ADVERTISEMENT

ನಕಲಿ `ಬಿಪಿಎಲ್' ಪತ್ತೆಗೆ ಸಮಗ್ರ ತನಿಖೆ

ಆಹಾರ ನಿರೀಕ್ಷಕ, ಗ್ರಾಮ ಲೆಕ್ಕಿಗ, ಪಿಡಿಒಗಳಿಗೆ ಹೊಣೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: ಅರ್ಹರಿಗೆ ಮಾತ್ರ `ಅನ್ನಭಾಗ್ಯ'ದ ಪ್ರಯೋಜನ ಲಭಿಸಬೇಕೆಂಬ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಎಲ್ಲ ಪಡಿತರ ಚೀಟಿಗಳನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ.

ಈ ಹಿನ್ನೆಲೆಯಲ್ಲಿ, ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಪಡಿತರ ಚೀಟಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಲು ತೀರ್ಮಾನಿಸಲಾಗಿದೆ.

ಸದ್ಯ, ಪ್ರತಿ ತಿಂಗಳು ಒಂದು ನ್ಯಾಯಬೆಲೆ ಅಂಗಡಿಯನ್ನು ಆಹಾರ ನಿರೀಕ್ಷಕರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಇನ್ನು ಮುಂದೆ ಈ ಹೊಣೆಯನ್ನು ಗ್ರಾಮ ಪಂಚಾಯ್ತಿ ಮಟ್ಟದ ಅಧಿಕಾರಿಗಳಿಗೂ ನೀಡಲು ನಿರ್ಧರಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಒಂದು ನ್ಯಾಯಬೆಲೆ ಅಂಗಡಿಯನ್ನು ತನಿಖೆ ನಡೆಸಲಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ವಾಸ ಸ್ಥಳ ಪರಿಶೀಲಿಸಿ, ಆ ಕುಟುಂಬ ಸೌಲಭ್ಯ ಪಡೆಯಲು ಅರ್ಹವಾಗಿದೆಯೇ ಮತ್ತು ಆ ಕುಟುಂಬ ಅಡುಗೆ ಅನಿಲ (ಎಲ್‌ಪಿಜಿ) ಸಂಪರ್ಕ ಹೊಂದಿದೆಯೇ ಎಂದು ತನಿಖಾಧಿಕಾರಿ ವರದಿ ನೀಡಬೇಕು. ಜೊತೆಗೆ ಯಾವುದಾದರೂ ಕುಟುಂಬ ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಹೊಂದಿದೆಯೇ ಎಂದೂ ಪರಿಶೀಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸರ್ಕಾರ `ಅನ್ನ ಭಾಗ್ಯ' ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಕಿಲೋಗೆ ಒಂದು ರೂಪಾಯಿಯಂತೆ ಗರಿಷ್ಠ 30 ಕಿಲೋ ಅಕ್ಕಿ ನೀಡುತ್ತಿದೆ. ಮುಂದಿನ ತಿಂಗಳುಗಳಲ್ಲಿ ಗೋಧಿ, ರಾಗಿ, ಜೋಳ ವಿತರಣೆಯೂ ಆರಂಭವಾಗಲಿದೆ. ಇದರ ಪ್ರಯೋಜನ ಕಡುಬಡವರಿಗೆ ಮಾತ್ರ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮತ್ತು ಈಗಾಗಲೇ ಇರುವ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡುವ ಉದ್ದೇಶದಿಂದ ಈ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಮೂಲಗಳು ತಿಳಿಸಿವೆ.

`ಆಹಾರ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಆಹಾರ ನಿರೀಕ್ಷಕರು ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸವನ್ನೂ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಮ ಲೆಕ್ಕಾಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೂ ತನಿಖೆಯ ಹೊಣೆ ನೀಡಲು ತೀರ್ಮಾನಿಸಲಾಗಿದೆ.
ತನಿಖೆಗೆ ಒಳಪಡುವ ನ್ಯಾಯಬೆಲೆ ಅಂಗಡಿ ಸಂಖ್ಯೆ ಮತ್ತು ಹೆಸರು, ಆ ಅಂಗಡಿಯನ್ನು ತನಿಖೆ ನಡೆಸಲಿರುವ ಆಹಾರ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ಅಥವಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಿದ್ಧಪಡಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತ ಹರ್ಷ ಗುಪ್ತಾ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.