ADVERTISEMENT

ಧರೆಗುರುಳಿದ ವಿದ್ಯುತ್ ಕಂಬ, ಮರ

ಪರದಾಡಿದ ಪಟ್ಟಣದ ಜನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ಧರೆಗುರುಳಿದ ವಿದ್ಯುತ್ ಕಂಬ, ಮರ
ಧರೆಗುರುಳಿದ ವಿದ್ಯುತ್ ಕಂಬ, ಮರ   

ಕುಣಿಗಲ್: ಪಟ್ಟಣದಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮತ್ತು 20 ಮರಗಳು ಧರೆಗುರುಳಿವೆ.

ಪ್ರಥಮ ದರ್ಜೆ ಕಾಲೇಜು ಆವರಣ, ಸಾರ್ವಜನಿಕ ಆಸ್ಪತ್ರೆ ಆವರಣ, ಕುವೆಂಪು ನಗರದಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಉರುಳಿಬಿದ್ದುದರಿಂದ ಜನರು ಪರದಾಡುವಂತಾಯಿತು.

‘ಮದ್ದೂರು ರಸ್ತೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಪಾತ್ರೆಗಳು ಮತ್ತಿತರ ವಸ್ತುಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಅಲ್ಲದೇ ಕೆಲವು ಮನೆಗಳ ಹೆಂಚುಗಳು ಹಾರಿ ಹೋಗಿವೆ’ ಎಂದು ನಿವಾಸಿ ಶಬ್ಬೀರ್ ತಿಳಿಸಿದರು.

ADVERTISEMENT

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಮಾರುತಿ ವ್ಯಾನ್ ಮೇಲೆ ಮರ ಬಿದ್ದಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಕಂಬಗಳು ಬಿದ್ದಿದ್ದರಿಂದ ಕೆಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

ಮಳೆ ಆರ್ಭಟ: ಕೊಡಗು ಜಿಲ್ಲೆಯ ವಿವಿಧೆಡೆ ಸೋಮವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿಯಿತು.

ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ, ಶನಿವಾರಸಂತೆ, ಹೆಬ್ಬಾಲೆ, ಶಿರಂಗಾಲ ವ್ಯಾಪ್ತಿಯಲ್ಲಿ ಒಂದು ಗಂಟೆ ಕಾಲ ಮಳೆ ಆರ್ಭಟಿಸಿತು. ಮಿಂಚು, ಗುಡುಗಿನ ಆರ್ಭಟ ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು. ಗಾಳಿಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ.

ನಾಪೋಕ್ಲು, ವಿರಾಜಪೇಟೆ, ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲೂ ಸಾಧಾರಣ ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಎರಡು ದಿನಕ್ಕೊಮ್ಮೆ ಮಳೆ ಸುರಿಯುತ್ತಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಿರುಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗಿದೆ‌. ಸಂತೇಮರಹಳ್ಳಿ, ಮಂಗಳ, ಮಾದಾಪುರ, ಕಿರಗಸೂರು, ಕಾಡಹಳ್ಳಿ, ಭೋಗಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ರಾತ್ರಿ ಭಾರಿ ಮಳೆ ಸುರಿಯಿತು.

ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಗ್ರಾಮದ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಭಾರಿ ಮಳೆಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.