ADVERTISEMENT

ದಲಿತರ ಜತೆ ಸಂವಾದ ಕೇವಲ ನಾಟಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 19:30 IST
Last Updated 1 ಏಪ್ರಿಲ್ 2018, 19:30 IST
ದಲಿತರ ಜತೆ ಸಂವಾದ ಕೇವಲ ನಾಟಕ
ದಲಿತರ ಜತೆ ಸಂವಾದ ಕೇವಲ ನಾಟಕ   

ಮೈಸೂರು: ಸಂವಿಧಾನ ವಿರೋಧಿ ಹೇಳಿಕೆ ನೀಡುವ ಬಿಜೆಪಿಯವರು, ದಲಿತರ ಜತೆ ಸಂವಾದ ಏರ್ಪಡಿಸುವುದು ಒಂದು ನಾಟಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ವ್ಯಂಗ್ಯವಾಡಿದರು.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಅಮಿತ್ ಶಾ ಮೈಸೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಯೋಜಿಸಿದ್ದ ದಲಿತರ ಜತೆಗಿನ ಸಂವಾದದಲ್ಲಿ ಗದ್ದಲ ಉಂಟಾಗಲು ಕಾಂಗ್ರೆಸ್ ಕಾರಣ ಅಲ್ಲ. ಸಂವಿಧಾನ ಕುರಿತು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆ ಮುಚ್ಚಿ ಹಾಕಲು ಬಿಜೆಪಿಯವರು ಇಂತಹ ಸುಳ್ಳು ವದಂತಿ ಹರಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಹೆಗಡೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತ ಅಲ್ಲ. ಕೇಂದ್ರದ ಸಚಿವರಾದ ಅವರು ನೀಡಿರುವ ಹೇಳಿಕೆ ಕುರಿತು ದಲಿತ ಮುಖಂಡರು ಪ್ರಶ್ನೆ ಮಾಡಿದಾಗ ಅದಕ್ಕೆ ಸಮಂಜಸ ಉತ್ತರ ಕೊಡಬೇಕಿತ್ತು. ಅದರ ಬದಲು ನಾನು ಎತ್ತಿಕಟ್ಟಿದ್ದೇನೆ ಎಂದು ಹೇಳುವುದು ಸರಿಯೇ’ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದಂತೆ ಎಂದು ಅಮಿತ್ ಶಾ ಹೇಳಿದ್ದಾರೆ. ಅವರ ಹೇಳಿಕೆ ತಪ್ಪು. ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಮತ ಹಾಕಿದಂತೆ. ಕೋಮುವಾದಿ ಪಕ್ಷವನ್ನು ಬೆಂಬಲಿಸಿದಂತೆ ಎಂದು ಪ್ರತ್ಯುತ್ತರ ಕೊಟ್ಟರು. ಮುಖ್ಯಮಂತ್ರಿಯವರು ಬಂಡೀಪುರ ರೆಸಾರ್ಟ್‌ನಲ್ಲಿ ಕುಳಿತು ಹಣದ ಕಟ್ಟುಗಳನ್ನು ಸಿದ್ಧ ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನವರು ಮಾಡಿರುವ ಕೆಲಸಗಳನ್ನು ನೆನಪಿಸಿಕೊಂಡು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಹಾಲಪ್ಪ ಸೇರ್ಪಡೆ: ‘ತೀರ್ಮಾನ ಆಗಿಲ್ಲ’
‘ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಕಾಂಗ್ರೆಸ್ ಸೇರುವ ಕುರಿತು ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ನಮ್ಮ ಸ್ಥಳೀಯ ಮುಖಂಡರೊಂದಿಗೆ ಅವರು ಮಾತನಾಡುತ್ತಿದ್ದಾರೆ. ನಾನೂ ಹೈಕಮಾಂಡ್ ಜತೆ ಮಾತನಾಡುತ್ತೇನೆ. ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ಹಾಲಪ್ಪ ಹಿಂದುಳಿದ ವರ್ಗಕ್ಕೆ ಸೇರಿದ ನಾಯಕ. ಅವರ ವಿರುದ್ಧ ಒಂದು ಆರೋಪ ಇತ್ತು. ಅದು ಸುಳ್ಳು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿದೆ ಎಂದರು.

ಜನಾರ್ದನ ರೆಡ್ಡಿ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ಆಗಿಲ್ಲ. ಅವರು ನನ್ನನ್ನು ಸಂಪರ್ಕಿಸಿಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮೂರನೇ ದಿನವೂ ಪ್ರಚಾರ
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರವೂ ಪ್ರಚಾರ ಕೈಗೊಂಡರು. ಬೆಳಿಗ್ಗೆ 11ರಿಂದ ಸಂಜೆಯವರೆಗೆ ಸುಮಾರು 12 ಸ್ಥಳಗಳಿಗೆ ಭೇಟಿ ಕೊಟ್ಟರು. ತೆರೆದ ವಾಹನದಲ್ಲಿ ಸಾಗಿದ ಅವರು ಕೆಲವೆಡೆ ಜನರನ್ನು ಉದ್ದೇಶಿಸಿ ಮಾತನಾಡಿದರು.

ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ಅಭಿಮಾನಿಗಳು ಸುಮಾರು 750 ಕೆ.ಜಿ.ಯಷ್ಟು ಸೇಬುಗಳನ್ನು ಬಳಸಿ ಮಾಡಿದ ಹಾರವನ್ನು ಕ್ರೇನ್‌ ಮೂಲಕ ಮುಖ್ಯಮಂತ್ರಿಗೆ ಹಾಕಿದರು.

**

ಸಂವಿಧಾನದ ಬಗ್ಗೆ ಬಿಜೆಪಿಯವರಿಗೆ ಗೌರವ ಎಲ್ಲಿದೆ? ಸಂವಿಧಾನಕ್ಕೆ ಅಗೌರವ ತೋರಿಸುವುದೇ ಅವರ ರಹಸ್ಯ ಕಾರ್ಯಸೂಚಿ
-ಸಿದ್ದರಾಮಯ್ಯ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.