ADVERTISEMENT

ನಕ್ಸಲರ ಗುಂಡಿನಿಂದ ಪಾರಾದೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2012, 19:30 IST
Last Updated 11 ಮಾರ್ಚ್ 2012, 19:30 IST

ಬೆಳ್ತಂಗಡಿ: `ನಕ್ಸಲರು ಎಂಟು ತಂಡಗಳಲ್ಲಿದ್ದು ಅಲ್ಲಲ್ಲಿ ಚದುರಿಕೊಂಡಿದ್ದರು. ನನಗೆ ಗುಂಡು ಹಾರಿಸಿದವ ಕಪ್ಪು ಬಟ್ಟೆ ಧರಿಸಿದ್ದು ಆಂಧ್ರದ ಯುವಕನಂತೆ ಕಾಣುತ್ತಿದ್ದ. ಆತ ಗುಂಡು ಹಾರಿಸಿದ ತಕ್ಷಣ ನಾನು ಹಾರಿ ಬಿದ್ದುದರಿಂದ ಅಪಾಯದಿಂದ ಪಾರಾಗಿದ್ದೇನೆ. ನಾನೂ ಗುಂಡು ಹಾರಿಸಿದೆ. ಆದರೆ ಆತ ಕ್ಷಣಮಾತ್ರದಲ್ಲಿ ಪಲಾಯನ ಮಾಡಿದ್ದ.....~

ಹೀಗೆ ಶನಿವಾರದ ಘಟನೆ ನೆನಪಿಸುತ್ತಾರೆ- ಮಲವಂತಿಗೆ ಗ್ರಾಮದ ಕುಕ್ಕಾಡಿಯ ಉರ್ದ್ಯಾರು ಜಲಪಾತದ ಬೊಳ್ಳೆ ರಕ್ಷಿತಾರಣ್ಯದಲ್ಲಿ ಶನಿವಾರ ನಕ್ಸಲ್ ನಿಗ್ರಹ ಪಡೆ ಶೋಧ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ನಕ್ಸಲ್ ನಿಗ್ರಹ ಪಡೆಯ ಕಾನ್ಸ್‌ಟೇಬಲ್ ಸದಾಶಿವ ಚೌಧರಿ. `ನಕ್ಸಲರು ಹಾರಿಸಿದ ಗುಂಡು ಅದೃಷ್ಟವಶಾತ್ ನನ್ನ ತಲೆಯ ಎಡಭಾಗಕ್ಕೆ ಸವರಿಕೊಂಡು ಹೋಯಿತು. ತಲೆಗೆ ಚೂರು ಗಾಯವಾಗಿತು. ತಕ್ಷಣ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು~ ಎಂದು ನೆನಪಿಸುತ್ತಾರೆ.

25 ವರ್ಷ ಪ್ರಾಯದ ಸದಾಶಿವ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಹುಣ್ಣೂರು ಮೂಲದವರು.  ಸದ್ಯ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದಾಶಿವ, ಮುಕ್ತ ವಿ.ವಿ.ಯಿಂದ ಬಿ.ಎ ಪದವಿಯನ್ನು ಪಡೆದಿದ್ದಾರೆ.  ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದು, ಎರಡು ವರ್ಷಗಳಿಂದ ನಕ್ಸಲ್ ನಿಗ್ರಹ ಪಡೆಯ ಕಾನ್‌ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.