ADVERTISEMENT

ನಿರಂಜನ್ ಆತ್ಮ ಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2016, 20:03 IST
Last Updated 9 ಆಗಸ್ಟ್ 2016, 20:03 IST
ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆ ಪ್ರಕರಣದ ಆರೋಪಿ ನಿರಂಜನ್‌ ಭಟ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಯಿತು. ಪ್ರಜಾವಾಣಿ ಚಿತ್ರ/ ದಿವಾಕರ ಹಿರಿಯಡಕ
ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ಕೊಲೆ ಪ್ರಕರಣದ ಆರೋಪಿ ನಿರಂಜನ್‌ ಭಟ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಬಿಗಿ ಭದ್ರತೆಯಲ್ಲಿ ಕರೆದೊಯ್ಯಲಾಯಿತು. ಪ್ರಜಾವಾಣಿ ಚಿತ್ರ/ ದಿವಾಕರ ಹಿರಿಯಡಕ   

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಕೊಲೆ ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಕಾರ್ಕಳ ನಂದಳಿಕೆಯ ಜ್ಯೋತಿಷಿ ನಿರಂಜನ್‌ ಭಟ್ ವಜ್ರದ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

‘ಭಾಸ್ಕರ್‌ ಶೆಟ್ಟಿ ಕೊಲೆ ನಡೆದಿರುವುದು ಖಚಿತವಾದ ನಂತರ ನಿರಂಜನ್‌ಗಾಗಿ ಹುಡುಕಾಟ ತೀವ್ರಗೊಳಿಸಲಾಗಿತ್ತು. ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಚಿತವಾದ ನಂತರ ಆಗಸ್ಟ್ 7ರಂದೇ ಉಂಗುರ ನುಂಗಿದ್ದ. 8ರಂದು ನಿಟ್ಟೆಯಲ್ಲಿ ಆತನನ್ನು ಬಂಧಿಸಲಾಯಿತು.

ಎಲ್ಲ ಪ್ರಕ್ರಿಯೆ ನಡೆಸಿ ವಿಚಾರಣೆ ಆರಂಭಿಸಿದ ನಂತರ ಹೊಟ್ಟೆ ನೋವು ಎಂದು ಹೇಳಿದ. ಉಂಗುರ ನುಂಗಿರುವ ವಿಷಯವನ್ನು ಆತನೇ ತಿಳಿಸಿದ. ರಾತ್ರಿ 10 ಗಂಟೆ ಸುಮಾರಿಗೆ ಆತನನ್ನು ಉಡುಪಿ ನಗರದ ಅಜ್ಜರಕಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಹೊಟ್ಟೆಯಲ್ಲಿ ಉಂಗುರ ಇರುವುದು ಸ್ಕ್ಯಾನಿಂಗ್‌ನಲ್ಲಿ ಖಚಿತವಾಗಿದೆ. ವಜ್ರವನ್ನು ಪುಡಿ ಮಾಡಿ ನುಂಗಿದರೆ ಅಥವಾ ಅದು ಹರಿತ ಇದ್ದರೆ ಮಾತ್ರ ಅನ್ನನಾಳ ಹಾಗೂ ಹೊಟ್ಟೆಯೊಳಗೆ ರಕ್ತಸ್ರಾವ ಆಗಿ ಸಾಯುತ್ತಾರೆ. ಇದು ಉಂಗುರದ ವಜ್ರ ಆದ ಕಾರಣ ಹರಿತ ಇರಲಿಲ್ಲ. ಆದ್ದರಿಂದ ತೊಂದರೆ ಆಗಿಲ್ಲ. ನಿತ್ಯ ಕರ್ಮದ ವೇಳೆ ಅದು ಹೊರ ಹೋಗುವ ಸಾಧ್ಯತೆ ಇರುತ್ತದೆ’ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

‘ಬಂಧನವಾದ 24 ಗಂಟೆಯೊಳಗೆ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಬೇಕಾಗುತ್ತದೆ. ಆದರೆ, ನಿರಂಜನ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆಯಲಾಗುವುದು. ಆತ ಗುಣಮುಖನಾದ ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.