ADVERTISEMENT

ನಿರುಪಯುಕ್ತ ಬಲ್ಬ್‌ಗಳಲ್ಲಿ ಕಲೆಯ ಬೆಳಕು

ಗಿನ್ನೆಸ್‌ ದಾಖಲೆಗೆ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಜಮಖಂಡಿ ಕಲಾವಿದ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2014, 19:30 IST
Last Updated 11 ಮಾರ್ಚ್ 2014, 19:30 IST

ಹುಬ್ಬಳ್ಳಿ: ವಿಧಾನಸೌಧ, ತಾಜ್‌ಮಹಲ್‌, ಗೋಲ್‌್ ಗುಂಬಜ್‌, ಕೂಡಲಸಂಗಮ... ರಾಮತೀರ್ಥ, ಶಿವಲಿಂಗ, ಕಂಪ್ಯೂಟರ್‌...ಹೀಗೆ ನಾನಾ ಬಗೆಯ ಕಟ್ಟಡ, ವಸ್ತುಗಳ ಮಾದರಿಗಳು ಬಲ್ಬ್‌ ಒಳಗೆ ಬಂದಿ. ಇಂಥ ಅಪರೂಪದ ಪ್ರತಿಭೆಯನ್ನು ಪ್ರದರ್ಶಿ ಸಿರುವುದು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕು ಹುನ್ನೂರು ಗ್ರಾಮದ ವಿಜಯಕುಮಾರ ಬಿ.ಪವಾರ.

ನಿರುಪಯುಕ್ತ ಬಲ್ಬ್‌ಗಳ ಒಳಗೆ ಎಂಟು ವರ್ಷಗಳಿಂದ ಕಲಾಕೃತಿಗಳನ್ನು ರಚಿಸುತ್ತಿರುವ ಇವರು ಈಗಾಗಲೇ ಸತತ ಆರು ಬಾರಿ ಸೇರಿದಂತೆ ಒಟ್ಟು ಎಂಟು ಬಾರಿ ಲಿಮ್ಕಾ ದಾಖಲೆ ಪಟ್ಟಿಗೆ ಸೇರಿದ್ದಾರೆ. ಈಗ ಗಿನ್ನೆಸ್‌ ದಾಖಲೆ ಸೇರುವ ಹಂಬಲ ದಲ್ಲಿದ್ದಾರೆ. 2010, 2011 ಹಾಗೂ 2016ರ ಲಿಮ್ಕಾ ದಾಖಲೆಯ ಹ್ಯೂಮನ್‌ ಸ್ಟೋರಿ ಮತ್ತು ಪೇಂಟಿಂಗ್‌ ಚಾಪ್ಟರ್‌ ವಿಭಾಗದಲ್ಲಿ, 2012ರ ಪೇಂಟಿಂಗ್‌ ಚಾಪ್ಟರ್‌ನಲ್ಲಿ ಹೆಸರು ಪಡೆದಿರುವ ವಿಜಯ ಪವಾರ, 600ಕ್ಕೂ ಹೆಚ್ಚು ಬಲ್ಬ್‌ಗಳಲ್ಲಿ ಕಲಾಕೃತಿಗಳನ್ನು ರಚಿಸಿರುವುದಾಗಿ ಹೇಳುತ್ತಾರೆ.

ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿದ ಅವರು ‘ದ್ವಿತೀಯ ಬಿಎ ವಿದ್ಯಾರ್ಥಿ ಯಾಗಿರುವ ನಾನು ಎಂಟನೇ ವರ್ಷದಿಂದ ಈ ಹವ್ಯಾಸದಲ್ಲಿ ತೊಡಗಿಕೊಂಡಿದ್ದು ಒಂದು ಸಾವಿರಕ್ಕೂ ಹೆಚ್ಚು ಬಲ್ಬ್‌ಗಳಲ್ಲಿ ಚಿತ್ರಗಳನ್ನು ಕೂಡ ರಚಿಸಿದ್ದೇನೆ’ ಎಂದು ತಿಳಿಸಿದರು.
‘ಕೆಂಪು ಕೋಟೆ, ಲಂಡನ್‌ ಬ್ರಿಜ್‌, ಎತ್ತಿನ ಬಂಡಿ, ವಿಮಾನ, ಗಣೇಶ ವಿಗ್ರಹ, ಫ್ಯಾನ್‌, ಕ್ಯಾಲ್ಕುಲೇಟರ್‌, ಟಿ.ವಿ, ಸ್ವಾತಂತ್ರ್ಯ ಹೋರಾಟಗಾರರು, ಕವಿ–ಸಾಹಿತಿಗಳನ್ನು ರಚಿಸಲಾಗಿದ್ದು ಗಿನ್ನೆಸ್‌ ದಾಖಲೆ ಗಾಗಿಯೇ ಬಲ್ಬ್‌ ಒಳಗೆ ಕಲೆಯನ್ನು ಬೆಳಗಲು ಶುರು ಮಾಡಿದ್ದೇನೆ’ ಎಂದು   ತಿಳಿಸಿದರು.

‘2011 ಮುಂಬೈನಲ್ಲಿ ನಡೆದ ರಾಷ್ಟ್ರೀಯ ಸಂಸ್ಕೃತಿ ಹಬ್ಬ, 2012ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವ ಹಾಗೂ 2013ರಲ್ಲಿ ಗೋವಾದಲ್ಲಿ ನಡೆದ ಸಾಂಸ್ಕೃತಿಕ ಹಬ್ಬದಲ್ಲಿ ಪಾಲ್ಗೊಂಡಿದ್ದೇನೆ. ಆದರೆ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಕ್ಕಿಲ್ಲ’ ಎಂದು   ಹೇಳುತ್ತಾರೆ.

ಗಿನ್ನೆಸ್‌ ದಾಖಲೆಯ ಪ್ರವೇಶಕ್ಕೆ ಶುಲ್ಕ ನಿಗದಿ ಮಾಡಲಾಗಿದ್ದು ಒಟ್ಟು ₨ 32,000 ವೆಚ್ಚವಾಗಲಿದೆ. ಇಷ್ಟು ಹಣ ಭರಿಸುವ ಶಕ್ತಿ ನನಗಿಲ್ಲ. ಹೀಗಾಗಿ ಮೂರು ವರ್ಷಗಳಿಂದ ಈ ದಾಖಲೆಯ ಕನಸು ನನಸಾಗದೇ ಉಳಿದಿದೆ. ಈ ಬಾರಿ ಅರ್ಜಿ ಸಲ್ಲಿಸಿದ್ದು ಪ್ರಾಯೋಜಕರು , ಸಂಘ–ಸಂಸ್ಥೆಯವರು ಮುಂದೆ ಬಂದು ಸಹಾಯ ಮಾಡಬೇಕು’ ಎಂದು ಅವರು ಕೋರಿದರು.  ವಿಜಯಕುಮಾರ ಅವರ ಸಂಪರ್ಕ ಸಂಖ್ಯೆ: 89702 72103 ಅಥವಾ 78993 41386.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.