಮುಕ್ತಿ' ಪಡೆದ ಖುಷಿ ಅಲ್ಲಿ ಮನೆಮಾಡಿತ್ತು.

ಗುಡ್ಡದ ಮೇಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಪರಿಣಾಮ ಸರ್ಕಾರವೇ ಇಲ್ಲಿಗೆ ಬಂದು ಬಿಡಾರ ಹೂಡಿತ್ತು. ಕಲಾಪದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಸಚಿವರು, ಶಾಸಕರು ಮತ್ತು ಅಧಿಕಾರಿಗಳನ್ನು ನಿತ್ಯವೂ ಹೊತ್ತು ತರುತ್ತಿದ್ದ ಕಾರುಗಳು ಪ್ರಶಾಂತ ವಾತಾವರಣದಲ್ಲಿ ಗಲಾಟೆ ಎಬ್ಬಿಸಿದ್ದವು. ಗುಡ್ಡದ ಸುತ್ತಲೂ ಆವರಿಸಿದ ಹೊಲಗಳಲ್ಲಿ ಹಕ್ಕಿಗಳ ನಿನಾದವೂ ಕ್ಷೀಣಿಸಿತ್ತು.

ಅಧಿವೇಶನದ ಕಾರಣದಿಂದ ವಿಧಾನಸೌಧದಲ್ಲಿ ಪ್ರತಿರಾತ್ರಿ ದೀಪಗಳು ಬೆಳಗುತ್ತಿದ್ದವು. ಹೊಂಬಣ್ಣದಿಂದ ಹೊಳೆಯುತ್ತಿದ್ದ ಈ ಕಟ್ಟಡ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕರನ್ನು ದೂರದಿಂದಲೇ ತನ್ನತ್ತ ಸೆಳೆಯುತ್ತಿತ್ತು. ಆದರೆ, ಕಣ್ಣು ಕುಕ್ಕಿಸುವ ಬೆಳಕಿನಿಂದ ಪಕ್ಷಿಗಳನ್ನು ದೂರ ಹಾರುವಂತೆ ಮಾಡಿತ್ತು.

`ಬೆಳಕಿನ ಈ ಹೊಳೆಗೆ ಶುಕ್ರವಾರದಿಂದ ಅವಕಾಶ ಇಲ್ಲ. ಅಧಿವೇಶನ ಮುಗಿದಿದ್ದರಿಂದ ದೀಪಾಲಂಕಾರ ನಿಲ್ಲಿಸಲಾಗುತ್ತದೆ. ಈಗಾಗಲೇ ನಮಗೆ ಮೇಲಿನಿಂದ ಆದೇಶ ಬಂದಿದೆ' ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಎರಡೂ ಸದನಗಳಲ್ಲಿ ಕೊನೆಯ ದಿನದ ಕಲಾಪ ನಡೆದಿರುವಾಗ ಇತ್ತ ಸಚಿವಾಲಯದ ಸಿಬ್ಬಂದಿ ತಮ್ಮ ಕಚೇರಿಗಳಲ್ಲಿ ಕಡತಗಳನ್ನು ವಾಪಸು ಚೀಲಕ್ಕೆ ತುಂಬುವ ಕೆಲಸದಲ್ಲಿ ನಿರತರಾಗಿದ್ದರು. ಸುವರ್ಣ ವಿಧಾನಸೌಧದ ಆಹ್ಲಾದಕರ ವಾತಾವರಣಕ್ಕೆ ಮನಸೋತಿದ್ದ ಬಹುತೇಕ ಸಿಬ್ಬಂದಿ `ಶುಕ್ರವಾರದಿಂದ ಇಂತಹ ಪರಿಸರ ಮತ್ತೆ ಸಿಗದಲ್ಲ' ಎಂದು ಪೇಚಾಡುತ್ತಿದ್ದರು.

`ಕೋಟೆಕೆರೆ ದಂಡೆಯಲ್ಲಿ ನಿತ್ಯವೂ ವಾಕಿಂಗ್ ಮಾಡುತ್ತಿದ್ದೆ. ಬೆಂಗಳೂರಿನಲ್ಲಿ ಹುಡುಕಿದರೂ ಇಂತಹ ಪರಿಸರ ಸಿಗುವುದಿಲ್ಲ. ಯಾವುದಾದರೂ ಇಲಾಖೆಯಲ್ಲಿ ಹುದ್ದೆ ತೋರಿಸಿ ವರ್ಗಾವಣೆ ಮಾಡಿದರೆ ಇಲ್ಲಿಯೇ ಇರುತ್ತೇನೆ' ಎಂದು ಮನಸಾರೆ ನಕ್ಕರು, ಸಚಿವಾಲಯದ ಹಣಕಾಸು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎ.ರಮೇಶ್.

`ಬೆಳಗಾವಿಯಿಂದ ಹತ್ತು ನಿಮಿಷಗಳಲ್ಲಿ ಸುವರ್ಣ ವಿಧಾನಸೌಧಕ್ಕೆ ಬಂದು ಬಿಡಬಹುದು. ಬೆಂಗಳೂರಿನ ಮನೆಯಿಂದ ವಿಧಾನಸೌಧಕ್ಕೆ ಹೋಗಲು ಒಂದು ಗಂಟೆಯಾದರೂ ಸಾಕಾಗುವುದಿಲ್ಲ. ಇಷ್ಟೊಂದು ಅನುಕೂಲ ಎಲ್ಲಿ ಸಿಗುತ್ತದೆ' ಎಂದು ಅವರು ಕೇಳಿದರು.

ಸಚಿವರ ಆಪ್ತ ಸಿಬ್ಬಂದಿ ಹಾಗೂ ಮೂರೂ ಪಕ್ಷದ ಕಚೇರಿಗಳ ಸಹಾಯಕರು ಗಂಟು-ಮೂಟೆ ಕಟ್ಟಿಕೊಂಡು ಮಧ್ಯಾಹ್ನವೇ ಹೊರಟರು. ಗುರುವಾರ ರಾತ್ರಿ ಬೆಳಗಾವಿಯಿಂದ ರಾಜಧಾನಿಯತ್ತ ಹೊರಟ ಎಲ್ಲ ಬಸ್ಸುಗಳು ಕಿಕ್ಕಿರಿದು ತುಂಬಿದ್ದವು.
ನಿತ್ಯ ಸಂಜೆಯಾದರೆ ಜೇನುಗೂಡಿನಂತೆ ತುಂಬಿರುತ್ತಿದ್ದ ಬೆಳಗಾವಿ ನಗರದ ಬಹುತೇಕ ಹೋಟೆಲ್‌ಗಳು ರಾತ್ರಿ ವೇಳೆಗೆ ಖಾಲಿಯಾಗಿದ್ದವು.

ಮಾಯವಾದ ಬಕೆಟ್, ಫ್ಲಾಸ್ಕ್!
ಸುವರ್ಣ ವಿಧಾನಸೌಧದ ಕೊಠಡಿಗಳಿಗೆ ಒದಗಿಸಲಾಗಿದ್ದ ಬಹುತೇಕ ಬಕೆಟ್, ಟವೆಲ್, ಗ್ಲಾಸ್, ಪ್ಲಾಸ್ಕ್‌ಗಳೆಲ್ಲ ಗುರುವಾರ ಮಧ್ಯಾಹ್ನದ ವೇಳೆಗೆ ಮಾಯವಾಗಿವೆ!

ಅಧಿವೇಶನ ಕೊನೆಗೊಂಡ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಎಲ್ಲ ಕೋಣೆಗಳನ್ನು ಪುನಃ ತಮ್ಮ ಸುಪರ್ದಿಗೆ ಪಡೆಯಲು ಮಧ್ಯಾಹ್ನ ಎಲ್ಲ ಮಹಡಿ ಸುತ್ತಿದರು. ಆದರೆ, ಸಿಬ್ಬಂದಿ ಹೋಗಿ ಕೋಣೆಗಳನ್ನು ಸುಪರ್ದಿಗೆ ಪಡೆಯುವ ಮುನ್ನವೇ ಅಲ್ಲಿದ್ದವರು ಹೊರಟುಬಿಟ್ಟಿದ್ದರು.

ಸಚಿವಾಲಯ ಮತ್ತು ಪಕ್ಷದ ಕಚೇರಿಗಳಿಗೆ ಈ ಕೋಣೆಗಳನ್ನು ನೀಡಲಾಗಿತ್ತು. ಕೋಣೆಗಳನ್ನು ಖಾಲಿ ಮಾಡಿಕೊಂಡು ಹೋಗುವಾಗ ಕಚೇರಿ ಸಹಾಯಕರು ಅಲ್ಲಿದ್ದ ಬಕೆಟ್, ಟವೆಲ್, ಪ್ಲಾಸ್ಕ್, ಡಸ್ಟ್‌ಬಿನ್, ಮಗ್ ಸೇರಿದಂತೆ ಎಲ್ಲವನ್ನೂ ಜೊತೆಗೆ ಒಯ್ದಿದ್ದರು.

`ಯಾವುದೇ ಕೋಣೆಗೆ ಹೋದರೂ ಕೊಟ್ಟ ಸಾಮಗ್ರಿಗಳೇ ಸಿಗುತ್ತಿಲ್ಲ. ಕೇಳಲು ಯಾರೂ ಇಲ್ಲ. ಏನು ಮಾಡುವುದು ತಿಳಿಯದಾಗಿದೆ' ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು ಗೋಳಾಡಿದರು.

`ಬಕೆಟ್‌ಗಳೆಲ್ಲ ಹೋಗಿವೆ. ಕಂಪ್ಯೂಟರ್ ಗತಿ ಏನಾಗಿದೆ ಪರಿಶೀಲನೆ ಮಾಡಿ' ಎಂದು ಎಲೆಕ್ಟ್ರಿಕಲ್ ವಿಭಾಗದವರಿಗೆ ಅವರು ಮೊಬೈಲ್ ಫೋನಿನಲ್ಲಿ ಕರೆ ಮಾಡಿ ಹೇಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.