ADVERTISEMENT

ನರ್ಸಿಂಗ್ ಪ್ರವೇಶ: ಅಕ್ರಮ ಜಾಲ ಬಯಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬೆಂಗಳೂರು: ಎರಡು ವರ್ಷಗಳಿಂದ ಬೀಗ ಹಾಕಿರುವ ಮೈಸೂರಿನ ಡಯಾನಾ ಹಾಗೂ ದಾಸ್‌ತಿ ನರ್ಸಿಂಗ್ ಕಾಲೇಜುಗಳ ಹೆಸರಿನಲ್ಲಿ ಕೆಲವು ಏಜೆಂಟರು ನಕಲಿ ದಾಖಲೆ ಸೃಷ್ಟಿಸಿ ರಾಜಸ್ತಾನ ಮೂಲದ 80 ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಪಡೆದು ಅನಧಿಕೃತವಾಗಿ ಡಿಪ್ಲೊಮಾ ಇನ್ ನರ್ಸಿಂಗ್ (ಜಿಎನ್‌ಎಂ) ಪರೀಕ್ಷೆಗೆ ಪ್ರವೇಶ ಕೊಡಿಸಿದ ಅಕ್ರಮ ಜಾಲ ಇದೀಗ ಬೆಳಕಿಗೆ ಬಂದಿದೆ.

ದಾಸ್‌ತಿ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಡಾ.ಡಿ. ತಿಮ್ಮಯ್ಯ ನೀಡಿದ ಲಿಖಿತ ದೂರಿನ ಮೇರೆಗೆ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಅವರು ಶುಕ್ರವಾರ ನಗರದ ಕರ್ನಾಟಕ ರಾಜ್ಯ ಡಿಪ್ಲೊಮಾ ಶುಶ್ರೂಷ ಪರೀಕ್ಷಾ ಮಂಡಳಿಗೆ ಅನಿರೀಕ್ಷಿತ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದಾಗ ಈ ಮೋಸ ಹಾಗೂ ವಂಚನೆ ನಡೆದಿರುವುದು ಬಯಲಾಗಿದೆ.

ತಕ್ಷಣ ಕರ್ತವ್ಯಲೋಪ ಆರೋಪದ ಮೇರೆಗೆ ಮಂಡಳಿಯ ಇಬ್ಬರು ಸಿಬ್ಬಂದಿಯನ್ನು ತನಿಖೆ ಮುಗಿಯುವವರೆಗೆ ಅಮಾನತುಗೊಳಿಸುವಂತೆ ಸಚಿವರು ಸ್ಥಳದಲ್ಲಿಯೇ ಆದೇಶಿಸಿದರು. ಅಲ್ಲದೆ, ಈ ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ಇಕ್ಬಾಲ್ ಎಂಬುವರ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಸಚಿವ ರಾಮದಾಸ್ ನಂತರ ಸುದ್ದಿಗಾರರಿಗೆ ತಿಳಿಸಿದರು.

ರಾಮನಗರದ ಎಂ.ಎಂ.ಯು. ಕಾಲೇಜಿನ ಹೆಸರಿನಲ್ಲಿಯೂ ಇದೇ ರೀತಿ 100 ವಿದ್ಯಾರ್ಥಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅನಧಿಕೃತವಾಗಿ ಪರೀಕ್ಷೆಗೆ ಪ್ರವೇಶ ಕೊಡಿಸಿರುವ ಸಂಬಂಧ ಮೌಖಿಕವಾಗಿ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಿದ ನಂತರ ಸತ್ಯಾಸತ್ಯತೆ ಹೊರಬೀಳಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಸಿಐಡಿ ತನಿಖೆ ನಡೆಸಲು ಸಿಎಂಗೆ ಮನವಿ: ರಾಜ್ಯದ ಸುಮಾರು ಏಳೆಂಟು ನರ್ಸಿಂಗ್ ಕಾಲೇಜುಗಳ ಹೆಸರಿನಲ್ಲಿ ಈ ರೀತಿ ಅನಧಿಕೃತವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರವೇಶ ಕೊಡಿಸಿರಬಹುದು ಎಂದು ಮಂಡಳಿಯ ಸಿಬ್ಬಂದಿ ಒಪ್ಪಿಕೊಂಡಿದ್ದಾರೆ. ಹೀಗಾಗಿ, ಇದರ ಹಿಂದೆ ದೊಡ್ಡ ಜಾಲ ಅಡಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಹಗರಣದ ಬಗ್ಗೆ ಸಿಐಡಿ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.

`ಈ ಜಾಲದ ಹಿಂದಿನ ಸೂತ್ರಧಾರ ಇಕ್ಬಾಲ್ ಯಾರು ಎಂಬುದು ನನಗೂ ಗೊತ್ತಿಲ್ಲ. ಶನಿವಾರವೇ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು. ಪೊಲೀಸರ ತನಿಖೆ ಮುಗಿದ ನಂತರವೇ ಹಗರಣದ ಹಿಂದೆ ಯಾರ‌್ಯಾರ ಕೈವಾಡವಿದೆ ಎಂಬುದು ಬೆಳಕಿಗೆ ಬರಬೇಕಾಗಿದೆ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ನಡುವೆ, ಡಯಾನಾ ಹಾಗೂ ದಾಸ್‌ತಿ ನರ್ಸಿಂಗ್ ಕಾಲೇಜುಗಳ ಹೆಸರಿನಲ್ಲಿ ಅನಧಿಕೃತವಾಗಿ ಪರೀಕ್ಷೆಗೆ ಪ್ರವೇಶ ಪಡೆದಂತಹ ವಿದ್ಯಾರ್ಥಿಗಳ ದಾಖಲೆಗಳನ್ನು ಮಂಡಳಿಯಲ್ಲಿ ವಶಕ್ಕೆ ತೆಗೆದುಕೊಂಡ ಸಚಿವರು, ಕರ್ನಾಟಕ ನರ್ಸಿಂಗ್ ಕೌನ್ಸಿಲ್‌ನಲ್ಲಿಯೂ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ತರಿಸಿಕೊಂಡು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದರು.

ಕಾಲೇಜಿಗೆ ಹಾಜರಾಗಿಲ್ಲ: ಮೈಸೂರಿನ ಡಯಾನಾ ಹಾಗೂ ದಾಸ್‌ತಿ ನರ್ಸಿಂಗ್ ಕಾಲೇಜುಗಳನ್ನು ಎರಡು ವರ್ಷಗಳಿಂದ ಮುಚ್ಚಲಾಗಿದೆ. ಅಂದಿನಿಂದ ಈ ಕಾಲೇಜುಗಳಲ್ಲಿ ಜಿಎನ್‌ಎಂ ಕೋರ್ಸ್‌ಗೆ ಯಾವುದೇ ಪ್ರವೇಶ ಪ್ರಕ್ರಿಯೆ ನಡೆದಿಲ್ಲ. ಇಂತಹ ಬೀಗ ಹಾಕಿದ ಕಾಲೇಜುಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ರಾಜಸ್ತಾನದ 80 ವಿದ್ಯಾರ್ಥಿಗಳನ್ನು ವಂಚಿಸಲಾಗಿದೆ. ಈ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗದಿದ್ದರೂ ಶೇ 80ರಿಂದ 85ರಷ್ಟು ಹಾಜರಾತಿ ತೋರಿಸಲಾಗಿದೆ ಎಂದು ಸಚಿವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT