ADVERTISEMENT

ದೇಸೀಭಾಷೆ ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ

ಮಾತೃಭಾಷೆಯಲ್ಲಷ್ಟೇ ಕನಸು ಕಾಣಲು ಸಾಧ್ಯ: ವಾಜಪೇಯಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2013, 19:45 IST
Last Updated 27 ಸೆಪ್ಟೆಂಬರ್ 2013, 19:45 IST
ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಘಟಕ ವಿಕ್ರಮ್ ಸಂಪತ್, ಹಿರಿಯ ಸಾಹಿತಿಗಳಾದ ಅಶೋಕ ವಾಜಪೇಯಿ, ನವನೀತ ದೇವ್‌ ಸೇನ್, ಡಾ.ಚಂದ್ರಶೇಖರ ಕಂಬಾರ ಅವರು ಸಂಭ್ರಮಿಸಿದ್ದು ಹೀಗೆ 	–ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ನಡೆದ ಬೆಂಗಳೂರು ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಸಂಘಟಕ ವಿಕ್ರಮ್ ಸಂಪತ್, ಹಿರಿಯ ಸಾಹಿತಿಗಳಾದ ಅಶೋಕ ವಾಜಪೇಯಿ, ನವನೀತ ದೇವ್‌ ಸೇನ್, ಡಾ.ಚಂದ್ರಶೇಖರ ಕಂಬಾರ ಅವರು ಸಂಭ್ರಮಿಸಿದ್ದು ಹೀಗೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಾಲ್ಯದ ನೆನಪುಗಳಿಲ್ಲದ, ಕನಸುಗಳ ಬಣ್ಣವಿಲ್ಲದ, ಭಾವನೆಗಳ ಹೂರಣ­ವಿಲ್ಲದ ಇಂಗ್ಲಿಷ್‌ ಗೊಡವೆ ನಮಗೇಕೆ’ ಎಂಬ ಪ್ರಶ್ನೆಯನ್ನು ಮುಂದಿಟ್ಟ ಖ್ಯಾತ ಹಿಂದಿ ಸಾಹಿತಿ ಅಶೋಕ ವಾಜಪೇಯಿ, ‘ನಮ್ಮ ದೇಸೀಭಾಷೆಗಳು ಇಂಗ್ಲಿಷ್‌ಗಿಂತ ಯಾವುದರಲ್ಲೂ ಕಡಿಮೆ ಇಲ್ಲ’ ಎಂದು ಹೆಮ್ಮೆಪಟ್ಟರು.

ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ‘ದೇಶ ಭಾಷೆ ಮತ್ತು ಇಂಗ್ಲಿಷ್‌’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಅತ್ತ ಇಂಗ್ಲಿಷ್‌ನಲ್ಲಿ ಮೂರನೇ ದರ್ಜೆ ಲೇಖಕರೂ ಇದ್ದಾರೆ. ಇತ್ತ ದೇಸೀ ಭಾಷೆಗಳಲ್ಲಿ ಅದ್ಭುತ ಎನ್ನುವಂತಹ ಸೃಜನಶೀಲ ಸಾಹಿತ್ಯ ಸಹ ಸೃಷ್ಟಿಯಾಗಿದೆ. ಆ ಭಾಷೆ ಹೆಸರು ಎತ್ತಿದೊಡನೆ ನಮಗೆ ಕೀಳರಿಮೆ ಏಕೆ’ ಎಂದು ಕೇಳಿದರು.

‘ದೇಶದ ಗಡಿಯಾಚೆ ನಮ್ಮ ಸಾಹಿತ್ಯ ತಲುಪಬೇಕಾದರೆ ಇಂಗ್ಲಿಷ್‌ನಲ್ಲೇ ಬರೆಯಬೇಕು ಎನ್ನುವ ವಾದವಿದೆ. ಆದರೆ, ನಮ್ಮ ಭಾವನೆಗಳು ಮಾತೃಭಾಷೆಯಲ್ಲಿ ಸಶಕ್ತವಾಗಿ ಹೊರಹೊಮ್ಮಿದಷ್ಟು ಪರಭಾಷೆಯಲ್ಲಿ ಮೂಡುವುದಿಲ್ಲ. ಬೇಕಾದರೆ ಬಳಿಕ ಅನುವಾದವನ್ನು ಮಾಡಬಹುದಷ್ಟೇ’ ಎಂದು ಅಭಿಪ್ರಾಯಪಟ್ಟರು.

‘ಭಾರತದ ಬಹುದೊಡ್ಡ ಸಮುದಾಯ ಮಾತೃಭಾಷೆಯನ್ನು ಮರೆತು ಇಂಗ್ಲಿಷ್‌ನ ಬೆನ್ನುಹತ್ತಿದೆ. ಗಲ್ಲಿ–ಗಲ್ಲಿಗಳಲ್ಲಿ ಇಂಗ್ಲಿಷ್‌ ಶಾಲೆಗಳು ತಲೆ ಎತ್್ತಿವೆ. ದೇಶದ ಮುಂದಿರುವ ಗಂಭೀರವಾದ ಸಮಸ್ಯೆ ಇದು’ ಎಂದು ಹೇಳಿದರು.

ಇಂಗ್ಲಿಷ್‌ಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎನ್ನುವುದನ್ನು ಒಪ್ಪಿಕೊಂಡ ಮತ್ತೊಬ್ಬ ಹಿರಿಯ ಸಾಹಿತಿ ಗುಲ್ಜಾರ್‌, ವಿನಾಕಾರಣ ಆ ಭಾಷೆಯನ್ನು ದೂಷಿಸುವ ಅಥವಾ ದ್ವೇಷಿಸುವ ಅಗತ್ಯವೂ ಇಲ್ಲ ಎಂದು ಪ್ರತಿಪಾದಿಸಿದರು. ‘ನನಗೆ ಶಾಯಿರಿ ಬರೆಯಲು ಹಿಂದಿ ಭಾಷೆಯೇ ಬೇಕು. ಅದೇ ನ್ಯೂಕ್ಲಿಯರ್‌ ಕುರಿತ ಅಧ್ಯಯನಕ್ಕೆ ಇಂಗ್ಲಿಷ್‌ ಬಳಸಲು ಯಾವುದೇ ಹಿಂಜರಿಕೆ ಇಲ್ಲ’ ಎಂದು ತಿಳಿಸಿದರು.

‘ಇಂಗ್ಲಿಷ್‌ ನಮಗೆ ಎಲ್ಲದಕ್ಕೂ ಮಾದರಿ ಆಗಬೇಕಿಲ್ಲ’ ಎಂದ ಅವರು, ‘ನದಿಪಾತ್ರದಲ್ಲಿ ನೀರು ಮೈದುಂಬಿ ಹರಿಯುವಂತೆ ಮಾತೃಭಾಷೆಯಲ್ಲೇ ಭಾವಗಳು ಉಕ್ಕುತ್ತವೆ. ಇದೇ ಕಾರಣದಿಂದ ನಾನು ಹಿಂದಿಯಲ್ಲಿ ಪ್ರೀತಿಯಿಂದ ಬರೆಯುತ್ತೇನೆ’ ಎಂದು ಹೇಳಿದರು.

‘ಇಂಗ್ಲಿಷ್‌ಗೆ ಇರುವ ಮಾರುಕಟ್ಟೆ ಬಲು ದೊಡ್ಡದು. ಅದನ್ನು ಕಲಿತರೆ ನೌಕರಿ ಸಿಗುತ್ತದೆ ಎಂಬ ಭಾವವೂ ಗಟ್ಟಿಯಾಗಿದೆ. ಆದ್ದರಿಂದಲೇ ಜನ ಆ ಭಾಷೆಯತ್ತ ಆಕರ್ಷಣೆಗೆ ಒಳಗಾಗಿರಬಹುದು’ ಎಂದು ಅಭಿಪ್ರಾಯಪಟ್ಟರು.

ಬೆಂಗಾಲಿ ಲೇಖಕಿ ನವನೀತ ದೇವಸೇನ್‌, ‘ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ನಾವಿದ್ದೇವೆ. ಮಕ್ಕಳ ಇಂಗ್ಲಿಷ್‌ ವ್ಯಾಮೋಹ ನೋಡಿದರೆ ನಾವು ಅವರಿಂದ ಬೇರ್ಪಡೆಯಾದಂತಹ ಭಾವ ಕಾಡುತ್ತಿದೆ’ ಎಂದು ವ್ಯಥೆಪಟ್ಟರು. ‘ದೇಸೀಭಾಷೆಗಳ ಇಂಗ್ಲಿಷ್‌ ಅನುವಾದ ಸಾಮಾನ್ಯವಾಗಿ ಕೆಟ್ಟದಾಗಿರುತ್ತದೆ’ ಎಂದು ವಿಷಾದದ ನಗು ಬೀರಿದರು.

ಸಂವಾದವನ್ನು ನಿರ್ವಹಿಸಿದ ಮಲೆಯಾಳಂ ಸಾಹಿತಿ ಕೆ.ಸಚ್ಚಿದಾನಂದನ್‌, ‘ಇಂಗ್ಲಿಷ್‌, ಎಲ್ಲಾ ಭಾಷೆಗಳಿಗೆ ಒಂದು ಸೇತುಬಂಧವಾಗಿ ಕೆಲಸ ಮಾಡುತ್ತಿದೆ. ಇಂಗ್ಲಿಷ್‌ ಪುಸ್ತಕ ಮತ್ತು ಪತ್ರಿಕೆಗಳ ಮುದ್ರಣದಲ್ಲಿ ನಾವು ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ದೇಶದ ಜನಜೀವನದೊಂದಿಗೆ ಆ ಭಾಷೆ ಅಷ್ಟೊಂದು ಹಾಸುಹೊಕ್ಕಾಗಿದೆ’ ಎಂದು ಮತ್ತೊಂದು ಆಯಾಮದ ಮೇಲೆ ಬೆಳಕು ಚೆಲ್ಲಿದರು.

‘ಭಾರತದ ಬಹುತೇಕ ಸಾಹಿತಿಗಳು ತಮ್ಮ ಮಾತೃಭಾಷೆಯಲ್ಲಿ ಚಿಂತಿಸಿ, ಬಳಿಕ ಇಂಗ್ಲಿಷ್‌ನಲ್ಲಿ ಬರೆಯುತ್ತಾರೆ. ಇಲ್ಲದಿದ್ದರೆ ಭಾವನೆಗಳನ್ನು ಸಶಕ್ತವಾಗಿ ಅಭಿವ್ಯಕ್ತಿಗೊಳಿಸುವುದು ಸಾಧ್ಯವಿಲ್ಲ’ ಎಂದು ಹೇಳಿದರು.

ಸಾಹಿತ್ಯೋತ್ಸವವನ್ನು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಉದ್ಘಾಟಿಸಿದರು. ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ, ವಿಕ್ರಂ ಸಂಪತ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.