ADVERTISEMENT

ದ್ವೇಷದ ರಾಜಕೀಯ:ಗೌಡರ ಕಿಡಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 18:40 IST
Last Updated 27 ಅಕ್ಟೋಬರ್ 2011, 18:40 IST

ಬೆಂಗಳೂರು: `ಕೃಷ್ಣಾ ಮೇಲ್ದಂಡೆ ಯೋಜನೆಯ ತುಂಡುಗುತ್ತಿಗೆ ಕಾಮಗಾರಿಗಳಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಆದರೂ ದ್ವೇಷಕ್ಕಾಗಿ ನಮ್ಮ ಕುಟುಂಬವನ್ನು ಒಂದಲ್ಲ, ಒಂದು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ~ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

`ರಾಜ್ಯದಲ್ಲಿ ಎಲ್ಲವೂ ಜಾತಿ ಆಧಾರದ ಮೇಲೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಎದುರಿಸುವ ಶಕ್ತಿ ಜೆಡಿಎಸ್‌ಗೆ ಇದೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ.  ಈಗಷ್ಟೇ ಯುದ್ಧ ಆರಂಭವಾಗಿದೆ. ಜಾತಿಗೆ ಮನ್ನಣೆ ಸಿಗುತ್ತದೊ ಅಥವಾ ದೇವೇಗೌಡರು ಮಾಡಿರುವ ಕೆಲಸಕ್ಕೆ ಮನ್ನಣೆ ಸಿಗುತ್ತದೊ ನೋಡೋಣ~ ಎಂದು ಪರೋಕ್ಷವಾಗಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ತುಂಡುಗುತ್ತಿಗೆ ಕಾಮಗಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂಬ ಕಾರಣಕ್ಕಾಗಿ ಸಿಐಡಿಯಲ್ಲಿ ಹಿಂದೆ ಎಡಿಜಿಪಿಯಾಗಿದ್ದ ಡಿ.ವಿ.ಗುರುಪ್ರಸಾದ್ ಈ ಪ್ರಕರಣವನ್ನು ಬದಿಗೊತ್ತಿದ್ದರು. ಆದರೆ ಈಗಿನ ಡಿಜಿಪಿ ಶಂಕರ ಬಿದರಿ, ಪೊಲೀಸ್ ಮಹಾನಿರ್ದೇಶಕರಾಗುವ ಆಸೆಯಿಂದ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

`ಗುರುಪ್ರಸಾದ್ ಯೋಗ್ಯ ಅಧಿಕಾರಿಯೊ, ಭ್ರಷ್ಟರಾಗಿದ್ದರೊ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಶಂಕರ ಬಿದರಿ ದೂರು ದಾಖಲಿಸುವ ಮೂಲಕ ಅಧಿಕಾರಿಗಳಿಗೆ ದೀಪಾವಳಿ ಉಡುಗೊರೆ ಕೊಟ್ಟಿದ್ದಾರೆ~ ಎಂದು ವ್ಯಂಗ್ಯವಾಡಿದರು.

`ಅಧಿಕಾರಿಗಳನ್ನು ಬಲಿಪಶುಗಳನ್ನಾಗಿ ಮಾಡಲು ಹೊರಟಿದ್ದಾರೆ ಎಂಬ ಭಾವನೆ ಬರುವುದು ಸಹಜ. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಪರಿಶ್ರಮ ನನಗೆ ಗೊತ್ತಿದೆ. ಅವರು ರಾಜ್ಯದ ಒಳಿತಿಗಾಗಿ ಮಾಡಿರುವ ವಾಸ್ತವಾಂಶ ಜನರಿಗೆ ಗೊತ್ತಾದಾಗ ಅಪರಾಧಿಗಳಲ್ಲ ಎಂಬುದು ತಿಳಿಯುತ್ತದೆ. ನಾನು ನಿಮ್ಮಂದಿಗೆ ಇದ್ದೇನೆ~ ಎಂದು ಅವರು ಅಧಿಕಾರಿಗಳಿಗೆ ಅಭಯ ನೀಡಿದರು.

ಯಡಿಯೂರಪ್ಪ ಜೈಲು, ಆಸ್ಪತ್ರೆ ಸೇರುವ ಮುನ್ನ ರಹಸ್ಯ ಸ್ಥಳದಲ್ಲಿ ಮಿನಿ ಸಚಿವ ಸಂಪುಟ ಸಭೆ ನಡೆಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಜೈಲಿಗೆ ಹೋದರೂ ಶಕ್ತಿ ಇದೆ ಎಂಬುದನ್ನು ತೋರಿಸಿದ್ದಾರೆ.  ಇಂತಹ ವ್ಯವಸ್ಥೆ ಹೊಸದು. ನಮಗೇನೂ ಬೇಸರವಿಲ್ಲ. ಯಾರ ಹತ್ತಿರವೂ ಹೋಗಿ ಕೈಕಾಲು ಹಿಡಿಯುವುದಿಲ್ಲ. ಹೋರಾಟಕ್ಕೆ ಸಿದ್ಧರಿದ್ದೇವೆ ಎಂದರು.

`ದೇವೇಗೌಡರು ಮನೆಯಲ್ಲಿ ಮಲಗಿದ್ದಾರೆ. ಅವರು ಹೋರಾಟಕ್ಕೆ ಬರುವುದಿಲ್ಲ ಎಂಬ ಭಾವನೆ ಇತ್ತು. ಆದರೆ ನಿಜವಾದ ಯುದ್ಧ ಈಗ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಧರ್ಮಸಿಂಗ್, ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ಬರಲಿ, ಯಾವ ದಾಕ್ಷಿಣ್ಯವೂ ಇಲ್ಲ. ಎದುರಿಸಲು ಸಿದ್ಧನಿದ್ದೇನೆ~ ಎಂದು ಹೇಳಿದರು.

ಮಾಜಿ ಸಚಿವ ವೈಜನಾಥ್ ಪಾಟೀಲ ನೇತೃತ್ವದ ಅಂದಾಜು ಸಮಿತಿ ನೀಡಿದ್ದ ವರದಿಯನ್ನು ಜೆ.ಎಚ್.ಪಟೇಲ್ ಮತ್ತು ಎಸ್.ಎಂ.ಕೃಷ್ಣ ಸರ್ಕಾರ ತಿರಸ್ಕರಿಸಿತ್ತು. ರಾಜ್ಯದ ಇತಿಹಾಸದಲ್ಲಿ ಇದೊಂದು ಪ್ರಮುಖ ಯೋಜನೆಯಾಗಿದ್ದು, ಈ ಬಗ್ಗೆ ಹಲವು ವದಂತಿ, ಕಟ್ಟುಕತೆಗಳು ಕೇಳಿಬರುತ್ತಿವೆ ಎಂದು ಸಮಿತಿ ಹೇಳಿದೆಯೇ ಹೊರತು ಅವ್ಯವಹಾರ ನಡೆದಿದೆ ಎಂದು ವರದಿಯಲ್ಲಿ ಹೇಳಿಲ್ಲ ಎಂದರು.

`2000ನೇ ಇಸವಿಯ ಜೂನ್‌ಗೆ ಕೃಷ್ಣಾ ಯೋಜನೆಯ `ಎ~ ಸ್ಕೀಂನಡಿ ಲಭ್ಯವಾಗುವ ನೀರನ್ನು ಬಳಸಿಕೊಳ್ಳಬೇಕು ಎಂಬ ದೃಷ್ಟಿಯಿಂದ ಪ್ರತಿ ವರ್ಷ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿತ್ತು. ಸಚಿವ ಸಂಪುಟ ಮತ್ತು ತಾಂತ್ರಿಕ ಸಮಿತಿ ತೀರ್ಮಾನದಂತೆ ಕಾಮಗಾರಿಗಳು ನಡೆದಿವೆ. ಮೆದುಕಲ್ಲು ಮತ್ತು ಗಟ್ಟಿಕಲ್ಲು ಎಂಬ ವರ್ಗೀಕರಣ 1991ರಲ್ಲಿ ಆಗಿದೆ. 1994ರ ಡಿಸೆಂಬರ್ 11ರಂದು ನಾನು ಮುಖ್ಯಮಂತ್ರಿ ಆದೆ. ಆ ನಂತರ ಯಾವುದೇ ಅವ್ಯವಹಾರ ನಡೆದಿಲ್ಲ~ ಎಂದು ಅವರು ಸ್ಪಷ್ಟಪಡಿಸಿದರು.

ಹಾಸನ ಜಿಲ್ಲೆಯ ಅಭಿವೃದ್ಧಿ ನಿರ್ಲಕ್ಷಿಸುತ್ತಿರುವುದನ್ನು ಖಂಡಿಸಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸದ ಮುಂದೆ ಧರಣಿ ನಡೆಸಿದಾಗ 18 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡುವುದಾಗಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳ ಮೂಲಕ ಪತ್ರ ಕಳುಹಿಸಿದ್ದರು.

ಆಗಿನ ಮುಖ್ಯಮಂತ್ರಿ ನೀಡಿದ್ದ ಪತ್ರವನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಕಳುಹಿಸಿ ಕೊಡಲಾಗಿತ್ತು. ಅವರು 18 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಉತ್ತರ ನೀಡಿದ್ದಾರೆ. ಆದರೆ ಇದುವರೆಗೆ 18 ರೂಪಾಯಿ ಸಹ ಬಿಡುಗಡೆಯಾಗಿಲ್ಲ. ಸರ್ಕಾರದ ಧೋರಣೆಯನ್ನು ಖಂಡಿಸಿ ನವೆಂಬರ್ 3ರಂದು ಹಾಸನ ಜಿಲ್ಲೆಯ ಶಾಸಕರು ಧರಣಿ ನಡೆಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.