ADVERTISEMENT

ದಾನ ನಾವೇ ಕೊಡಬೇಕು ಶೆಟ್ಟರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 14 ಜುಲೈ 2013, 19:59 IST
Last Updated 14 ಜುಲೈ 2013, 19:59 IST

ಹುಬ್ಬಳ್ಳಿ:  `ಅನುದಾನ ನೀಡಿ ಎಂದು ಯಾವುದೇ ಮಠಗಳು ಅಥವಾ ಧಾರ್ಮಿಕ ಸಂಸ್ಥೆಗಳು ಸರ್ಕಾರವನ್ನು ಕೇಳಲ್ಲ. ಬದಲಿಗೆ ನಾವೇ ಅವರ ಬಳಿಗೆ ತೆರಳಿ ನೆರವಿಗೆ ನಿಲ್ಲಬೇಕು' ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಇಲ್ಲಿನ ಹಳೇಹುಬ್ಬಳ್ಳಿಯ 1008 ಅನಂತನಾಥ ದಿಗಂಬರ ಜೈನ ದೇವಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

`ಅನುದಾನ ನೀಡುವಂತೆ ಯಾರೂ ಬಂದು ನನ್ನನ್ನು ಕೇಳಲಿಲ್ಲ' ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಪ್ರಸ್ತಾಪಿಸಿದ ಅವರು, ಮುಖ್ಯಮಂತ್ರಿ ಹೇಳಿಕೆ ಸರಿಯಲ್ಲ. ಸೇವೆ ಅಥವಾ ದಾನವನ್ನು ಯಾರೂ ಕೇಳುವುದಿಲ್ಲ. ಒಳ್ಳೆಯ ಕಾರ್ಯಗಳನ್ನು ಗುರುತಿಸಿ ನೆರವು ನೀಡುವುದು ಸಂಪ್ರದಾಯ. ಹಿಂದೆ ರಾಜ-ಮಹಾರಾಜರು ತಾವೇ ಮುಂದಾಗಿ ಧಾರ್ಮಿಕ ಸಂಸ್ಥೆಗಳಿಗೆ ದಾನ ನೀಡುತ್ತಿದ್ದರು ಎಂದರು.

`ಹಿಂದೆ ನಾನು ಬಜೆಟ್ ಮಂಡಿಸಿದಾಗ ಘೋಷಿಸಿದ ನೆರವಿನಂತೆ ರಾಜ್ಯದ ಧಾರ್ಮಿಕ ಸಂಸ್ಥೆ ಹಾಗೂ ಮಠಗಳಿಗೆ ಅನುದಾನ ಕೊಟ್ಟಿದ್ದರೆ ಅದರ ಮೊತ್ತ ರೂ.300 ರಿಂದ ರೂ.400 ಕೋಟಿ ದಾಟುತ್ತಿರಲಿಲ್ಲ. ಸರ್ಕಾರ ರೂ.1.23 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದೆ. ಆ ಮೊತ್ತದಲ್ಲಿ ಇದು ಶೇಕಡಾ ಒಂದರಷ್ಟೂ ಆಗುತ್ತಿರಲಿಲ್ಲ. ಅದನ್ನೂ ಕೊಡದೇ ಸರ್ಕಾರವನ್ನು ಹೇಗೆ ನಡೆಸುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.