ADVERTISEMENT

ನಕ್ಸಲರೊಂದಿಗೆ ಗುಂಡಿನ ಚಕಮಕಿ, ಒಬ್ಬ ಪೊಲೀಸ್ ಬಲಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 3:30 IST
Last Updated 9 ಅಕ್ಟೋಬರ್ 2011, 3:30 IST

ಮಂಗಳೂರು : ಬೆಳ್ತಂಗಡಿ ತಾಲ್ಲೂಕಿನ ನಾವೂರ ಗ್ರಾಮದ ಬಳಿ ಮಂಜಳ ಅರಣ್ಯ ಪ್ರದೇಶದಲ್ಲಿ ಶನಿವಾರ ತಡರಾತ್ರಿ 12 ಗಂಟೆಯ ನಂತರ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ನಕ್ಸಲ್ ನಿಗ್ರಹದಳದ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ (40 ವರ್ಷ) ಗುಂಡೇಟಿನಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ ಗ್ರಾಮದವರು ಎಂದು ತಿಳಿದು ಬಂದಿದೆ.

ಸುಮಾರು 14 ಮಂದಿ ಇದ್ದ ನಕ್ಸಲ್ ನಿಗ್ರಹ ಪಡೆಯು ನಾವೂರ ಗ್ರಾಮದ ಬಳಿ ಶೋಧ ಕಾರ್ಯ ನಡೆಸುತ್ತಿದ್ದಾಗ ಸುಮಾರು 10 ರಿಂದ 15 ಮಂದಿ ಇದ್ದ ನಕ್ಸಲ್ ಪಡೆಯು ದಾಳಿ ನಡೆಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಗುಂಡು ಹಾರಿಸಿದ್ದಾರೆ. ನಕ್ಸಲರ ಗುಂಡೇಟಿಗೆ ಕಾನ್ಸ್‌ಟೇಬಲ್ ಮಹದೇವ ಎಸ್.ಮಾನೆ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಕ್ಸಲರಿಗೂ ಗಾಯಗಳಾಗಿವೆ ಎಂದು ಊಹಿಸಲಾಗಿದೆ. ಆದರೆ ನಕ್ಸಲರು ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ನಕ್ಸಲರ ಗುಂಪಿನಲ್ಲಿ ಮೂರ್ನಾಲ್ಕು ಮಂದಿ ಯುವತಿಯರೂ ಇದ್ದರೆಂದು ಹೇಳಲಾಗಿದೆ.ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದು, ಕಾರ್ಯಚರಣೆಯ ಉಸ್ತುವಾರಿ ವಹಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚಿನ ಪೊಲೀಸರು ನಕ್ಸಲರಿಗಾಗಿ ತೀವ್ರ ಶೋಧ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.