ADVERTISEMENT

ನಾಗರಹೊಳೆ: ಹೊಗೆಯುಗುಳುವ ಆನೆ!

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 20:26 IST
Last Updated 26 ಮಾರ್ಚ್ 2018, 20:26 IST
ನಾಗರಹೊಳೆ: ಹೊಗೆಯುಗುಳುವ ಆನೆ!
ನಾಗರಹೊಳೆ: ಹೊಗೆಯುಗುಳುವ ಆನೆ!   

ಬೆಂಗಳೂರು: ಆನೆಯೊಂದು ಧೂಮಪಾನ ಮಾಡಿ ಹೊಗೆ ಉಗುಳುವಂತೆ ಕಾಣುವ ವಿಡಿಯೊ ತುಣುಕನ್ನು ವೈಲ್ಡ್‌ ಲೈಫ್‌ ಕನ್ಸರ್ವೇಷನ್‌ ಸೊಸೈಟಿ (ಡಬ್ಲ್ಯುಸಿಎಸ್‌) ಇಂಡಿಯಾ ತನ್ನ ವೆಬ್‌ ಸೈಟ್‌ನಲ್ಲಿ (http://wcsindia.org) ಅಪ್‌ಲೋಡ್‌ ಮಾಡಿದೆ. ತಮಾಷೆಯಾಗಿ ಕಾಣಿಸುವ ಈ ವಿಡಿಯೊವನ್ನು ನಾಲ್ಕೇ ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಡಬ್ಲ್ಯುಸಿಎಸ್ ಇಂಡಿಯಾದ ಸಹಾಯಕ ನಿರ್ದೇಶಕ ವಿನಯ್‌ ಕುಮಾರ್‌ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಯೂಟ್ಯೂಬ್‌ನಲ್ಲಿ (https://youtu.be/egf9flC-nes) ಈ ವಿಡಿಯೊ ವೀಕ್ಷಿಸಬಹುದು.

‘ಹುಲಿ ಹಾಗೂ ಅದಕ್ಕೆ ಆಹಾರವಾಗುವ ಪ್ರಾಣಿಗಳ ಸಮೀಕ್ಷೆ ಸಲುವಾಗಿ ನಾನು, ಸಹೋದ್ಯೋಗಿ ಶ್ರೀಕಾಂತ್‌ ರಾವ್‌ ಹಾಗೂ ಮೂವರು ಸಿಬ್ಬಂದಿ 2016ರ ಏಪ್ರಿಲ್‌ನಲ್ಲಿ ನಾಗರಹೊಳೆ ರಾಷ್ಟ್ರಿಯ ಉದ್ಯಾನದಲ್ಲಿ ಮುಂಜಾನೆ ಕ್ಷೇತ್ರ ಕಾರ್ಯ ನಡೆಸುತ್ತಿದ್ದೆವು. ಆಗ ಈ ದೃಶ್ಯ ಕಣ್ಣಿಗೆ ಬಿತ್ತು’ ಎಂದು ವಿನಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೆಂಕಿ ಆರಿದ್ದ ಪ್ರದೇಶದಲ್ಲಿ ಸುಮಾರು 30 ವರ್ಷದ ಈ ಹೆಣ್ಣಾನೆ ಇದ್ದಿಲನ್ನು ತಿನ್ನುತ್ತಿತ್ತು. ಇದ್ದಿಲನ್ನು ಸೊಂಡಿಲಿನ ಮೂಲಕ ತುರುಕಿಕೊಳ್ಳುವಾಗ ಬಾಯಿಯನ್ನು ಸೇರುತ್ತಿದ್ದ ಬೂದಿಯನ್ನು ಅದು ಹೊರಗೆ ಹಾಕುತ್ತಿತ್ತು. ದೂರದಿಂದ ನೋಡಿದಾಗ ಈ ದೃಶ್ಯ ಆನೆ ಧೂಮಪಾನ ಮಾಡಿ ಹೊಗೆ ಉಗುಳಿದಂತೆಯೇ ಕಾಣುತ್ತಿತ್ತು. ಕುಚೋದ್ಯಕ್ಕಾಗಿ ನಾನು ಈ ದೃಶ್ಯವನ್ನು ಸೆರೆ ಹಿಡಿದೆ’ ಎಂದರು.

‘ನಾನು ಸುಮಾರು 15 ವರ್ಷಗಳಿಂದ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಇಂತಹ ದೃಶ್ಯ ಸೆರೆಯಾಗಿರುವುದು ಇದೇ ಮೊದಲು. ಹಾಗಾಗಿ ಇದು ಆನೆತಜ್ಞರ
ಅಚ್ಚರಿಗೂ ಕಾರಣವಾಗಿದೆ’ ಎಂದು ತಿಳಿಸಿದರು.

‘ಇದ್ದಿಲಿನಲ್ಲಿ ಯಾವುದೇ ಪೌಷ್ಠಿಕ ಸತ್ವಗಳಿರುವುದಿಲ್ಲ. ಆದರೆ, ಅದರಲ್ಲಿ ವಿಷನಾಶಕ ಗುಣವಿದೆ. ಮಲಬದ್ಧತೆಯನ್ನು ನಿವಾರಿಸುವ ಗುಣವನ್ನೂ ಅದು ಹೊಂದಿದೆ. ಈ ಔಷಧೀಯ ಗುಣದಿಂದಾಗಿಯೇ ಕಾಡುಪ್ರಾಣಿಗಳು ಇದ್ದಿಲಿನ ಆಕರ್ಷಣೆಗೆ ಒಳಗಾಗುವುದುಂಟು’ ಎನ್ನುತ್ತಾರೆ ಆನೆಗಳ ಕುರಿತು ಸಾಕಷ್ಟು ಅಧ್ಯಯನ ನಡೆಸಿರುವ ಡಬ್ಲ್ಯುಸಿಎಸ್‌ನ ಹಿರಿಯ ಜೀವವಿಜ್ಞಾನಿ ಡಾ.ವರುಣ್‌ ಆರ್‌.ಗೋಸ್ವಾಮಿ.

‘ವಿಡಿಯೊ ತುಣುಕನ್ನು ನ್ಯಾಷನಲ್‌ ಜಿಯಾಗ್ರಫಿ, ಫಾಕ್ಸ್‌ ನ್ಯೂಸ್‌, ಸೈನ್ಸ್‌ ಮ್ಯಾಗಜಿನ್‌ಗಳು ಪ್ರಸಾರ ಮಾಡಿವೆ. ಡಬ್ಲ್ಯುಸಿಎಸ್‌ ವೆಬ್‌ಸೈಟ್‌ನಲ್ಲಿ ಇದೇ 22ರಂದು 1 ನಿಮಿಷ 34 ಸೆಕೆಂಡ್‌ಗಳ ಈ ವಿಡಿಯೊ ಲಿಂಕ್‌ ಅನ್ನು ಅಪ್‌ಲೋಡ್‌ ಮಾಡಿದ್ದೇವೆ. ಯೂಟ್ಯೂಬ್‌ ಒಂದರಲ್ಲೇ 1.03 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಕೆಲವರು, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೂ ಹಂಚಿಕೊಂಡಿದ್ದಾರೆ. ಏನಿಲ್ಲವೆಂದರೂ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರಬಹುದು. ನಾನು ತಮಾಷೆಗಾಗಿ ಸೆರೆಹಿಡಿದ ದೃಶ್ಯ ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ಭಾವಿಸಿರಲಿಲ್ಲ’ ಎನ್ನುತ್ತಾರೆ ವಿನಯ್‌.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.