ಕಾರವಾರ: ಕಾರ್ಖಾನೆಗಾಗಿ ಮೀಸಲಿಟ್ಟಿದ್ದ ಸರ್ಕಾರಿ ಜಮೀನನ್ನು ತಮ್ಮ ಟ್ರಸ್ಟ್‌ಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿರುವ ಆರೋಪದ ಮೇಲೆ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
ಆರ್.ವಿ. ದೇಶಪಾಂಡೆ, ಪತ್ನಿ ರಾಧಾ, ಮಕ್ಕಳಾದ ಪ್ರಸಾದ ಹಾಗೂ ಪ್ರಶಾಂತ ವಿರುದ್ಧ ಸಾಮಾಜಿಕ ಕಾರ್ಯಕರ್ತ ಜಯಂತ ತಿನೇಕರ್ ಮಾರ್ಚ್ 10ರಂದು ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಶನಿವಾರ ಈ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಧೀಶ ಡಿ.ಆರ್.ರೇಣಕೆ ಅವರು ಪ್ರಕರಣದ ತನಿಖೆ ನಡೆಸಲು ಕಾರವಾರ ಲೋಕಾಯುಕ್ತ ಎಸ್ಪಿಗೆ ಸೂಚಿಸಿ, ಏಪ್ರಿಲ್ ತಿಂಗಳ ಅಂತ್ಯದೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದರು.
‘ಹಳಿಯಾಳ ತಾಲ್ಲೂಕಿನ ಹುಲ್ಲತ್ತಿ ಗ್ರಾಮದ 34.24 ಎಕರೆ ಭೂಮಿಯನ್ನು ಕಾರ್ಖಾನೆಗಾಗಿ ಉದ್ದೇಶಕ್ಕಾಗಿ ಮೀಸಲಿಟ್ಟಿರುವ ಬಗ್ಗೆ 2001ರ ಜನವರಿ 17ರಂದು ರಾಜ್ಯಪತ್ರದಲ್ಲಿ ಪ್ರಕಟವಾಗಿತ್ತು. ಇದಾದ ಕೆಲವೇ ದಿನಗಳಲ್ಲಿ 9.12 ಎಕರೆ ಭೂಮಿ ದೇಶಪಾಂಡೆ ನೇತೃತ್ವದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್‌ಗೆ ವರ್ಗಾವಣೆಯಾಗಿದೆ.
ಆಗ ದೇಶಪಾಂಡೆಯವರು ರಾಜ್ಯದ ಕೈಗಾರಿಕಾ ಸಚಿವರಾಗಿದ್ದರು. ಇದಾದ ನಂತರ ದೇಶಪಾಂಡೆ ಅವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಟ್ರಸ್ಟ್ ಹೆಸರಿನಲ್ಲಿ ದೊಡ್ಡ ದೊಟ್ ಕಂಪೆನಿಗಳಿಂದ ಭಾರಿ ಪ್ರಮಾ-ಣದಲ್ಲಿ ದೇಣಿಗೆ ಪಡೆದು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.