ADVERTISEMENT

ನಾಲ್ಕು ಟಿಎಂಸಿ ಅಡಿ ನೀರು ಹರಿಸಲು ಸುಪ್ರೀಂ ಸೂಚನೆ

ಕಾವೇರಿ ಯೋಜನೆ: ಕರಡು ಸಲ್ಲಿಕೆಗೆ ಮೇ 8ರ ಗಡುವು

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ನಾಲ್ಕು ಟಿಎಂಸಿ ಅಡಿ ನೀರು ಹರಿಸಲು ಸುಪ್ರೀಂ ಸೂಚನೆ
ನಾಲ್ಕು ಟಿಎಂಸಿ ಅಡಿ ನೀರು ಹರಿಸಲು ಸುಪ್ರೀಂ ಸೂಚನೆ   

ನವದೆಹಲಿ: ‘ಕಾವೇರಿ ನದಿಯಿಂದ ಈ ತಿಂಗಳ ಅಂತ್ಯದೊಳಗೆ ತಮಿಳುನಾಡಿಗೆ 4 ಟಿಎಂಸಿ ಅಡಿ ನೀರು ಹರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಗುರುವಾರ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ‘ನೀರು ಹಂಚಿಕೆ ಕುರಿತು ಯೋಜನೆ (ಸ್ಕೀಂ) ರೂಪಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರ ಸಲ್ಲಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.

‘ನೀರು ಹಂಚಿಕೆಗಾಗಿ ಯೋಜನೆ ರೂಪಿಸುವಂತೆ ಕಳೆದ ಫೆಬ್ರುವರಿ 16ರಂದು ನೀಡಲಾದ ತೀರ್ಪನ್ನು ಜಾರಿಗೊಳಿಸಿಲ್ಲ’ ಎಂದು ದೂರಿ ತಮಿಳುನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು, ಇದುವರೆಗೆ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿಸಲಾಗಿದೆ ಎಂಬ ಕುರಿತು ವಿವರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

‘ಪ್ರಧಾನಿ ಮೋದಿ ಹಾಗೂ ಕೇಂದ್ರದ ಸಚಿವರು ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರಿಂದ, ಕಾವೇರಿ ನೀರು ಹಂಚಿಕೆಯ ಯೋಜನೆಗೆ ಸಂಬಂಧಿಸಿದ ಕರಡು ಸಿದ್ಧಪಡಿಸಲಾಗಿಲ್ಲ. ಹಾಗಾಗಿ ಹೆಚ್ಚುವರಿಯಾಗಿ 10 ದಿನಗಳ ಕಾಲಾವಕಾಶ ಬೇಕು’ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯ ದಿನವಾದ ಮೇ 8ರೊಳಗೆ ಯೋಜನೆಯ ಕರಡು ಸಿದ್ಧಪಡಿಸಬೇಕು ಎಂದು ಆದೇಶಿಸಿತು.

ADVERTISEMENT

ಲಭ್ಯವಿರುವ ನೀರು 9.94 ಟಿಎಂಸಿ

ಬೆಂಗಳೂರು: ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 9.94 ಟಿಎಂಸಿ ಅಡಿ ಬಳಸಬಹುದಾದ ನೀರಿನ ಸಂಗ್ರಹವಿದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.

ಲಭ್ಯವಿರುವ ನೀರನ್ನು ಜೂನ್‌ ಕೊನೆಯವರೆಗೆ ಬಳಕೆ ಮಾಡಬಹುದಾಗಿದೆ. ಬಳಸಲಾಗದ (ಡೆಡ್‌ ಸ್ಟೋರೇಜ್‌) ನೀರಿನ ಪ್ರಮಾಣ ನಾಲ್ಕು ಜಲಾಶಯಗಳಲ್ಲಿ ಒಟ್ಟು 10 ಟಿಎಂಸಿ ಅಡಿ ಇದೆ. ಬಳಸಬಹುದಾದ 9.94 ಟಿಎಂಸಿ ಅಡಿ ನೀರಿನಲ್ಲಿ ಎರಡು ತಿಂಗಳಿಗೆ ತಲಾ 3 ಟಿಎಂಸಿ ಅಡಿ ನೀರಿನಂತೆ ಒಟ್ಟು 6 ಟಿಎಂಸಿ ಅಡಿ ನೀರು ಕುಡಿಯುವ ಉದ್ದೇಶಕ್ಕೆ ಬೇಕು. ಒಂದು ಟಿಎಂಸಿ ಅಡಿಯಷ್ಟು ನೀರು ಆವಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.