ADVERTISEMENT

ನಿಗದಿತ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ–ಪಿಯು ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 19:46 IST
Last Updated 24 ಅಕ್ಟೋಬರ್ 2017, 19:46 IST

ಬೆಂಗಳೂರು: ಎಸ್ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಿಗದಿತ ವೇಳಾಪಟ್ಟಿ ಪ್ರಕಾರವೇ ನಡೆಸಲು ನಿರ್ಧರಿಸಲಾಗಿದೆ.

ವಿಧಾನಸಭೆ ಚುನಾವಣೆಯಿಂದಾಗಿ ಪರೀಕ್ಷೆಗಳು ಒಂದು ತಿಂಗಳು ಮುಂಚಿತವಾಗಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇದನ್ನು ಅಲ್ಲಗಳೆದಿದೆ.

‘ಚುನಾವಣೆಗೂ ಪರೀಕ್ಷೆಗೂ ಯಾವುದೇ ಸಂಬಂಧ ಇಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶೀಘ್ರದಲ್ಲಿಯೇ ಪರೀಕ್ಷಾ ದಿನಾಂಕಗಳನ್ನು ಅಂತಿಮಗೊಳಿಸಲಿವೆ. ಬಳಿಕ ವೇಳಾಪಟ್ಟಿಯನ್ನು ರಾಜ್ಯದ ಚುನಾವಣಾ ಆಯೋಗಕ್ಕೂ ನೀಡಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ADVERTISEMENT

ಈ ಮಧ್ಯೆ 2018–19ನೇ ಸಾಲಿಗೆ ಸಿಇಟಿ ನಡೆಸುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅ.30ರಂದು ಸಭೆ ಕರೆದಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳ ಕುಲಪತಿಗಳು, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ದ್ವಿತೀಯ ಪಿಯು ಪರೀಕ್ಷೆ ಮತ್ತು ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕಾಗಿ ನಡೆಯುವ ನೀಟ್‌  ದಿನಾಂಕಗಳು ಅಂತಿಮಗೊಂಡ ಬಳಿಕವಷ್ಟೇ ಸಿಇಟಿ ದಿನಾಂಕ ನಿರ್ಧಾರ ಆಗುತ್ತದೆ. ಪಿಯು ಪರೀಕ್ಷೆಯ ಕೊನೆಯ ‍ಪತ್ರಿಕೆ ಮುಗಿದ ದಿನಾಂಕಕ್ಕೂ ಸಿಇಟಿಗೂ ಒಂದು ತಿಂಗಳ ಅಂತರ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ’ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.