ADVERTISEMENT

ಧರ್ಮಸಿಂಗ್ ವಿರುದ್ಧ ಕ್ರಮಕ್ಕೆ ಆದೇಶಿಸಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೀಡಿರುವ ವರದಿಯ ಅನ್ವಯ ಸಂಸದ ಧರ್ಮಸಿಂಗ್ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆದೇಶಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಡಿ.ನಟೇಶ್ ಅವರು ನ್ಯಾಯಾಲಯವನ್ನು ಈ ಅರ್ಜಿ ಸಲ್ಲಿಸಿದ್ದಾರೆ. `ಧರ್ಮಸಿಂಗ್ ಅವರು 2004ನೇ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಅಕ್ರಮ ಎಸಗಿದ್ದಾರೆ. ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಕಡೆಗಳಲ್ಲಿ ಕೇಂದ್ರ ಸರ್ಕಾರದ ಆದೇಶ ಉಲ್ಲಂಘಿಸಿ ಪಟ್ಟಾ ಜಮೀನಿನಲ್ಲಿ ಪರವಾನಗಿ ಇಲ್ಲದವರಿಗೂ ಗಣಿಗಾರಿಕೆ ನಡೆಸಲು ಇವರು ಅನುಮತಿ ನೀಡಿದ್ದಾರೆ~ ಎನ್ನುವುದು ಅರ್ಜಿದಾರರ ಅರೋಪ.

ಈ ಜಮೀನಿನಲ್ಲಿ ಗಣಿಗಾರಿಕೆ ನಡೆಸಲು ಪರಿವಾನಗಿ ರಹಿತರಿಗೆ ಅನುಮತಿ ನೀಡಬಾರದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಆದೇಶ ಹೊರಡಿಸಿತ್ತು. ಇದನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಆದರೆ ಇದರ ಹೊರತಾಗಿಯೂ ಧರ್ಮಸಿಂಗ್ ಅವರು ಅನುಮತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ADVERTISEMENT

ಕಬ್ಬಿಣದ ಅದಿರನ್ನು ನಿಯಮ ಉಲ್ಲಂಘಿಸಿ ಸಾಗಣೆ ಮಾಡಲು ಇವರು ಅನುಮತಿ ನೀಡಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 23 ಕೋಟಿ ರೂಪಾಯಿ ನಷ್ಟ ಆಗಿದೆ. ಈ ಕುರಿತು ಲೋಕಾಯುಕ್ತರ ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ಅವರೇ ಭರಿಸುವಂತೆ ಆದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಬಯಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿತು.
ವಿಚಾರಣೆ ಮುಂದೂಡಿಕೆ

ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ರದ್ದತಿಗೆ ಕೋರಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಬುಧವಾರ ಆರಂಭಗೊಂಡಿತು.

ಜಂತಕಲ್ ಗಣಿ ಕಂಪೆನಿಗೆ ಕಾನೂನುಬಾಹಿರವಾಗಿ ಗಣಿ ಗುತ್ತಿಗೆ ನೀಡಲು ಶಿಫಾರಸು ಮಾಡಿರುವುದು ಮತ್ತು ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಸಗಟು ನಿವೇಶನ ಮಂಜೂರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ವಕೀಲ ವಿನೋದ್‌ಕುಮಾರ್ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ವಿ.ಜಗನ್ನಾಥನ್ ಅವರು ಸುದೀರ್ಘ ವಾದ, ಪ್ರತಿವಾದ ಆಲಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.