ಬೆಳಗಾವಿ: `ವಿಠ್ಠಲ, ವಿಠ್ಠಲ ಪಾಂಡುರಂಗ ವಿಠ್ಠಲ...~ ಎಂದು ಭಕ್ತಿಯಿಂದ ಭಜನೆ ಮಾಡುತ್ತಿದ್ದ ಭಕ್ತರ ಉಸಿರನ್ನು ಯಮನ ರೂಪದಲ್ಲಿ ಬಂದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಕ್ಷಣಾರ್ಧದಲ್ಲೇ ನಿಲ್ಲಿಸಿತು. ಪಂಢರಪುರದ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿ ತಾಲ್ಲೂಕಿನ 7 ಭಕ್ತರು ಭಾನುವಾರ ಮಾರ್ಗ ಮಧ್ಯದಲ್ಲೇ `ವಿಠ್ಠಲನ ಪಾದ~ ಸೇರಿದರು.
ಆಷಾಢ ಏಕಾದಶಿ ದಿನವಾದ ಜೂನ್ 30ರಂದು ಮಹಾರಾಷ್ಟ್ರದ ಪಂಢರಪುರದ ವಿಠ್ಠಲನ ದರ್ಶನ ಪಡೆಯಲು ಪಾದಯಾತ್ರೆಯಲ್ಲಿ ಹೊರಟಿದ್ದ ಬೆಳಗಾವಿ ತಾಲ್ಲೂಕಿನ ನೀಲಜಿ ಗ್ರಾಮದ `ರಾಮ ವಾರಕರಿ ಸಾಂಪ್ರದಾಯಿಕ ಭಜನಾ ಮಂಡಳಿ~ಯ ಭಕ್ತರಲ್ಲಿ ಸೂತಕದ ಛಾಯೆ ಕವಿದಿದೆ.
ಬೆಳಗಾವಿ ಸಮೀಪದ ಸುತಗಟ್ಟಿಯಲ್ಲಿ ಘಟಪ್ರಭಾ ನದಿ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಕುಳಿತಿದ್ದ ಭಕ್ತರ ಗುಂಪಿನ ಮೇಲೆ ಅತಿ ವೇಗದಿಂದ ಬಂದ ಬಸ್ ಹಾಯ್ದ ಪರಿಣಾಮ ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಗಾಲಿಗೆ ಸಿಲುಕಿ ಅಪ್ಪಚ್ಚಿಯಾದ ಆರು ಮಹಿಳೆಯರು ಸೇರಿದಂತೆ 7 ಭಕ್ತರ ಪ್ರಾಣ ಪಕ್ಷಿ ಹಾರಿ ಹೋಯಿತು. ನಾಲ್ವರು ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ದೃಶ್ಯ ಕಂಡ ಇನ್ನಿತರ ಭಕ್ತರಲ್ಲಿ `ಭೀತಿ~ ಹುಟ್ಟಿಸಿತು. ಭಕ್ತಿಯ ಭಾವಾವೇಶದಲ್ಲಿ ಮುಳುಗಿದ್ದವರು, ಕ್ಷಣಾರ್ಧದಲ್ಲೇ ಶೋಕ ಸಾಗರದಲ್ಲಿ ಮುಳುಗುವಂತಾಯಿತು.
ಪಂಢರಪುರದ ವಿಠ್ಠಲನ ದರ್ಶನ ಪಡೆದುಕೊಳ್ಳಲು ನೀಲಜಿ ಗ್ರಾಮದ ಸುಮಾರು 50 ಭಕ್ತರು ಶನಿವಾರ ಬೆಳಿಗ್ಗೆ ಸಂಭ್ರಮದಿಂದ ಪಾದಯಾತ್ರೆಯಲ್ಲಿ ಹೊರಟಿದ್ದರು. ಶನಿವಾರ ರಾತ್ರಿ ಕಾಕತಿಯ ಸಿದ್ಧೇಶ್ವರ ಮಂದಿರದಲ್ಲಿ ತಂಗಿದ್ದರು.
ಭಾನುವಾರ ಮುಂಜಾನೆ ಮುಕ್ತಿಮಠದಲ್ಲಿ ಉಪಾಹಾರ ಸೇವಿಸಿ ಪುನಃ ಪಾದಯಾತ್ರೆ ಆರಂಭಿಸಿದ್ದರು. ಮಧ್ಯಾಹ್ನ 12.30ರ ಹೊತ್ತಿಗೆ ಸುತಗಟ್ಟಿಯ ಘಟಪ್ರಭಾ ಸೇತುವೆ ಬಳಿ ಭಕ್ತರ ಒಂದು ಗುಂಪು ಹೆದ್ದಾರಿ ಪಕ್ಕದಲ್ಲಿ ಕುಳಿತಿದ್ದಾಗ ಬೆಳಗಾವಿಯಿಂದ ಚಿಕ್ಕೋಡಿಗೆ ಹೊರಟಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಭಕ್ತರ ಗುಂಪಿನ ಮೇಲೆ ಹಾಯ್ದು ಹೋಗಿದೆ. ರಸ್ತೆ ಸುರಕ್ಷತಾ ಕಂಬಗಳಿಗೆ ಉಜ್ಜಿಕೊಂಡು ಸುಮಾರು 100 ಅಡಿ ದೂರಕ್ಕೆ ಹೋಗಿ ಬಸ್ ನಿಂತಿದೆ. ಅದೃಷ್ಟವಶಾತ್ ಬಸ್ ರಸ್ತೆಯಿಂದ ಕೆಳಗೆ ಉರುಳಿ ಬೀಳದೇ ಇರುವುದರಿಂದ ಬಸ್ಸಿನೊಳಗಿದ್ದ ಪ್ರಯಾಣಿಕರೂ ಸಾವನ್ನಪ್ಪುವ ದುರಂತ ತಪ್ಪಿದಂತಾಗಿದೆ.
ವಿಠ್ಠಲನ ಭಾವಚಿತ್ರವನ್ನಿಟ್ಟುಕೊಂಡು ಹೋಗುತ್ತಿದ್ದ ರಥದ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೂಜೆಯ ಸಾಮಗ್ರಿಗಳು, ತಂಬೂರಿ, ಹಾರಗಳು ರಸ್ತೆಯ ತುಂಬೆಲ್ಲ ಹರಡಿಕೊಂಡಿದ್ದವು. ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದ ಕೈ, ವಸಡು, ಕರಳು ಅಪಘಾತದ ಭೀಕರತೆ ಸಾರುತ್ತಿದ್ದವು.
`ದಣಿವಾರಿಸಿಕೊಳ್ಳಲು ರಸ್ತೆಯ ಪಕ್ಕದಲ್ಲಿ ಕುಳಿತು ಭಜನೆ ಮಾಡುತ್ತಿದ್ದೆವು. ಏಕಾಏಕಿ ಆಗಮಿಸಿದ ಬಸ್ಸೊಂದು ಕ್ಷಣದಲ್ಲೇ ನಮ್ಮವರ ಪ್ರಾಣ ಕಿತ್ತುಕೊಂಡು ಹೋಯಿತು. ಜೂನ್ 26ರಂದು ಪಂಢರಪುರಕ್ಕೆ ನಾವೆಲ್ಲ ತಲುಪಲಿದ್ದೆವು. ನಮ್ಮವರನ್ನು ಕಳೆದುಕೊಂಡಿದ್ದರಿಂದ ವಾಪಸ್ ಊರಿಗೆ ತೆರಳುತ್ತಿದ್ದೇವೆ~ ಎಂದು ನೀಲಜಿ ಗ್ರಾಮದ ಪಾದಯಾತ್ರಿ ಮಲ್ಲಪ್ಪ ಮೋದಗೇಕರ `ಪ್ರಜಾವಾಣಿ~ಗೆ ತಿಳಿಸಿದರು.
ಬಸ್ಸಿನಡಿ ಸಿಲುಕಿದ ಗುಂಪಿನ ಸಮೀಪದಲ್ಲೇ ಕುಳಿತಿದ್ದ ಮಲ್ಲಪ್ಪ ಅವರು ಅಪಘಾತದ ಆಘಾತದಿಂದ ಇನ್ನೂ ಹೊರಬಂದಿರಲಿಲ್ಲ. ನಾವು ಮುಂದೆ ಹೋಗಿ ಎಲ್ಲರಿಗೂ ಅಡುಗೆ ಸಿದ್ಧಪಡಿಸುತ್ತಿದ್ದೆವು. ಕಾಲ್ನಡಿಗೆಯಲ್ಲಿ ಬರುತ್ತಿದ್ದ ಒಂದು ಗುಂಪು ಹಿಂದೆಯೇ ಉಳಿದುಕೊಂಡಿತ್ತು. ನಮ್ಮಲ್ಲಿ ಕೆಲವರಿಗೆ ಬಸ್ ಡಿಕ್ಕಿ ಹೊಡೆದ ಸುದ್ದಿ ತಿಳಿದು ವಾಪಸ್ ಓಡಿ ಬಂದೆವು. ವಿಠ್ಠಲನ ದರ್ಶನ ಪಡೆಯಲು ಹೊರಟಿದ್ದವರಿಗೆ ಇಂಥ ಸಾವು ಬರಬಾರದಿತ್ತು~ ಎಂದು ಪರಶುರಾಮ ಪಾಟೀಲ ವಿಷಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.