ADVERTISEMENT

ದಾವಣಗೆರೆ ನಗರ; ಜಿಲ್ಲೆಯ ಹರಿಹರ, ಹರಪನಹಳ್ಳಿ ತಾಲ್ಲೂಕಿನಲ್ಲಿ ಭಾರೀ ಮಳೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 15:25 IST
Last Updated 3 ಅಕ್ಟೋಬರ್ 2017, 15:25 IST
ಮೈದುಂಬಿದ ಕಕ್ಕರಗೊಳ್ಳ–ಕೊಂಡಜ್ಜಿ–ಬುಳ್ಳಾಪುರ ಹಳ್ಳ ಚಿತ್ರ: ಚೇನತ್‌, ಬುಳ್ಳಾಪುರ
ಮೈದುಂಬಿದ ಕಕ್ಕರಗೊಳ್ಳ–ಕೊಂಡಜ್ಜಿ–ಬುಳ್ಳಾಪುರ ಹಳ್ಳ ಚಿತ್ರ: ಚೇನತ್‌, ಬುಳ್ಳಾಪುರ   

ದಾವಣಗೆರೆ: ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಹಲವಡೆ ಸೋಮವಾರ ರಾತ್ರಿ ಭಾರೀ ಮಳೆ ಸುರಿದಿದೆ.

ದಾವಣಗೆರೆ ನಗರಲ್ಲಿ ರಾತ್ರಿ ಸುರಿದ ಭಾರೀ ಮಳೆಗೆ ರಸ್ತೆಗಳೆಲ್ಲ ಜಲಾವೃತವಾಗಿದ್ದವು. ಸಂಚಾರಕ್ಕೆ ಅಡ್ಡಿಯಾಗಿತ್ತು. ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿದೆ.

ಮೈದುಂಬಿದ ಕಕ್ಕರಗೊಳ್ಳ–ಕೊಂಡಜ್ಜಿ–ಬುಳ್ಳಾಪುರ ಹಳ್ಳ
ದಾವಣಗೆರೆಯಲ್ಲಿ ಧಾರಾಕಾರ ಮಳೆಯಾದ ಪರಿಣಾಮ ನಗರದ ನೀರು ಆವರಗೊಳ್ಳ–ಕಕ್ಕರಗೊಳ್ಳ–ಕೊಂಡಜ್ಜಿ–ಬುಳ್ಳಾಪುರ ಹಳ್ಳದಲ್ಲಿ ಭಾರೀ ನೀರು ಹರಿಯುತ್ತಿದ್ದು, ಮೈದುಂಬಿದೆ. ಒಂದೂವರೆ ತಿಂಗಳ ಹಿಂದೆಯಷ್ಟೆ ಹನಿ ನೀರಲ್ಲದೆ ಬರಿದಾಗಿದ್ದ ಹಳ್ಳ ಈಗ ನದಿಯಂತೆ ಮೈದುಂಬಿ ಹರಿಯುತ್ತಿದೆ. ಕಳೆದ ವಾರ ಬಿದ್ದ ಭಾರೀ ಮಳೆಗೂ ಹಳ್ಳ ಮೈದುಂಬಿ ಹರಿದಿತ್ತು.

ADVERTISEMENT

ಹರಿಹರ ತಾಲ್ಲೂಕು ಬುಳ್ಳಾಪುರ ಬಳಿ ಮೈದುಂಬಿ ಹರಿಯುತ್ತಿರುವ ಕಕ್ಕರಗೊಳ್ಳ–ಕೊಂಡಜ್ಜಿ ಹಳ್ಳ. ಚಿತ್ರ, ವಿಡಿಯೊ: ಚೇತನ್‌, ಬುಳ್ಳಾಪುರ

ಹಳ್ಳ ಮೈದುಂಬಿದ್ದು, ಅಕ್ಕ–ಪಕ್ಕದ ಜಮೀನುಗಳಿಗೂ ನೀರು ನುಗ್ಗಿದೆ. ಬೆಳೆಗಳು ಜಲಾವೃತವಾಗಿವೆ. ಈ ಹಳ್ಳ ಮುಂದೆ ಸಾಗಿ ಕರಲಹಳ್ಳಿ ಪಕ್ಕದಿಂದ ಹರಿದು ಸಾರಥಿ ಗ್ರಾಮದ ಪಕ್ಕ ತುಂಗಾ ಭದ್ರಾ ನದಿಗೆ ಸೇರುತ್ತದೆ.

ನೀರು ಇಂಗಿಸುವ; ಕೆರೆ–ಕಟ್ಟೆ ತುಂಬಿಸುವ ಕಾರ್ಯ ಆಗಬೇಕು
ಭಾರೀ ಮಳೆ ಬಂದಾಗ ಹಳ್ಳದಲ್ಲಿ ಅಪಾರ ಪ್ರಮಾಣ ನೀರು ಹರಿದು ತುಂಗಾ ಭದ್ರಾ ನದಿ ಸೇರುತ್ತದೆ. ಈ ನೀರನ್ನು ಕೆರೆ–ಕಟ್ಟೆಗಳಿಗೆ ತುಂಬಿಸುವ ಹಾಗೂ ಅಲ್ಲಲ್ಲಿ ಚೆಕ್‌ ಡ್ಯಾಂ ನಿರ್ಮಿಸಿ ಭೂಮಿಗೆ ಇಂಗಿಸುವ ಕಾರ್ಯ ಆಗಬೇಕು ಎನ್ನುತ್ತಾರೆ ಕೊಂಡಜ್ಜಿ, ಬುಳ್ಳಾಪುರ ಗ್ರಾಮದ ರೈತರಾದ ಮಲ್ಲಿಕಾರ್ಜುನ, ನಟರಾಜ, ಪ್ರಸನ್ನ ಕುಮಾರ್‌, ಜಿ.ಆರ್‌. ವೀರೇಶ್‌ ಇತರರು. 

ಹರಪನಹಳ್ಳಿ ಪಟ್ಟಣದಲ್ಲೂ ಅವಾಂತರ 

ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲೂ ಮಳೆಯ ಅವಾಂತರ ಸೃಷ್ಟಿಸಿದೆ. ಸೋಮವಾರ ರಾತ್ರಿ ಸತತ ಎರಡೂವರೆ ಗಂಟೆ ಮಳೆ ಸುರಿದಿದೆ.
ಬಿಇಒ ಕಚೇರಿ ಎದುರು ಮನೆಗಳಿಗೆ ನೀರು ನುಗ್ಗಿದೆ. ಬಿಎಸ್ಎ‌ನ್‌ಎಲ್ ಕಚೇರಿಗೂ ನೀರು ನುಗ್ಗಿದೆ.

ಪಟ್ಟಣದ ಅಯ್ಯನಕೆರೆ ತುಂಬಿದೆ. ಬಾಲಕಿಯರ ಸರ್ಕಾರಿ ಶಾಲೆ ಜಲಾವೃತಗೊಂಡಿದೆ.

ಭದ್ರಾ ಜಲಾಶಯ ಮಟ್ಟ
ಗರಿಷ್ಠ ಮಟ್ಟ 186 ಅಡಿ
ಮಂಗಳವಾರ ಬೆಳಿಗ್ಗೆ 168 ಅಡಿ 2 1/4 ಇಂಚು
ಒಳಹರಿವು 4,367 ಕ್ಯುಸೆಕ್
ಹೊರಹರಿವು 1,103 ಕ್ಯಸೆಕ್
ಕಳೆದ ವರ್ಷ ಇದೇ ದಿನ ಇದ್ದ ನೀರಿನ ಮಟ್ಟ 158 ಅಡಿ 5 ಇಂಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.