ADVERTISEMENT

ನಮ್ಮ ಪಾಲಿನ ನೀರು ಬಿಡಿ

ಕಾವೇರಿ: ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಮನವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 20:33 IST
Last Updated 5 ಜುಲೈ 2017, 20:33 IST
ನಮ್ಮ ಪಾಲಿನ ನೀರು ಬಿಡಿ
ನಮ್ಮ ಪಾಲಿನ ನೀರು ಬಿಡಿ   

ನವದೆಹಲಿ: ಕಾವೇರಿ ನದಿಗೆ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸುವಂತೆ ತಮಿಳುನಾಡು ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶವನ್ನು ಕರ್ನಾಟಕ ಸಮರ್ಪಕವಾಗಿ ಪಾಲಿಸಿಲ್ಲ. ಕಳೆದ ವರ್ಷ ಒಟ್ಟು ಅಂದಾಜು 5.966 ಟಿಎಂಸಿ ಅಡಿ ನೀರು ಹರಿಸುವುದು ಬಾಕಿ ಇದೆ ಎಂದು ತಮಿಳುನಾಡು ಪರ ವಕೀಲರು ಮೌಖಿಕವಾಗಿ ತಿಳಿಸಿದರು.

‘ಈಗಾಗಲೇ ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದರೂ ಜೂನ್‌ ತಿಂಗಳಲ್ಲಿ ನೀರು ಹರಿಸಿಲ್ಲ. ಇದೀಗ ತಮಿಳುನಾಡಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ರಾಜ್ಯದ ಪಾಲಿನ ನೀರು ಹರಿಸುವಂತೆ ಸೂಚಿಸಬೇಕು.

‘ಕಳೆದ ವರ್ಷ ನೀಡಲಾದ ಆದೇಶದ ಅನುಸಾರ 22.550 ಟಿಎಂಸಿ ಅಡಿ ನೀರನ್ನು ಹರಿಸಬೇಕಿದ್ದ ಕರ್ನಾಟಕವು ಒಟ್ಟು 16.584 ಟಿಎಂಸಿ ಅಡಿ ನೀರನ್ನು ಮಾತ್ರ ಹರಿಸಿದೆ ಎಂದು ತಮಿಳುನಾಡು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಈ ಕುರಿತು ಅಧಿಕೃತ ಅರ್ಜಿ ಸಲ್ಲಿಸಿದಲ್ಲಿ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ತಮಿಳುನಾಡು ಪರ ವಕೀಲರಿಗೆ ತಿಳಿಸಿತು.

ಮುಂದಿನ ಆದೇಶ ನೀಡುವವರೆಗೆ ನಿತ್ಯವೂ ತಮಿಳುನಾಡಿಗೆ 2,000 ಕ್ಯುಸೆಕ್‌ ನೀರು ಹರಿಸುವಂತೆ ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಈ ಆದೇಶ ಮರು ಪರಿಶೀಲಿಸುವಂತೆ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿರಲಿಲ್ಲ.

ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐ ತೀರ್ಪನ್ನು ಪ್ರಶ್ನಿಸಿ ಕಾವೇರಿ ಕಣಿವೆಯ ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆ ಇದೇ 11ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.