ADVERTISEMENT

‘ದೋಸ್ತಿ’ಗಳ ಮಧ್ಯೆ ಸಂಘರ್ಷ

ಬಜೆಟ್‌ ಮಂಡನೆ ಬೇಡ– ಸಿದ್ದರಾಮಯ್ಯ: ಮಂಡಿಸಿಯೇ ಸಿದ್ಧ– ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 18:37 IST
Last Updated 16 ಜೂನ್ 2018, 18:37 IST
‘ದೋಸ್ತಿ’ಗಳ ಮಧ್ಯೆ ಸಂಘರ್ಷ
‘ದೋಸ್ತಿ’ಗಳ ಮಧ್ಯೆ ಸಂಘರ್ಷ   

ಬೆಂಗಳೂರು: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರದ ಹೊಸ ಬಜೆಟ್‌ ಮಂಡನೆ ವಿಷಯ ‘ದೋಸ್ತಿ’ಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.

‘ಜುಲೈ ಮೊದಲ ವಾರದಲ್ಲಿ ಹೊಸ ಬಜೆಟ್‌ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶುಕ್ರವಾರ ಪ್ರಕಟಿಸಿದ ಬೆನ್ನಲ್ಲೇ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ತಕರಾರು ತೆಗೆದಿದ್ದಾರೆ.

‘ಮೈತ್ರಿ ಸರ್ಕಾರ ಒಂದು ವರ್ಷ ಭದ್ರ’ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ ಮಾರನೇ ದಿನವೇ ಮಿತ್ರ ಪಕ್ಷದ ನಾಯಕರಿಂದ ಈ ರೀತಿಯ ಹೇಳಿಕೆ ಬಂದಿರುವುದು ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆ ಹಾಗೂ ಊಹೆಗಳಿಗೂ ಕಾರಣವಾಗಿದೆ. 12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಶನಿವಾರ ಧರ್ಮಸ್ಥಳಕ್ಕೆ ತೆರಳುವ ಮುನ್ನ ಸಿದ್ದರಾಮಯ್ಯ ಹೀಗೆ ಹೇಳಿರುವುದು ಗಂಭೀರ ಚರ್ಚೆಗಳಿಗೂ ನಾಂದಿ ಹಾಡಿದೆ.

ADVERTISEMENT

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಫೆಬ್ರುವರಿಯಲ್ಲೇ ನಾನು ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಿದ್ದೆ. ಜುಲೈ ಅಂತ್ಯದ ವರೆಗಿನ ಲೇಖಾನುದಾನಕ್ಕೂ ಒಪ್ಪಿಗೆ ಪಡೆದಿದ್ದೇವೆ. ಹೀಗಾಗಿ, ಹೊಸ ಬಜೆಟ್‌ ಮಂಡನೆಯ ಅಗತ್ಯ ಇಲ್ಲ. ಹೊಸ ಕಾರ್ಯಕ್ರಮಗಳನ್ನು ಸೇರಿಸಿ ಪೂರಕ ಬಜೆಟ್ ಮಂಡಿಸಲಿ’ ಎಂದು ಬಲವಾಗಿ ಪ್ರತಿಪಾದಿಸಿದರು.

ಇದಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, 'ಹೊಸದಾಗಿ ಆರಿಸಿ ಬಂದ ಯಾವುದೇ ಸರ್ಕಾರ ತನ್ನ ಉದ್ದೇಶ ಕಾರ್ಯಕ್ರಮ ಗೊತ್ತು ಗುರಿಗಳನ್ನು ಜನತೆಗೆ ತಿಳಿಸಲು ಪೂರ್ಣಪ್ರಮಾಣದ ಆಯವ್ಯಯ ಮುಂಗಡ ಪತ್ರದಿಂದ ಸಾಧ್ಯವೇ ವಿನಾ ಪೂರಕ ಬಜೆಟ್ ಮಂಡನೆಯಿಂದ ಆಗುವುದಿಲ್ಲ. ಜನತೆಗೆ ಚುನಾವಣಾ ಸಂದರ್ಭದಲ್ಲಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಸಮ್ಮಿಶ್ರ ಸರ್ಕಾರ ಕ್ರೋಢೀಕರಿಸಿ ಜಾರಿ ಮಾಡಲು ಪೂರ್ಣ ಪ್ರಮಾಣದ ಬಜೆಟ್ ಮಂಡನೆಯೇ ಆಗಬೇಕು. ಹೊಸ ಸರ್ಕಾರವು ಹೊಸ ಬಜೆಟ್ ಮಂಡಿಸಿಯೇ ಜನತೆಗೆ ಸಂದೇಶ ತಲುಪಿಸುವುದು ವಾಡಿಕೆ. ಚುನಾವಣೆಯ ನಂತರ ಇನ್ನೊಂದು ಬಜೆಟ್ ಮಂಡಿಸಬೇಕಾಗಬಹುದು ಎಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಫೆಬ್ರುವರಿ 16ರಂದು ಬಜೆಟ್ ಮಂಡಿಸಿದಾಗ ಹೇಳಿದ್ದುಂಟು' ಎಂದು ವಿವರಿಸಿದರು.

ಸಿದ್ದರಾಮಯ್ಯ ಪ್ರತಿಪಾದನೆ: ‘ಕಾಂಗ್ರೆಸ್‌ ಸರ್ಕಾರ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು ಆರಂಭಿಸಿತ್ತು. ಜತೆಗೆ, ಈ ವರ್ಷ ಹಲವು ಹೊಸ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಈ ಎಲ್ಲ ಯೋಜನೆಗಳು ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಯಲಿದೆ. ಕುಮಾರಸ್ವಾಮಿ ಹೊಸ ಯೋಜನೆಗಳನ್ನು ಸೇರಿಸಲು ಪೂರಕ ಬಜೆಟ್‌ ಮಂಡಿಸಲಿ’ ಎಂದು ಅವರು ಸಲಹೆಯನ್ನು ನೀಡಿದರು.

ಏನಿದು ಪೂರಕ ಬಜೆಟ್‌

ಬಜೆಟ್‌ನಲ್ಲಿ ಘೋಷಿಸಿದ ಯೋಜನೆ, ಕಾರ್ಯಕ್ರಮಗಳಿಗೆ ವಿಧಾನಮಂಡಲದಲ್ಲಿ ಅನುಮೋದನೆ ಪಡೆದ ಬಳಿಕ, ಮಾಡಲೇಬೇಕಾದ ಖರ್ಚು ಹಾಗೂ ಹೊಸ ಕಾರ್ಯಕ್ರಮಗಳಿಗೆ ಬೇಕಾದ ಅನುದಾನವನ್ನು ‘ಪೂರಕ ಬಜೆಟ್’ ಹೆಸರಿನಲ್ಲಿ ಒದಗಿಸಿಕೊಳ್ಳಲಾಗುತ್ತದೆ.

ಇದಕ್ಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ 2 ಅಥವಾ 3 ಪೂರಕ ಬಜೆಟ್‌ಗಳನ್ನು ಮಂಡಿಸುವ ಪರಿಪಾಠ ಇದೆ.

‘ಜನರೇ ತಿರಸ್ಕರಿಸಿದ ಮೇಲೆ ಇನ್ನೇನಿದೆ’

‘ನಮ್ಮ ಸರ್ಕಾರದ ಯೋಜನೆಗಳನ್ನು ಜನರು ಒಪ್ಪಿಲ್ಲ. ನಮ್ಮನ್ನು ತಿರಸ್ಕರಿಸಿದ್ದಾರೆ’ ಎಂದು ಹೇಳಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೈತ್ರಿ ಸರ್ಕಾರದ ಹೊಸ ಬಜೆಟ್‌ ಮಂಡನೆಗೆ ವಿರೋಧ ವ್ಯಕ್ತಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೂ ಮುನ್ನ ಹಿರಿಯ ನಾಯಕರು ಸಲಹೆ ನೀಡಲಿದ್ದಾರೆ. ಪಕ್ಷದ ಅಧ್ಯಕ್ಷನಾಗಲು ನನಗೆ ಆಸಕ್ತಿ ಇಲ್ಲ. ಜನರೇ ತಿರಸ್ಕರಿಸಿದ ಮೇಲೆ ಇನ್ನೇನಿದೆ’ ಎಂದು ಪ್ರಶ್ನಿಸಿದರು.

* ಸದ್ಯವೇ ಸಚಿವ ಸಂಪುಟ ಸಭೆ ನಡೆಸುತ್ತೇನೆ. ಹೊಸ ಬಜೆಟ್ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯುತ್ತೇನೆ. ಬಜೆಟ್ ಮಂಡನೆಯ ದಿನಾಂಕ ಗೊತ್ತು ಮಾಡುತ್ತೇನೆ

- ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

* ಪೂರಕ ಬಜೆಟ್‌ನಲ್ಲಿ ಹೊಸ ಯೋಜನೆಗೆ ಅನುದಾನ ಒದಗಿಸುವುದಕ್ಕೆ ಸಮಸ್ಯೆ ಇಲ್ಲ. ಇದಕ್ಕೆ ಸಂವಿಧಾನದ 205ನೇ ಕಲಂನಲ್ಲಿ ಅವಕಾಶ ಇದೆ

- ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.