ADVERTISEMENT

ದಾಖಲೆರಹಿತ ಜನವಸತಿಯ ನಿವಾಸಿಗಳಿಗೂ ಮನೆ ಮಾಲೀಕತ್ವ

ಭೂ ಸುಧಾರಣೆ (ತಿದ್ದುಪಡಿ) ಮಸೂದೆಗೆ ಸರ್ವಾನುಮತದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 20:15 IST
Last Updated 24 ಮಾರ್ಚ್ 2017, 20:15 IST
ವಿಧಾನಸಭೆಯಲ್ಲಿ  ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತಿನ ಶೈಲಿ
ವಿಧಾನಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತಿನ ಶೈಲಿ   

ಬೆಂಗಳೂರು: ದಾಖಲೆರಹಿತ ಜನವಸತಿಗಳಲ್ಲಿ ಮನೆ ಕಟ್ಟಿಕೊಂಡು ವಾಸಿಸುವವರಿಗೆ ಮಾಲೀಕತ್ವದ ಹಕ್ಕು ಕೊಡುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಮಸೂದೆಗೆ ವಿಧಾನ ಸಭೆ ಶುಕ್ರವಾರ ಸರ್ವಾನುಮತದಿಂದ ಒಪ್ಪಿಗೆ ನೀಡಿತು.

ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೆ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲೊನಿಯಂಥ  ಜನವಸತಿಗಳು ಕಂದಾಯ ಗ್ರಾಮಗಳಾಗಿ ಘೋಷಣೆಯಾದ ಬಳಿಕ, ಈ ಪ್ರದೇಶದಲ್ಲಿ ವಾಸಿಸುವವರು ಮಾಲೀಕತ್ವದ ಪ್ರಮಾಣ ಪತ್ರ ಪಡೆಯಲು ಮಸೂದೆ ಅವಕಾಶ ಕಲ್ಪಿಸಿಕೊಡಲಿದೆ.

ಮಸೂದೆ ಅಂಗೀಕಾರದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇದೊಂದು ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದ ಸಂದರ್ಭ. ಅನೇಕ ದಶಕಗಳಿಂದ ಮನೆ ಮಾಲೀಕತ್ವದ ಕನಸು ಕಾಣುತ್ತಿದ್ದವರಿಗೆ ಇಂದು ನಿಜವಾಗಿ ಬಿಡುಗಡೆ (ಸ್ವಾತಂತ್ರ್ಯ) ಸಿಕ್ಕಿದೆ. ಹೀಗಾಗಿ ಮಸೂದೆ ಪ್ರಗತಿದಾಯಕ ಅಷ್ಟೇ ಅಲ್ಲ, ಕ್ರಾಂತಿಕಾರಕವೂ ಹೌದು’ ಎಂದು ಬಣ್ಣಿಸಿದರು.

‘ಅನೇಕ ಸವಲತ್ತುಗಳಿಂದ ವಂಚಿತರಾದ ಜನರಿಗೆ ಹಕ್ಕುಪತ್ರ ನೀಡಲೇಬೇಕೆಂಬ ಉದ್ದೇಶದಿಂದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕೆಲಸ ಮಾಡಿದ್ದಾರೆ. ಶಾಸಕ ಶಿವಮೂರ್ತಿ ನಾಯ್ಕ್‌ ಮತ್ತಿತರರು ಇದಕ್ಕಾಗಿ ಹೋರಾಟ ಮಾಡಿದ್ದಾರೆ’ ಎಂದು ಅವರು ಹೇಳಿದರು.

‘ಐತಿಹಾಸಿಕ ಮಸೂದೆಯನ್ನು ಅಂಗೀಕರಿಸುವ ಮೂಲಕ  ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಯೊಂದನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಇದು  ಸಂತಸದ ವಿಷಯ’ ಎಂದೂ ಅವರು ಹೇಳಿದರು.

ಮಸೂದೆಗೆ ಬೆಂಬಲ ನೀಡಿದ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು  ಸಿದ್ದರಾಮಯ್ಯ ಅಭಿನಂದಿಸಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ‘ಮಸೂದೆ ಅಂಗೀಕಾರ ಶಾಸನ ಸಭೆಯಲ್ಲಿ ಶಾಶ್ವತವಾಗಿ ಉಳಿಯುವಂಥ ಹೆಗ್ಗುರುತು’ ಎಂದರು.
‘ಶೋಷಿತರಿಗೆ ಶಕ್ತಿ ತುಂಬುವ, ದುರ್ಬಲ ವರ್ಗದ ಹಿತಾಸಕ್ತಿ ಕಾಪಾಡುವ  ಮಸೂದೆ,  ಕಾಯ್ದೆಯಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು’ ಎಂದು ಜಗದೀಶ ಶೆಟ್ಟರ್‌ ಆಶಿಸಿದರು.

ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ‘ವಾಸ ಮಾಡುವವನಿಗೆ ಮನೆ ಒಡೆತನದ ಹಕ್ಕು ನೀಡುವ  ಮಸೂದೆ ಅಂಗೀಕಾರಗೊಂಡಿರುವುದು ಅತೀವ  ಖುಷಿ  ತಂದಿದೆ’ ಎಂದು ಸಂಭ್ರಮಿಸಿದರು.

ಸಚಿವ ಎಚ್‌.ಆಂಜನೇಯ, ಶಾಸಕರಾದ ಬಿಎಸ್‌ಆರ್‌ ಕಾಂಗ್ರೆಸ್‌ನ ರಾಜೀವ್‌, ಜೆಡಿಎಸ್‌ನ ಎಚ್‌.ಡಿ. ರೇವಣ್ಣ, ಮಾನಪ್ಪ ವಜ್ಜಲ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.