ADVERTISEMENT

ನಿತ್ಯ ಕಿರುಕುಳ, ಅಗ್ನಿಪರೀಕ್ಷೆ: ಸಿಎಂ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:05 IST
Last Updated 13 ಫೆಬ್ರುವರಿ 2011, 19:05 IST
ನಿತ್ಯ ಕಿರುಕುಳ, ಅಗ್ನಿಪರೀಕ್ಷೆ: ಸಿಎಂ
ನಿತ್ಯ ಕಿರುಕುಳ, ಅಗ್ನಿಪರೀಕ್ಷೆ: ಸಿಎಂ   

ಬೆಂಗಳೂರು: ‘ನಿತ್ಯ ನನ್ನಷ್ಟು ಕಿರುಕುಳ, ಅಗ್ನಿಪರೀಕ್ಷೆ ಎದುರಿಸಿದ ಮುಖ್ಯಮಂತ್ರಿ ಮತ್ತೊಬ್ಬರಿಲ್ಲ. ಬೇರೆ ಯಾರಾದರೂ ಇಂತಹ ಸ್ಥಿತಿಯನ್ನು ಎದುರಿಸಿದ್ದರೆ ಹುಚ್ಚೆದ್ದು ಓಡಿಹೋಗುತ್ತಿದ್ದರು. ಸುಳ್ಳನ್ನೇ ನೂರು ಬಾರಿ ಹೇಳಿ ಸತ್ಯ ಎಂದು ಪ್ರಚಾರ ಮಾಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೂರಿದರು.

ಕರ್ನಾಟಕ ರಾಜ್ಯ ಗಾಣಿಗರ ಸಮಾವೇಶ ಸಮಿತಿ ವತಿಯಿಂದ ನಗರದಲ್ಲಿ ಭಾನುವಾರ ನಡೆದ ರಾಜ್ಯ ಗಾಣಿಗರ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾನು ಮುಖ್ಯಮಂತ್ರಿಯಾಗಿದ್ದರೆ ಬಹುಕಾಲ ವಿರೋಧಪಕ್ಷವಾಗಿಯೇ ಉಳಿದುಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ನನ್ನ ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಮೂಲಕ ರಾಜಕಾರಣಿಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಉಂಟು ಮಾಡುವ ಕಾರ್ಯ ನಡೆಯುತ್ತಿದೆ’ ಎಂದು ಅವರು ಹೇಳಿದರು.

‘ಪ್ರಸ್ತುತ ಪರಿಸ್ಥಿತಿಯಲ್ಲಿ ಒಳ್ಳೆಯ ಕೆಲಸ ಮಾಡುವುದು ಕೂಡ ಅಪರಾಧವಾಗಿದೆ. ನಾನು ಪಲಾಯನವಾದಿಯಲ್ಲ. ವಿರೋಧ ಪಕ್ಷಗಳಿಗೆ ವಿಧಾನಸಭೆಯಲ್ಲಿಯೇ ಉತ್ತರ ನೀಡುತ್ತೇನೆ’ ಎಂದರು. ‘ಎಲ್ಲರೂ ಬದುಕಬೇಕೆಂಬುದು ಸಹಜ ಗುಣ. ಆದರೆ ತಾವು ಬದುಕುವುದಕ್ಕಾಗಿ ಇನ್ನೊಬ್ಬರ ಬದುಕನ್ನು ಕಸಿದುಕೊಳ್ಳುವ ಯತ್ನ ನಡೆದಿದೆ. ಇದಕ್ಕೆ ಯಡಿಯೂರಪ್ಪ ಅವಕಾಶ ನೀಡುವುದಿಲ್ಲ. ಅಭಿವೃದ್ಧಿಗೆ ಮಾರಕವಾದವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ತಿಳಿಸಿದರು.

ಪೀಠಕ್ಕೆ 5 ಕೋಟಿ: ‘ಗಾಣಿಗರ ಗುರುಪೀಠಕ್ಕಾಗಿ ನೆಲಮಂಗಲ ಬಳಿ ಸರ್ಕಾರ 10 ಎಕರೆ ಜಾಗ ನೀಡಲಿದೆ. ಗುರುಪೀಠದ ಕಟ್ಟಡಕ್ಕಾಗಿ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುವುದು. ಒಂದು ವರ್ಷದ ಒಳಗಾಗಿ ಈ ಕಟ್ಟಡ ಪೂರ್ಣಗೊಳ್ಳಬೇಕು’ ಎಂದು ಹೇಳಿದರು.

‘ಸರ್ಕಾರ ಗಾಣಿಗರ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಈ ಸಮುದಾಯದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಹಿಂದುಳಿದ ವರ್ಗಗಳು ಜಾತಿ ಉಪಜಾತಿಯ ಭೇದ ಮರೆತು ಅಭಿವೃದ್ಧಿ ಹೊಂದಬೇಕಿದೆ’ ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಮಾತನಾಡಿ ‘ಗಾಣಿಗ ಸಮಾಜ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಹಿಂದುಳಿದಿದೆ. ಇವರಿಗೆ ಶಿಕ್ಷಣ ದೊರೆತರೆ ಮಾತ್ರ ಆರ್ಥಿಕ ಸಬಲೀಕರಣ ಸಾಧ್ಯವಾಗುತ್ತದೆ. ಕೇವಲ ಸಮಾವೇಶಗಳಲ್ಲಿ ಮಾತ್ರ ಉತ್ಸಾಹ ತೋರದೆ ಸಮುದಾಯದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸಬೇಕಿದೆ’ ಎಂದರು.

‘ಯಡಿಯೂರಪ್ಪ ಅವರು ಒಳ್ಳೆಯ ರಾಜಕೀಯ ಮುತ್ಸದ್ದಿಯಾಗಿದ್ದು ಅವರ ಮೇಲೆ ಕೆಲವರು ವಕ್ರದೃಷ್ಟಿ ಬೀರುತ್ತಿದ್ದಾರೆ. ನಾನು ಅವರ ಪರವಾಗಿದ್ದು ರಾಜಕೀಯವಾಗಿ ಮುನ್ನಡೆಸುತ್ತೇನೆ’ ಎಂದರು.

ಸಂಸದ ಡಿ.ಬಿ.ಚಂದ್ರೇಗೌಡ ಮಾತನಾಡಿ, ‘ಆಧುನಿಕ ಕಾಲದಲ್ಲಿ ಗಾಣಿಗ ವೃತ್ತಿ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಗಾಣಿಗ ಸಮುದಾಯದಲ್ಲಿ ನಿರುದ್ಯೋಗ ಹೆಚ್ಚಿದೆ. ಶಿಕ್ಷಣ ಇಲ್ಲದಂತಹ ಜನರನ್ನು ಮೇಲೆತ್ತುವ ಪ್ರಯತ್ನ ನಡೆಯಬೇಕಿದೆ. ಸರ್ಕಾರದ ಪ್ರಸ್ತುತ ಬಜೆಟ್‌ನಲ್ಲಿ ಗಾಣಿಗ ಸಮುದಾಯದಂತಹ ಅನೇಕ ಹಿಂದುಳಿದ ವರ್ಗಗಳಿಗೆ ನೆರವು ದೊರೆಯಲಿದೆ’ ಎಂದು ಹೇಳಿದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಶಂಕರಪ್ಪ, ರಾಜ್ಯಜ್ಯೋತಿಫಣ ಗಾಣಿಗರ ಸಂಘದ ಅಧ್ಯಕ್ಷ ಟಿ.ವಿ. ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.