ಮುಳಬಾಗಲು: ಪಂಚೇಂದ್ರಿಯಗಳ ಹೊರತಾದ ವಿಶಿಷ್ಟ ಗ್ರಹಣಾ ಶಕ್ತಿಯ ಬಗ್ಗೆ ಪ್ರಸ್ತಾಪಿಸಿ, ಮನುಷ್ಯ ಜಗತ್ತನ್ನು ನೋಡಬೇಕಾದ ಕ್ರಮಕ್ಕೆ ಹೊಸ ಆಯಾಮ ನೀಡಿದ್ದ ದೇಸಿ ಚಿಂತಕ ಎಂ.ದಾಸಪ್ಪ (83) ಭಾನುವಾರ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ನಿಧನರಾದರು.
ವಿಶ್ವದ ಎಲ್ಲ ಅಂಶಕ್ಕೂ ಗಣಿತವೇ ಆಧಾರ ಎಂಬ ಪೈತಾಗಾರಸ್ ಪ್ರತಿಪಾದನೆಯನ್ನು ಹೊಸ ಕ್ರಮದಲ್ಲಿ ವಿಸ್ತರಿಸಿ, ಜಗತ್ತಿನ ಎಲ್ಲ ಕ್ರಿಯೆಗಳಿಗೂ ಗಣಿತ ಸಾಗರವೇ ಕಾರಣ ಎಂದು ದಾಸಪ್ಪ ವ್ಯಾಖ್ಯಾನಿಸಿದ್ದರು. ದಾಸಪ್ಪನವರ ಚಿಂತನೆಗಳನ್ನು ಇತಿಹಾಸ ಪ್ರಾಧ್ಯಾಪಕರಾದ ಜಿ.ಶಿವಪ್ಪ ‘ಶೂನ್ಯ ಮಹಿಮೆ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ದೇವನೂರು ಮಹಾದೇವ ಅವರು ಕಳೆದ ವರ್ಷ ದಾಸಪ್ಪ ಅವರಿಗೆ ಕೋಲಾರದ ಆದಿಮ ಸಂಸ್ಥೆಯಲ್ಲಿ ‘ಗದ್ದುಗೆ ಗೌರವ’ ಸಲ್ಲಿಸಿದ್ದರು. ಕಲಾವಿದ ಅರವಿಂದ ಕಟ್ಟಿ ಅವರು ದಾಸಪ್ಪನವರ ಚಿಂತನೆ ಪ್ರತಿನಿಧಿಸುವ ಚಿಂತನೆಗಳಿಗೆ ಚಿತ್ರರೂಪ ನೀಡಿದ್ದರು.
‘ದಾಸಪ್ಪ ನಮ್ಮ ನೆಲದ ಬಹುದೊಡ್ಡ ಆಧ್ಯಾತ್ಮಿಕ ಚಿಂತಕ. ಅವರ ಸಾವಿನಿಂದ ಮಾನವೀಯ ಸಂತನನ್ನು ಈ ನೆಲ ಕಳೆದುಕೊಂಡಂತೆ ಆಗಿದೆ’ ಎಂದು ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.