ಬೆಂಗಳೂರು: ‘ನಮ್ಮೂರ ಹುಡುಗ’, ‘ವೀರಪ್ಪನ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಹಿರಿಯ ಚಿತ್ರನಿರ್ದೇಶಕ ರವೀಂದ್ರನಾಥ್ (63), ಹೈದರಾಬಾದ್ನಲ್ಲಿ ಭಾನುವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು.
ಚೆನ್ನೈ ಫಿಲ್ಮ್ ಇನ್ಸ್‌ಟಿಟ್ಯೂಟ್‌ನ ವಿದ್ಯಾರ್ಥಿಯಾಗಿದ್ದ ರವೀಂದ್ರನಾಥ್, ರಜನಿಕಾಂತ್, ಅಶೋಕ್, ಹೇಮಾ ಚೌಧುರಿ, ರಘುನಂದನ್ ಮುಂತಾದವರ ಸಹಪಾಠಿಯಾಗಿದ್ದರು. ರಜನಿಕಾಂತ್ ಅವರ ಹತ್ತಿರದ ಒಡನಾಡಿಯಾಗಿದ್ದ ರವೀಂದ್ರನಾಥ್, ಸಹ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿ ‘ಭಕ್ತ ಸಿರಿಯಾಳ’, ‘ಗಂಡ ಹೆಂಡತಿ’ ಮತ್ತಿತರ ಚಿತ್ರಗಳಲ್ಲಿ ದುಡಿದಿದ್ದರು. ಹುಣಸೂರು ಕೃಷ್ಣಮೂರ್ತಿ, ಕೆ.ಬಾಲಚಂದರ್ ಮುಂತಾದವರ ಬಳಿ ಕೆಲಸ ಮಾಡಿದ್ದ ಅನುಭವ ಅವರದು.
ಭದ್ರಾವತಿ ಮೂಲದವರಾದ ಅವರ ನಿರ್ದೇಶನದ ಮೊದಲ ಚಿತ್ರ ‘ಅಪರಂಜಿ’. ‘ಹೆಣ್ಣೆ ನಿನಗೇಕೆ ಈ ಬಂಧನ’,‘ವೀರಪ್ಪನ್’, ‘ಸಾಂಗ್ಲಿಯಾನ ಭಾಗ 3’, ‘ನಮ್ಮೂರ ಹುಡುಗ’, ‘ತಾಯಿ ಕೊಟ್ಟ ತಾಳಿ’, ‘ಲಂಚ ಲಂಚ ಲಂಚ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ‘ವೀರಪ್ಪನ್’ ಚಿತ್ರ 1992–93ರಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಇತ್ತೀಚಿನ ದಿನಗಳಲ್ಲಿ ನಿರ್ದೇಶನ ತ್ಯಜಿಸಿ ನಟನೆಯತ್ತ ಮುಖ ಮಾಡಿದ್ದ ಅವರು, ‘ಜೋಗಯ್ಯ’, ‘ಪ್ರೇಮ್ ಅಡ್ಡಾ’ ಚಿತ್ರಗಳಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.