ADVERTISEMENT

ನಗರ ಸ್ಥಳೀಯ ಸಂಸ್ಥೆಗಳ ಮೀಸಲು ಪಟ್ಟಿಗೆ ತಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಪುರಸಭೆ, ಪಟ್ಟಣ ಪಂಚಾಯ್ತಿ, ನಗರ ಸಭೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ, ನಗರ ಪಾಲಿಕೆಗಳ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಸರ್ಕಾರ ಹೊರಡಿಸಿದ್ದ ಮೀಸಲಾತಿ ಪಟ್ಟಿಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಆದರೆ ಈಗಾಗಲೆ ಚುನಾವಣೆ ಪೂರ್ಣಗೊಂಡ ಕಡೆ ಇದು ಅನ್ವಯಿಸುವುದಿಲ್ಲ.

ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಅಜೀಜ್ ಮತ್ತು ದಾವಣಗೆರೆಯ ಎಚ್.ಕೆ. ಹಾಲೇಶ್‌ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಈ ಆದೇಶ ನೀಡಿದರು.

ತಕರಾರು ಏನು?: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ನೀಡುವ ಸಂದರ್ಭದಲ್ಲಿ ನಗರಾಭಿವೃದ್ಧಿ ಇಲಾಖೆ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ಮೇಯರ್ ಹುದ್ದೆಯನ್ನು ಸತತವಾಗಿ ಎರಡು ಬಾರಿ ಮಹಿಳೆಯರಿಗೆ ಮೀಸಲಿಡಲಾಗಿದೆ.

ಕಳೆದ ಸಾಲಿನಲ್ಲಿ ಹಿಂದುಳಿದ ವರ್ಗಗಳ `ಎ' ಪ್ರವರ್ಗದ ಸಮುದಾಯಕ್ಕೆ ಸೇರಿದ ಮಹಿಳೆಗೆ ಈ ಸ್ಥಾನ ದೊರೆತಿತ್ತು. ಈ ಬಾರಿ ಅದನ್ನು ಸಾಮಾನ್ಯ ವರ್ಗದ ಮಹಿಳೆಗೆ ನೀಡಿರುವುದು ಸರಿಯಲ್ಲ ಎಂದು ಅಜೀಜ್ ಅರ್ಜಿಯಲ್ಲಿ ದೂರಿದ್ದರು.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪುರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆ ಮೀಸಲು ಪಟ್ಟಿ ಕೂಡ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಎಚ್.ಕೆ. ಹಾಲೇಶ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.