ADVERTISEMENT

ದೇಶ ಆಳುತ್ತಿರುವ ಸುಳ್ಳು, ಭ್ರಮೆ, ದ್ವೇಷ...

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 19:30 IST
Last Updated 22 ಅಕ್ಟೋಬರ್ 2017, 19:30 IST
ದೇಶ ಆಳುತ್ತಿರುವ ಸುಳ್ಳು, ಭ್ರಮೆ, ದ್ವೇಷ...
ದೇಶ ಆಳುತ್ತಿರುವ ಸುಳ್ಳು, ಭ್ರಮೆ, ದ್ವೇಷ...   

ಮೈಸೂರು: ‘ದೇಶವನ್ನು ಸುಳ್ಳು, ಭ್ರಮೆ ಹಾಗೂ ದ್ವೇಷ ಆಳ್ವಿಕೆ ಮಾಡುತ್ತಿದ್ದು, ಭಾರತವನ್ನು ಬಾಲಂಗೋಚಿ ಇಲ್ಲದ ಪಟದಂತೆ ಆಡಿಸುತ್ತಿವೆ’ ಎಂದು ಸಾಹಿತಿ ದೇವನೂರ ಮಹಾದೇವ ಬೇಸರ ವ್ಯಕ್ತಪಡಿಸಿದರು.

ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ವರಾಜ್‌ ಇಂಡಿಯಾದ ಕ್ರಿಯಾಶೀಲ ಕಾರ್ಯಕರ್ತರ ಸಮಾಲೋಚನಾ ಸಭೆ ಹಾಗೂ ಮೈಸೂರು ನಗರ, ಗ್ರಾಮಾಂತರ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜಕಾರಣಿಗಳು ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವ ರಂತೆ ಕಾಣಿಸುತ್ತಿ ದ್ದಾರೆ. ಮಾತಲ್ಲೇ ಮನೆ ಕಟ್ಟುವ ರಾಜಕಾರಣ ದುಡ್ಡು ಸುರಿದು ದುಡ್ಡು ಮಾಡುವ ದಂಧೆಯಾಗಿದೆ. ಹೀಗಾಗಿ, ಇಲ್ಲಿ ಜೀವಗಳಿಗೆ ಬೆಲೆ ಇಲ್ಲ. ಶಾಂತಿ ಮತ್ತು ಪ್ರೀತಿಯಿಂದ ವಿಧ್ವಂಸಕ ರಾಜಕಾರಣವನ್ನು ರಚನಾತ್ಮಕವಾಗಿ ಹಿಮ್ಮೆಟ್ಟಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಉದ್ಯೋಗವೇ ಅಭಿವೃದ್ಧಿಯ ಮಾನದಂಡವಾಗಬೇಕು. ಆದರೆ, ಉದ್ಯೋಗ ಆಕಾಂಕ್ಷಿಗಳೇ ಉದ್ಯೋಗದಾತರಾಗಬೇಕು ಎನ್ನುವುದು ಆಳುವವರ ವಾದ. ಗಾಯದ ಮೇಲೆ ಬರೆ ಎಳೆಯುವಂಥ ಈ ದೃಷ್ಟಿಕೋನ ಕ್ರೌರ್ಯದ ಪರಮಾವಧಿ. ಈ ಕ್ರೌರ್ಯಕ್ಕೆ ಮುಖಾಮುಖಿಯಾಗುವ ಅಗತ್ಯವಿದೆ. ಕೈಮಗ್ಗ ಉತ್ಪನ್ನಕ್ಕೆ ಶೂನ್ಯ ಕರ ನಿಗದಿಪಡಿಸಬೇಕು ಎಂಬ ರಂಗಕರ್ಮಿ ಪ್ರಸನ್ನರ ಧ್ವನಿಗೆ ಧ್ವನಿಗೂಡಿಸಬೇಕಿದೆ’ ಎಂದು ಸಲಹೆ ನೀಡಿದರು.

‘ಚುನಾವಣೆ ಮಾತ್ರ ರಾಜಕಾರಣವಲ್ಲ. ಜನಪರ ಹೋರಾಟ, ರಚನಾತ್ಮಕ ಕೆಲಸ, ಸೈದ್ಧಾಂತಿಕ ಸಂವಾದ ಹಾಗೂ ಅಂತರಂಗದ ಸಮತ್ವ ಕೂಡ ರಾಜಕಾರಣ. ಸಮಾಜದ ಬಗೆಗೆ ಸಮಗ್ರ ನೋಟ ನೀಡಲು ಸ್ವರಾಜ್‌ ಇಂಡಿಯಾ ನಮ್ಮೆದುರು ಬಂದಿದೆ. ಇದಕ್ಕೆ ಸಿದ್ಧವಾದ ಹೆಜ್ಜೆ, ನುಡಿಗಳನ್ನು ಹುಡುಕಬೇಕಿದೆ. ಸಹನೆ, ಪ್ರೀತಿ, ಸಹಬಾಳ್ವೆ ಹಾಗೂ ಸಮಾನತೆಯತ್ತ ಹೆಜ್ಜೆ ಹಾಕಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.