ADVERTISEMENT

ದರ್ಶನ್ ಖಳನಾಯಕ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ವೃತ್ತಿಯಲ್ಲಿ ನಾಯಕ ನಟ ಆಗಿರುವ ದರ್ಶನ್ ತೂಗುದೀಪ ಅವರು ಪತ್ನಿ- ಮಗನ ಪಾಲಿಗೆ ಖಳನಾಯಕ ಆಗಿದ್ದಾರೆ...~  ಹೀಗೆಂದು ಹೇಳಿರುವುದು ಬೇರೆ ಯಾರೂ ಅಲ್ಲ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ.

ನಟನಿಗೆ ಜಾಮೀನು ನಿರಾಕರಿಸಿರುವುದಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಆದೇಶದಲ್ಲಿ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ನಟನ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ಸತ್ಯ ಎಂದು ಗೊತ್ತಾಗುತ್ತದೆ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟ ಸಮಾಜಕ್ಕೆ ಮಾದರಿ ಆಗಬೇಕಿತ್ತು. ಆದರೆ ಹಾಗಾಗದಿರುವುದು ದುರದೃಷ್ಟಕರ~ ಎಂದೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

`ವಿಜಯಲಕ್ಷ್ಮಿ ಅವರು ಸೆ. 9ರ ಬೆಳಗಿನ ಜಾವ ಮೂರು ಗಂಟೆಗೆ ಪತಿಯ ವಿರುದ್ಧ ದೂರು ನೀಡಿದ್ದರು. ಆದರೆ ಅವರು ಸಂಜೆಯೇ ಹಾಗೆ ದೂರು ನೀಡಿಲ್ಲ ಎಂದಿದ್ದಾರೆ. ಒತ್ತಡದಿಂದ ಅವರು ದೂರು ವಾಪಸ್ ಪಡೆಯಲು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.

ಈ ರೀತಿ ಕೊಟ್ಟ ದೂರನ್ನು ವಾಪಸ್ ಪಡೆಯಲು ಸಾಧ್ಯವಿಲ್ಲ. ಸತ್ಯಾಂಶ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ನೋಡಿದಾಗ ಇದು ಗೊತ್ತಾಗುತ್ತದೆ~ ಎಂದು ಅವರು ಆದೇಶದಲ್ಲಿ ನಮೂದಿಸಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ, ಕೊಲೆ ಯತ್ನ, ಕೌಟುಂಬಿಕ ದೌರ್ಜನ್ಯ ಸೆಕ್ಷನ್‌ಗಳ ಅಡಿ.  


ದಾಖಲಾದ ಪ್ರಕರಣಗಳ ವಿಚಾರಣೆ ಸೆಷನ್ಸ್ ನ್ಯಾಯಾಲಯದ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಅಲ್ಲಿಯೇ ವಿಚಾರಣೆ ನಡೆಯಬೇಕಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

 `ಮಗ ವಿನೀಶ್‌ನನ್ನು ಕೊಲ್ಲುವುದಾಗಿ ದರ್ಶನ್ ಕತ್ತು ಹಿಡಿದು ಮೇಲೆಕ್ಕೆ ಎತ್ತಿದ್ದರೆಂದು ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದರು.

 ಇದು ಕೊಲೆ ಯತ್ನ ಎಂದು ಭಾರತೀಯ ದಂಡ ಸಂಹಿತೆ 307ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ತನಿಖಾಧಿಕಾರಿ ಮಗನ ವಿಷಯದಲ್ಲಿ ಸೆಕ್ಷನ್ 307ಕ್ಕೆ ಬದಲಾಗಿ 324ಕ್ಕೆ ಬದಲಾಯಿಸಿ ಎಂದು ಮೆಮೊ ಹಾಕಿದ್ದರು. ಆದರೆ ಈ ಬಗ್ಗೆ ವಾದ ಮಂಡಿಸಿದ್ದ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎಚ್.ಅಮೃತ್  ಕುಮಾರ್ ಅವರು ವಿಜಯಲಕ್ಷ್ಮಿ ಅವರ ವಿಷಯದಲ್ಲಿ ಮಾತ್ರವಲ್ಲ, ಮಗನ ವಿಷಯದಲ್ಲೂ ಸಹ ಕೊಲೆ ಯತ್ನ (ಸೆಕ್ಷನ್ 307) ಅಟ್ರಾಕ್ಟ್ ಆಗುತ್ತದೆ ಎಂದು ವಾದ ಮಂಡಿಸಿದ್ದರು.
 
ವಿಜಯಲಕ್ಷ್ಮಿ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದ ಬಗ್ಗೆ ಪ್ರಮಾಣಪತ್ರ ಸಲ್ಲಿಸಲಾಗಿತ್ತು. ಅವರಿಗೆ ಗಂಭೀರ ಗಾಯಗಳಾಗಿದ್ದನ್ನು ವೈದ್ಯಕೀಯ ಪ್ರಮಾಣಪತ್ರ ದೃಢಪಡಿಸಿತ್ತು.

`ಗೆಳತಿಯ ಮನೆಯಲ್ಲಿದ್ದ ನನ್ನನ್ನು ದರ್ಶನ್ ಕಾರಿನಲ್ಲಿ ಎಳೆದೊಯ್ದಿದ್ದರು. ಎರಡು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿದ ಅವರು ಹಲ್ಲೆ ನಡೆಸಿದ್ದರು. ರಿವಾಲ್ವರ್ ತೋರಿಸಿ ಮೂರು ವರ್ಷದ ಮಗ ವಿನೀಶನನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಮತ್ತು ಕತ್ತು ಹಿಡಿದು ಮೇಲಕ್ಕೆ ಎತ್ತಿದ್ದರು~ ಎಂದು ವಿಜಯಲಕ್ಷ್ಮಿ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಧೀಶರ ಮನೆಗೆ ಹಾಜರುಪಡಿಸಲು ಕರೆದೊಯ್ದಿದ್ದ ಸಂದರ್ಭದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದ ವಿಜಯಲಕ್ಷ್ಮಿ ಅವರು ಬಚ್ಚಲು ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದಾಗಿ ತಿಳಿಸಿದ್ದರು.

 ಜಾಮೀನು ಅರ್ಜಿ ವಜಾ

ADVERTISEMENT

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಜಾಮೀನು ನೀಡಲು ನಗರದ ಒಂದನೇ ಎಸಿಎಂಎಂ ನ್ಯಾಯಾಲಯ ನಿರಾಕರಿಸಿದೆ.

ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ವೆಂಕಟೇಶ್ ಆರ್.ಹುಲಗಿ ಅವರು ಜಾಮೀನು ಅರ್ಜಿಯನ್ನು ವಜಾ ಮಾಡಿ ಮಂಗಳವಾರ ಆದೇಶ ಹೊರಡಿಸಿದರು.
ಆರೋಪಿ ಪರ ವಕೀಲರಾದ ಸಿ.ಆರ್.ರಾಘವೇಂದ್ರರೆಡ್ಡಿ ಹಾಗೂ ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎಚ್.ಅಮೃತ್‌ಕುಮಾರ್ ಅವರು ಸೋಮವಾರ ಮಂಡಿಸಿದ್ದ ವಾದವನ್ನು ಆಲಿಸಿದ್ದ ನ್ಯಾಯಾಧೀಶರು ಆದೇಶವನ್ನು ಕಾಯ್ದಿರಿಸಿದ್ದರು.

ಮೇಲ್ಮನವಿ: `ದರ್ಶನ್ ಅವರಿಗೆ ಒಂದನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಸೆಷನ್ಸ್ ನ್ಯಾಯಾಲಯದಲ್ಲಿ ಬುಧವಾರ ಮೇಲ್ಮನವಿ ಸಲ್ಲಿಸಲಾಗುತ್ತದೆ~ ಎಂದು ರಾಘವೇಂದ್ರರೆಡ್ಡಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಆಸ್ಪತ್ರೆಯಲ್ಲೇ: ಆಸ್ತಮದಿಂದ ಬಳಲುತ್ತಿರುವ ನಟ ದರ್ಶನ್‌ಗೆ ನಗರದ ರಾಜೀವ್‌ಗಾಂಧಿ ಎದೆ ರೋಗಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

`ಆಸ್ತಮ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಅವರಿಗೆ ಸ್ಟಿರಾಯ್ಡ ನೀಡಲಾಗುತ್ತಿದೆ. ಬುಧವಾರ ಬೆಳಿಗ್ಗೆ ಅವರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಆಸ್ತಮ ನಿಯಂತ್ರಣಕ್ಕೆ ಬಂದಿದ್ದು ಖಚಿತವಾದರೆ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ~ ಎಂದು ಆಸ್ಪತ್ರೆ ನಿರ್ದೇಶಕ ಡಾ.ಶಶಿಧರ್ ಬುಗ್ಗಿ `ಪ್ರಜಾವಾಣಿ~ಗೆ ತಿಳಿಸಿದರು.

`ಆರೋಗ್ಯ ಸುಧಾರಣೆ ಆಗಿದೆ ಎಂದು ಗೊತ್ತಾದ ನಂತರ ಒಂದು ಕ್ಷಣವೂ ಅವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಈ ಬಗ್ಗೆ ಅನುಮಾನ ಬೇಡ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದರ್ಶನ್ ಪತ್ನಿ, ಅತ್ತೆ, ಬಾವನ ವಿರುದ್ಧದೂರು

ಪ್ರಜಾವಾಣಿ ವಾರ್ತೆ
ಬೆಂಗಳೂರು:
ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಮತ್ತು ಅತ್ತೆ ಸುಮಂಗಲಮ್ಮ ಅವರ ವಿರುದ್ಧ ವಿಜಯಲಕ್ಷ್ಮಿ ಅವರ ಅತ್ತಿಗೆ ಶ್ರೀಲಕ್ಷ್ಮಿ ಎಂಬುವರು ಗಿರಿನಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

 `ವಿಜಯಲಕ್ಷ್ಮಿ ಸಹೋದರ ವಾಸುದೇವ್ ಅವರನ್ನು ಹತ್ತು ವರ್ಷ ಹಿಂದೆ ವಿವಾಹವಾಗಿದ್ದೆ. ವಾಸುದೇವ್ ಅವರಿಗೆ ಪ್ರೇಮಾ ಎಂಬುವರ ಜತೆ ಮೊದಲೇ ಸಂಬಂಧವಿತ್ತು. ವಿಜಯಲಕ್ಷ್ಮಿ ಮತ್ತು ಸುಮಂಗಲಮ್ಮ ಅವರು ಈ ಸಂಗತಿಯನ್ನು ಮರೆ ಮಾಚಿ ನನ್ನ ವಿವಾಹ ಮಾಡಿಸಿದ್ದರು. ಮನೆಯಲ್ಲಿದ್ದಾಗ ಅವರಿಬ್ಬರೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಕಾರಣಾಂತರದಿಂದ ದೂರು ನೀಡಲು ಆಗಿರಲಿಲ್ಲ~ ಎಂದು ಶ್ರೀಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.

 ಶ್ರೀಲಕ್ಷ್ಮಿಯವರು ವಾಸುದೇವ್ ಮತ್ತು ಪ್ರೇಮಾ ಅವರ ವಿರುದ್ಧವೂ ಆರೋಪ ಮಾಡಿದ್ದಾರೆ. ಅವರು ಹಲವು ವರ್ಷಗಳ ಹಿಂದೆಯೇ ಪತಿಯಿಂದ ದೂರವಾಗಿ ಸುಂಕದಕಟ್ಟೆಯಲ್ಲಿರುವ ತವರು ಮನೆಯಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.