ADVERTISEMENT

ನಗರಗಳನ್ನು ಜೋಡಿಸದ ರೈಲ್ವೆ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ನಗರಗಳನ್ನು ಜೋಡಿಸದ ರೈಲ್ವೆ!
ನಗರಗಳನ್ನು ಜೋಡಿಸದ ರೈಲ್ವೆ!   

ಗುಲ್ಬರ್ಗ: ಗುಲ್ಬರ್ಗ ವಿಭಾಗದ ಜಿಲ್ಲಾ ಕೇಂದ್ರಗಳು ರೈಲು ಸಂಪರ್ಕ ಪಡೆದು ದಶಕಗಳಾಗಿವೆ. ಇದೇ ವೇಳೆ, ರೈಲ್ವೆಗೆ ಸಂಬಂಧಿಸಿದ ಹಲವು ಬೇಡಿಕೆಗಳು ದಶಕಗಳಿಂದಲೂ ನೆನೆಗುದಿಗೆ ಬಿದ್ದಿವೆ. ಇಲ್ಲಿಂದ ಆಂಧ್ರಪ್ರದೇಶ, ಮಹಾರಾಷ್ಟ್ರ ಕಡೆಗೆ ಸಂಚರಿಸುವುದು ಸುಲಭ; ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಕಡೆಗೆ ಸಂಚರಿಸುವುದು ದುಸ್ತರವಾಗಿದೆ. ರಾಜ್ಯದ ಪ್ರಮುಖ ನಗರಗಳೊಂದಿಗೆ ಈ ಭಾಗದ ಜನರ ಸಂಬಂಧ ವೃದ್ಧಿಗೆ ರೈಲ್ವೆ ಇಲಾಖೆ  ಅನುವು ಮಾಡಿ ಕೊಡಬಹುದೆನ್ನುವ ನಿರೀಕ್ಷೆ ಹುಸಿಯಾಗುತ್ತಲೇ ಇದೆ.

ರಾಜ್ಯದ ಮುಕುಟ ಬೀದರ್ ಜಿಲ್ಲೆಯನ್ನು ರೈಲು ಮೂಲಕ ಬೆಂಗಳೂರಿಗೆ ಸಮೀಪಿಸುವುದು ದೂರದ ಮಾತಾಯಿತು. ಕನಿಷ್ಠ ಗುಲ್ಬರ್ಗ- ಬೀದರ್ ರೈಲ್ವೆ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಎರಡು ಜಿಲ್ಲೆಗಳ ನಡುವಿನ ರಸ್ತೆ ಸಂಚಾರವೂ ಸಂಕಷ್ಟದಿಂದ ಕೂಡಿದೆ.

ಗುಲ್ಬರ್ಗ ಬೀದರ್ ನಡುವಿನ 106 ಕಿ.ಮೀ. ರೈಲ್ವೆ ಯೋಜನೆ ಅನುಷ್ಠಾನಕ್ಕೆ ಈಗಾಗಲೇ 933 ಎಕರೆ ಜಮೀನನ್ನು ಜಿಲ್ಲಾಡಳಿತ ರೈಲ್ವೆಗೆ ಹಸ್ತಾಂತರಿಸಿ ವರ್ಷಗಳೇ ಕಳೆದಿದೆ. ಇದೀಗ ಹೆಚ್ಚುವರಿಯಾಗಿ 86 ಎಕರೆ ಜಮೀನು ಕೇಳಿ ರೈಲ್ವೆ ಇಲಾಖೆ ಪ್ರಸ್ತಾವ ಸಲ್ಲಿಸಿರುವುದು ಪರಿಶೀಲನೆ ಹಂತದಲ್ಲಿದೆ. ಅನುದಾನ ಹಾಗೂ ಭೂಮಿ ಎರಡೂ ಲಭ್ಯವಿದ್ದರೂ ಯೋಜನೆ ಮಾತ್ರ ದಶಕದಿಂದ ಕುಂಟುತ್ತಲೇ ಸಾಗಿದೆ.

ಭೂಸ್ವಾಧೀನ ಪ್ರಕ್ರಿಯೆ 2007ರಲ್ಲಿ ಮುಗಿದ ನಂತರ ರೈಲ್ವೆ ಹಳಿ ಜೋಡಣೆ ಆರಂಭವಾಗಿದ್ದು, ಯೋಜನೆ ತ್ವರಿತಗೊಳಿಸಲು ಸಾಕಷ್ಟು ಹೋರಾಟಗಳು ನಡೆದಿವೆ.

ಬಳ್ಳಾರಿ, ಕೊಪ್ಪಳ ಹೊರತುಪಡಿಸಿ ಹೈ.ಕ. ಜನರು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವುದು ಬೆಂಗಳೂರಿಗೆ ಹೋಗುವುದಕ್ಕಿಂತಲೂ ಕಷ್ಟ ಎನ್ನುವಂತಾಗಿದೆ. ಗುಲ್ಬರ್ಗದಿಂದ ಹುಬ್ಬಳ್ಳಿಗೆ ಒಂದೇ ಒಂದು ರೈಲು ಸೇವೆಯಿಲ್ಲ. ಸೊಲ್ಲಾಪುರ ಅಥವಾ ಗುಂತಕಲ್‌ಗೆ ತಲುಪಿ ಅಲ್ಲಿಂದ ಹುಬ್ಬಳ್ಳಿ ಕಡೆಗೆ ಹೋಗುವ ರೈಲುಗಳಲ್ಲಿ ಪ್ರಯಾಣಿಸುವ ಅನಿವಾರ್ಯತೆ ಇದೆ. ಇದಕ್ಕಾಗಿ ಪ್ರಯಾಣಿಕರು ಸುಮಾರು 15 ಗಂಟೆ ವ್ಯಯಿಸಬೇಕು.

ಹೈ.ಕ. ಭಾಗಕ್ಕೆ ಮುಂಬೈ ಕರ್ನಾಟಕ ಭಾಗವನ್ನು ಸಮೀಪಿಸುವ 275 ಕಿ.ಮೀ. ಉದ್ದದ ವಾಡಿ-ಗದಗ ಮಹತ್ವಾಕಾಂಕ್ಷಿ ನೂತನ ರೈಲು ಮಾರ್ಗದ ಸಮೀಕ್ಷೆ ಮುಗಿದಿದ್ದರೂ ಈ ಬಗ್ಗೆ ರೈಲ್ವೆ ಇಲಾಖೆ ಅನುದಾನ ಒದಗಿಸುತ್ತಿಲ್ಲ. ಈ ರೈಲು ಯೋಜನೆ ಜಾರಿಯಾದರೆ ಹುಬ್ಬಳ್ಳಿ- ಗುಲ್ಬರ್ಗ ನಡುವೆ  ಅಂತರ ಸುಮಾರು 150 ಕಿ.ಮೀ. ಕಡಿಮೆಯಾಗಲಿದೆ. ವಾಡಿ- ಗದಗ ರೈಲ್ವೆ ಸಮೀಕ್ಷೆ ಬ್ರಿಟಿಷರ ಕಾಲದಲ್ಲಿ 1911ರಲ್ಲೇ ನಡೆದಿತ್ತು. 1997ರಲ್ಲಿ ಮತ್ತೆ ಮರು ಸಮೀಕ್ಷೆ ಮಾಡಲಾಯಿತಾದರೂ ಯೋಜನೆ ನೆನೆಗುದಿಗೆ ಬಿದ್ದಿದೆ.

ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಗಳು, ಜನಪ್ರತಿನಿಧಿಗಳು, ವಿವಿಧ ಸಂಘಗಳು ಪ್ರತಿವರ್ಷ ಈ ಬಗ್ಗೆ ರೈಲ್ವೆ ಇಲಾಖೆ ಹಾಗೂ ಕೇಂದ್ರ ರೈಲ್ವೆ ಸಚಿವರನ್ನು ಗಮನ ಸೆಳೆಯುವ ಪ್ರಯತ್ನ ಮಾಡುತ್ತಲೇ ಬರುತ್ತಿವೆ. ಕೊಪ್ಪಳದ ಮಾಜಿ ಸಂಸದ ಬಸವರಾಜ ರಾಯರೆಡ್ಡಿ ಈಚೆಗೆ ದೆಹಲಿಗೆ ನಿಯೋಗದೊಂದಿಗೆ ತೆರಳಿ ವಾಡಿ-ಗದಗ ರೈಲು ಯೋಜನೆ ಆರಂಭಿಸುವಂತೆ ರೈಲ್ವೆ ಸಚಿವ ಪವನಕುಮಾರ್ ಬನ್ಸಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ. `ರೈಲ್ವೆ ಇಲಾಖೆಯು ಈ ವರ್ಷ ಪ್ರಮುಖವಾದವುಗಳನ್ನು ಹೊರತುಪಡಿಸಿ ಯಾವುದೇ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿಲ್ಲ. ಕರ್ನಾಟಕದಿಂದ ವಾಡಿ- ಗದಗ ಯೋಜನೆಯೊಂದನ್ನು ಮಾತ್ರ ಸೇರ್ಪಡೆಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ' ಎನ್ನುವುದು ನಿಯೋಗದ ವಿವರಣೆ.

ಜಿಲ್ಲೆಗಳ ಬೇಡಿಕೆಗಳು

ಗುಲ್ಬರ್ಗ
*ಪ್ರತಿದಿನ ಗುಲ್ಬರ್ಗ- ಬೆಂಗಳೂರು ಎಕ್ಸ್‌ಪ್ರೆಸ್ ರೈಲು
*ಗುಲ್ಬರ್ಗದಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆ
*ವಾಡಿ- ಗದಗ ರೈಲು ಮಾರ್ಗ
*ಗುಲ್ಬರ್ಗ- ಬೀದರ್ ರೈಲ್ವೆ ಯೋಜನೆ ತ್ವರಿತಗೊಳಿಸುವುದು
*ಬಸವ, ಉದ್ಯಾನ್ ಎಕ್ಸ್‌ಪ್ರೆಸ್‌ಗಳು ಬೆಂಗಳೂರಿಗೆ ಬೆಳಿಗ್ಗೆ ಬೇಗ ತಲುಪಲಿ

ಯಾದಗಿರಿ
*ಕರ್ನಾಟಕ, ರಾಜಧಾನಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ
*ಹರಿಪ್ರಿಯಾ, ರಾಯಲ್‌ಸೀಮಾ ಎಕ್ಸ್‌ಪ್ರೆಸ್ ಮೊದಲಿನ ವೇಳಾಪಟ್ಟಿ ಜಾರಿ
*ರಿಸರ್ವೇಷನ್ ಕೌಂಟರ್ ಹೆಚ್ಚಿಸಬೇಕು
*ವಾಡಿ ಜಂಕ್ಷನ್ ಮೇಲ್ದರ್ಜೆಗೇರಿಸಬೇಕು

ಬೀದರ್
*ರೈಲು ಬೋಗಿ, ಎಂಜಿನ್ ಹಾಲ್ಟಿಂಗ್ ಸೆಂಟರ್ ಆರಂಭಿಸಬೇಕು
*ಗುಲ್ಬರ್ಗ- ಬೀದರ್ ಯೋಜನೆಗೆ ಕೇಂದ್ರದ ಪಾಲು ಒದಗಿಸಬೇಕು
*ಲಾತೂರ್- ಮುಂಬೈ, ನಾಂದೇಡ್ ಎಕ್ಸ್‌ಪ್ರೆಸ್ ರೈಲುಗಳನ್ನು ಬೀದರ್‌ನಿಂದ ಓಡಿಸಬೇಕು
*ನಾಂದೇಡ್ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾಯಿಸಬೇಕು

ಕೊಪ್ಪಳ
*ಮುನಿರಾಬಾದ್-ಮೆಹಬೂಬ್ ನಗರ ರೈಲ್ವೆ ಯೋಜನೆ ತ್ವರಿತಗೊಳಿಸಬೇಕು
*ವಾಡಿ-ಗದಗ ರೈಲು ಯೋಜನೆ ಆರಂಭಿಸಬೇಕು

ರಾಯಚೂರು
*ಗುಲ್ಬರ್ಗ- ಬೆಂಗಳೂರು ಮಧ್ಯೆ ಶತಾಬ್ದಿ ರೈಲು ಬೇಕು
*ರಾಯಚೂರು- ಹುಬ್ಬಳ್ಳಿ ರೈಲು ಸೇವೆ ಒದಗಿಸಬೇಕು

`ಗುಲ್ಬರ್ಗಕ್ಕೆ ಅನ್ಯಾಯ'
ಸರಿನ್ ಸಮಿತಿ ವರದಿ ನೀಡಿರುವಂತೆ ಗುಲ್ಬರ್ಗದಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಆರಂಭಿಸಬೇಕು. ಒಟ್ಟು 1* ರೈಲ್ವೆ ವಿಭಾಗ ಆರಂಭಿಸಬೇಕು ಎಂದು ವರದಿ ಸಲ್ಲಿಕೆಯಾಗಿತ್ತು. ಅದರಲ್ಲಿ 12 ವಿಭಾಗಗಳು ಆರಂಭವಾಗಿವೆ. ಗುಲ್ಬರ್ಗ ಭಾಗಕ್ಕೆ ಮಾತ್ರ ಅನ್ಯಾಯ ಮಾಡಲಾಗುತ್ತಿದೆ.
- ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.