ADVERTISEMENT

ದಲಿತರಿಗೆ ಸಾಮಾಜಿಕ ಬಹಿಷ್ಕಾರ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ಬಾಗಲಕೋಟೆ: ‘ಜಮಖಂಡಿ ತಾಲ್ಲೂ­ಕಿನ ಗದ್ಯಾಳ ಗ್ರಾಮದಲ್ಲಿ 50 ದಲಿತ ಕುಟುಂಬಗಳಿಗೆ ಗ್ರಾಮದ ಸವರ್ಣೀ­ಯರು ನಾಲ್ಕು ತಿಂಗಳಿಂದ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಆದ್ದರಿಂದ ದಲಿತರಿಗೆ ರಕ್ಷಣೆ ನೀಡಬೇಕು’ ಎಂದು ದಲಿತ ಮುಖಂಡ ಪರಶುರಾಮ ಮಹಾರಾಜನ್ನವರ ಆಗ್ರಹಿಸಿದರು.

‘ಬಹಿಷ್ಕಾರಕ್ಕೆ ಒಳಗಾಗಿರುವ ದಲಿತರಿಗೆ ಗಿರಣಿಗಳಲ್ಲಿ ಜೋಳ, ಗೋಧಿ ಹಿಟ್ಟು ಮಾಡಿಕೊಡುತ್ತಿಲ್ಲ, ನೀರು ತುಂಬಿಕೊಳ್ಳಲೂ ಬಿಡುತ್ತಿಲ್ಲ, ಕ್ಷೌರ ಮಾಡಿಸಿಕೊಳ್ಳಲು ಅವಕಾಶ ಕೊಡುತ್ತಿಲ್ಲ, ಹೋಟೆಲ್‌ಗಳಿಗೆ ಪ್ರವೇಶ ನಿಷೇಧಿಸಲಾಗಿದೆ, ಶಾಲೆಗೆ ಹೋಗುವ ದಲಿತರ ಮಕ್ಕಳೊಂದಿಗೆ ಸವರ್ಣೀಯರ ಮಕ್ಕಳು ಮಾತನಾಡದಂತೆ ನಿರ್ಬಂಧ ವಿಧಿಸಲಾಗಿದೆ, ಗ್ರಾಮದಲ್ಲಿ ಸವರ್ಣೀ­ಯ­ರೊಂದಿಗೆ ಮಾತನಾಡುವ ದಲಿತ­ರಿಗೆ ₨5,000 ದಂಡ ವಿಧಿಸಲಾಗು­ತ್ತಿದೆ’ ಎಂದು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಸುಮಾರು 20ಕ್ಕೂ ಅಧಿಕ ಕುಟುಂಬ­ಗಳು ಜೀವಭಯದಿಂದ ಈಗಾಗಲೇ ಮಹಾರಾಷ್ಟ್ರದ ಮಿರಜ್‌, ಸಾಂಗ್ಲಿಗೆ ವಲಸೆಹೋಗಿದ್ದಾರೆ. ಗ್ರಾಮ­ದಲ್ಲಿ ಶಾಂತಿ ಸಭೆ ನಡೆಸಿ ಬಹಿಷ್ಕಾರಕ್ಕೆ ಒಳಗಾಗಿರುವ ದಲಿತರಿಗೆ ನ್ಯಾಯ ಒದಗಿಸುವಂತೆ ಮೂರು ಭಾರಿ ಜಿಲ್ಲಾಧಿಕಾರಿಗೆ ಮನವಿ ಮಾಡಲಾ­ಗಿದೆ, ಜಮಖಂಡಿ ಉಪ ವಿಭಾಗಾಧಿ­ಕಾರಿ, ತಹಶೀಲ್ದಾರ್‌, ಪೊಲೀಸ್‌ ಅಧಿ­ಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಮಾಡಲಾಗಿದೆ. ಆದರೂ ಇದುವರೆಗೆ ನ್ಯಾಯ ದೊರಕಿಲ್ಲ’ ಎಂದರು.

ಬಹಿಷ್ಕಾರಕ್ಕೆ ಕಾರಣ: ‘ಗ್ರಾಮದ ದಲಿತ ಕಾಲೊನಿಯಲ್ಲಿ ನಾಲ್ಕು ತಿಂಗಳ ಹಿಂದೆ, ದಲಿತ ಸಂಘರ್ಷ ಸಮಿತಿಯ ನಾಮಫಲಕದಲ್ಲಿದ್ದ ಅಂಬೇಡ್ಕರ್‌ ಭಾವಚಿತ್ರಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಸವ­ರ್ಣೀ­ಯರನ್ನು ಪೊಲೀಸರು ಬಂಧಿಸಿ­ದ್ದರು. ಬಳಿಕ ಜಾಮೀನು ಮೇಲೆ ಬಿಡು­ಗಡೆ­ಗೊಂಡ ಆರೋಪಿಗಳು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ’ ಎಂದು ಪರುಶುರಾಮ ಆರೋಪಿಸಿದರು.

ಶೀಘ್ರ ಸೌಹಾರ್ದ ಸಭೆ: ‘ಗದ್ಯಾಳ ಗ್ರಾಮಕ್ಕೆ ಈಗಾಗಲೇ ಜಮಖಂಡಿ ತಹಶೀಲ್ದಾರ್‌ ಮತ್ತು ಸಿಪಿಐ ನಾಲ್ಕು ಭಾರಿ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಗ್ರಾಮದ ವಾಸ್ತವ ಚಿತ್ರಣ ಆಧರಿಸಿ ನೀಡಿರುವ ವರದಿ ಪ್ರಕಾರ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಎಲ್ಲಿಯೂ ನೇರವಾಗಿ ಕಂಡುಬಂದಿಲ್ಲ. ದಲಿತರಿಗೆ ಗಿರಣಿಯಲ್ಲಿ ಜೋಳದ ಹಿಟ್ಟು ಮಾಡಿಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂಬ ಕಾರಣದಿಂದ ಜೋಳದ ಹಿಟ್ಟುಮಾಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದೆರಡು ದಿನದೊಳಗೆ ಗ್ರಾಮಕ್ಕೆ ಭೇಟಿ ನೀಡಿ ಸೌಹಾರ್ದ ಸಭೆ ನಡೆಸುತ್ತೇನೆ’ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಅಶೋಕ ದುಡದುಂಟಿ ತಿಳಿಸಿದರು.

ಮುಕ್ತ ಅವಕಾಶ ಇದೆ: ‘ಗ್ರಾಮದ ಹೋಟೆಲ್‌, ಗಿರಣಿ, ಕ್ಷೌರದ ಅಂಗಡಿಗಳಲ್ಲಿ ದಲಿತರಿಗೆ ಮುಕ್ತ ಅವಕಾಶ ಇದೆ. ಆದರೆ, ವಿನಾ ಕಾರಣ ಸವರ್ಣೀಯರ ವಿರುದ್ಧ ದೂರು ನೀಡಿ, ಪೊಲೀಸರಿಂದ ಬಡಿಸಿದ ಕಾರಣ ಕೆಲವರು ಅವರೊಂದಿಗೆ ಮಾತನಾಡುತ್ತಿಲ್ಲ. ತಮ್ಮಷ್ಟಕ್ಕೆ ತಾವು ಇದ್ದಾರೆ. ಹೊಲಗಳಿಗೆ ಹೋಗಲು ಇರದ ಜಾಗದಲ್ಲಿ ರಸ್ತೆ ಬಿಡುವಂತೆ ಕೇಳಿದರೆ ಹೇಗೆ ಬಿಡಲು ಸಾಧ್ಯ’ ಎಂದು ಪ್ರಶ್ನಿಸುತ್ತಾರೆ ಜಿಲ್ಲಾ ಪಂಚಾಯ್ತಿ ಸದಸ್ಯ ಅರ್ಜುನ ದಳವಾಯಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.