ADVERTISEMENT

ನಾಯಕರ ಶೀತಲ ಸಮರ ಕುರಿತು ಚರ್ಚೆ?

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 19:30 IST
Last Updated 3 ಅಕ್ಟೋಬರ್ 2017, 19:30 IST

ಬೆಂಗಳೂರು: ವಿಧಾನಸಭಾ ಚುನಾವಣೆ ಘೋಷಣೆ ಮೊದಲೇ ಆರಂಭಗೊಂಡ ಮುಖ್ಯಮಂತ್ರಿ ಗಾದಿ ಗುದ್ದಾಟ ಮತ್ತು ಚುನಾವಣೆ ನೇತೃತ್ವ ವಹಿಸುವ ಕುರಿತ ಗೊಂದಲದ ನಡುವೆಯೇ ಶುಕ್ರವಾರ (ಅ.6) ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ.

ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮಹತ್ವಾಕಾಂಕ್ಷೆಯ ‘ಮನೆ ಮನೆಗೆ ಕಾಂಗ್ರೆಸ್‌’ ಅಭಿಯಾನ ನಿರೀಕ್ಷೆಯಂತೆ ನಡೆಯದಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಜಿ. ಪರಮೇಶ್ವರ ಬಳಿ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಈ ಕಾರಣಕ್ಕೆ, ಅ. 6ರಂದು ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಸೂಚಿಸಿರುವ ವೇಣುಗೋಪಾಲ್‌, ಅದೇ ದಿನ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಲು ಪರಮೇಶ್ವರ ಅವರಿಗೆ ಸೂಚಿಸಿದ್ದಾರೆ. ಈ ಸಭೆಗಳಲ್ಲಿ ವೇಣುಗೋಪಾಲ್‌ ಭಾಗವಹಿಸಲಿದ್ದಾರೆ. ಬಳಿಕ ಜಿಲ್ಲಾ ಘಟಕಗಳ ಪದಾಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ADVERTISEMENT

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗಲು ಮತ್ತು ಸರ್ಕಾರದ ಸಾಧನೆಗಳೇ ಪ್ರಚಾರಕ್ಕೆ ಅಸ್ತ್ರ ಆಗಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಭಾವಿಕವಾಗಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವಂತೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ಆ ಮೂಲಕ ಗೊಂದಲಕ್ಕೆ ತೆರೆ ಎಳೆಯಲು ಪಕ್ಷ ಮುಂದಾಗಿದೆ.

‘ಮುಖ್ಯಮಂತ್ರಿ ಗಾದಿ ಸಂಬಂಧ ಪಕ್ಷದ ನಾಯಕರು ಅನಗತ್ಯ ವಾಕ್ಸಮರ ನಡೆಸುತ್ತಿದ್ದಾರೆ. ಸಚಿವರಾದ ಟಿ.ಬಿ. ಜಯಚಂದ್ರ, ಆರ್‌.ಬಿ. ತಿಮ್ಮಾಪೂರ, ಸಂಸದ ಧ್ರುವನಾರಾಯಣ, ಶಾಸಕ ಕೆ.ಎನ್. ರಾಜಣ್ಣ, ಹಿರಿಯ ನಾಯಕರಾದ ಜಾಫರ್‌ ಷರೀಫ್‌, ಜನಾರ್ದನ ಪೂಜಾರಿ ಜನಾರ್ದನ ಪೂಜಾರಿ ನಿಲುವು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ’ ಎಂದು ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ.

ಹೀಗಾಗಿ, ಶಾಸಕಾಂಗ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಬಹುದು. ಜೊತೆಗೆ ಪಕ್ಷ ಸಂಘಟನೆಯಲ್ಲಿ ಸಚಿವರು, ಶಾಸಕರ ನಿರಾಸಕ್ತಿ ಕೂಡಾ ಚರ್ಚೆಯಾಗಬಹುದು. ಸಭೆಯಲ್ಲಿ ವಾಗ್ವಾದವೂ ನಡೆಯಬಹುದು. ವೇಣುಗೋಪಾಲ್‌ ಇನ್ನೂ ಕೆಲವು ಕಟ್ಟುನಿಟ್ಟಿನ ಸೂಚನೆ ನೀಡಬಹುದು’ ಎಂದೂ ಪಕ್ಷದ ಮೂಲಗಳು ಹೇಳಿವೆ.

ಮತಗಟ್ಟೆ ಮಟ್ಟದಲ್ಲಿ ಅಭಿಯಾನ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದರೂ ಕೆಲವು ಜಿಲ್ಲೆಗಳಲ್ಲಿ ಇನ್ನೂ ಬೂತ್‌ ಮಟ್ಟದ ಸಮಿತಿ ರಚನೆ ಆಗಿಲ್ಲ. ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ವಹಿಸಿಕೊಂಡಿರುವ ಕೆಪಿಸಿಸಿ ಕಾರ್ಯದರ್ಶಿಗಳು ಮತ್ತು ಪಕ್ಷದ ಶಾಸಕರು ಈ ವಿಷಯದಲ್ಲಿ ನಿರಾಸಕ್ತಿ ತೋರಿಸುತ್ತಿರುವ ಬಗ್ಗೆಯೂ ವೇಣುಗೋಪಾಲ್‌ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.