ಹುಬ್ಬಳ್ಳಿ/ ತುಮಕೂರು: ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ವಿವಿಧೆಡೆ ಅಕಾಲಿಕ ಮಳೆಯ ರೌದ್ರಾವತಾರ ಶನಿವಾರವೂ ಮುಂದುವರಿದಿದೆ.
ಬಳ್ಳಾರಿ, ಬಾಗಲಕೋಟೆ, ವಿಜಾಪುರ ಚಿತ್ರದುರ್ಗ, ತುಮಕೂರು, ಮಂಡ್ಯ ಮತ್ತು ದಾವಣಗೆರೆ ಜಿಲ್ಲೆಯ ಅನೇಕ ಕಡೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ಭಾರಿ ಮಳೆ ಯಿಂದಾಗಿ ವ್ಯಾಪಕ ಬೆಳೆ ಹಾನಿ ಯಾಗಿದೆ.
ಹೊಲದಿಂದ ವಾಪಸು ಮನೆಗೆ ಹೊರಟಿದ್ದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಗ್ರಾಮದ ಶಿವಲಿಂಗಯ್ಯ ಸಿದ್ದಯ್ಯ ಹಿರೇಮಠ (28) ಎಂಬ ಯುವಕ ಸಿಡಿಲಿನಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಆಡಗಲ್ಲು ಗ್ರಾಮದ ಬಳಿಯ ಸಿದ್ಧನಗವಿ ಗ್ರಾಮದ ಹೊಲದಲ್ಲಿದ್ದ ಐ.ಟಿ.ಐ ವಿದ್ಯಾರ್ಥಿ ಶಿವನಗೌಡ ಬಸಪ್ಪ ಗೌಡರ (17) ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲಿಯೇ ಸತ್ತಿದ್ದಾನೆ.
ವಿಜಾಪುರ ವರದಿ: ಜಿಲ್ಲೆಯ ತಾಳಿಕೋಟೆ ಪಟ್ಟಣ ಹಾಗೂ ಸುತ್ತಮುತ್ತ ಶುಕ್ರವಾರ ರಾತ್ರಿ 11ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೆ ಸುರಿದ ಮಳೆಯಿಂದ ಡೋಣಿ ನದಿಯ ನೆಲಮಟ್ಟದ ಸೇತುವೆ ಮೇಲೆ ಪ್ರವಾಹ ಬಂದು ಸಂಚಾರ ಸ್ಥಗಿತಗೊಂಡಿತ್ತು.
ಬಾಗಲಕೋಟೆ ವರದಿ: ಶನಿವಾರ ಸಂಜೆ ಭಾರಿ ಗಾತ್ರದ ಆಲಿಕಲ್ಲುಗಳೊಂದಿಗೆ ಸುರಿದ ಮಳೆಯಿಂದ ಜಮಖಂಡಿ ತಾಲ್ಲೂಕಿನ ಕಡಪಟ್ಟಿ ಗ್ರಾಮದಲ್ಲಿ ಬೃಹತ್ ಗಾತ್ರದ ಆಲಿಕಲ್ಲು ತಲೆ ಮೇಲೆ ಬಿದ್ದು, ಅಮೃತ್ ಶಹಾ (35) ಎಂಬುವರಿಗೆ ತೀವ್ರ ಗಾಯವಾಗಿದೆ.
ಇದೇ ಗ್ರಾಮದ ರಮೇಶ ಕಿಶೋರಿ ಎಂಬುವವರ ಕಣ್ಣಿಗೆ ಆಲಿಕಲ್ಲಿನ ಏಟು ಬಿದ್ದು ಕಣ್ಣು ಕಾಣಿಸದಂತಾಗಿದೆ.
ತುಮಕೂರು ವರದಿ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಗಾಳಿ ಮಳೆ ಮತ್ತು ಆಲಿಕಲ್ಲು ಬಿದ್ದಿದೆ.
ಪಾವಗಡ ತಾಲ್ಲೂಕಿನ ದೊಮ್ಮತ ಮರಿ, ಅರಸೀಕೆರೆ, ಮುರಾರಾಯನ ಹಳ್ಳಿಯಲ್ಲಿ ಮಳೆಗೆ ಮೆಕ್ಕೆ ಜೋಳ, ದಾಳಿಂಬೆ, ಮೆಣಸಿನ ಕಾಯಿ, ಬಾಳೆ ತೋಟಗಳು ನೆಲಕಚ್ಚಿವೆ.
ಮಧುಗಿರಿ ವೀರಗಾನಹಳ್ಳಿಯಲ್ಲಿ ಕೋಳಿ ಫಾರಂ ಶೆಡ್ ಮುರಿದು ಬಿದ್ದಿದೆ. ಶಿರಾ ತಾಲ್ಲೂಕು ಬರಗೂರು, ಕೊರಟ ಗೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿಯಲ್ಲಿ ಉತ್ತಮ ಮಳೆಯಾಗಿದೆ. ಕೆಲವು ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿಗೆ ಮನೆಯ ಹೆಂಚು, ಶೀಟ್ಗಳು ಹಾರಿ ಹೋಗಿವೆ. ಮಾವಿನ ಕಾಯಿ ಮಿಡಿ ಮತ್ತು ಹೂವು ಉದುರಿ ಹೋಗಿವೆ.
ದಾವಣಗೆರೆ ವರದಿ: ಆಲಿಕಲ್ಲು ಮಳೆಯಿಂದಾಗಿ ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು, ಹೊನ್ನಾಳಿ, ಹರಪನಹಳ್ಳಿಯಲ್ಲಿ ಹಾನಿ ಸಂಭವಿಸಿದೆ. ಶನಿವಾರ ಸಂಜೆ ದಾವಣಗೆರೆ ನಗರ, ಚನ್ನಗಿರಿ ತಾಲ್ಲೂಕಿನ ಹಲವೆಡೆ ಗುಡುಗಿನಿಂದ ಕೂಡಿದ ಮಳೆಯಾಗಿದೆ.
ಶಿವಮೊಗ್ಗ ನಗರದಲ್ಲೂ ಸಂಜೆ ಸುಮಾರು ಒಂದು ಗಂಟೆ ಮಳೆಯಾಗಿದೆ. ಗಾಳಿ–ಮಳೆಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಹೊನ್ನಾಳಿ ತಾಲ್ಲೂಕಿನ ಬಹುತೇಕ ಕಡೆ ಶುಕ್ರವಾರ ರಾತ್ರಿ 9 ಗಂಟೆಯಿಂದ ಸತತ 17 ಗಂಟೆ ವಿದ್ಯುತ್ ವ್ಯತ್ಯಯವಾಯಿತು.
ಗೊಲ್ಲರಹಳ್ಳಿಯಲ್ಲಿನ ಶಾಸಕ ಡಿ.ಜಿ.ಶಾಂತನಗೌಡ ಅವರಿಗೆ ಸೇರಿದ ರೈಸ್‌ಮಿಲ್‌ಗೆ ಮಳೆ–ಗಾಳಿಯಿಂದ ಹಾನಿಯಾಗಿದೆ.
ಫಸಲಿಗೆ ಬಂದಿದ್ದ ನೂರಾರು ಅಡಿಕೆ ಮರಗಳು ನಾಶವಾಗಿವೆ.
ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ಹೊಳೆಸಿರಿಗೆರೆ ಗ್ರಾಮದ ವ್ಯಾಪ್ತಿಯಲ್ಲಿ ನೂರಾರು ಬಾಳೆ, ಅಡಿಕೆ, ತೆಂಗಿನಮರಗಳು ನೆಲಕ್ಕೆ ಉರುಳಿದ್ದು, ಭತ್ತದ ಬೆಳೆಗೆ ಹಾನಿಯಾಗಿದೆ, 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಹಾಗೂ ಮೂರು ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ಬಾಪೂಜಿನಗರ (ಉದ್ದಗಟ್ಟೆ ದೊಡ್ಡತಾಂಡಾ) ಗ್ರಾಮದಲ್ಲಿ 8 ಮನೆಗಳಿಗೆ ಮಳೆ ನೀರು ನುಗ್ಗಿದೆ. ಸುಮಾರು ರೂ. 8 ಲಕ್ಷಕ್ಕೂ ಅಧಿಕ ಮೊತ್ತದ ಸ್ಥಿರಾಸ್ತಿ ಹಾಗೂ ದವಸ– ಧಾನ್ಯ ಸೇರಿದಂತೆ ವಿವಿಧ ಸಾಮಗ್ರಿ ಮಳೆ ನೀರಿನಲ್ಲಿ ಕೊಚ್ಚಿಹೋಗಿವೆ.
ಚಿತ್ರದುರ್ಗ ವರದಿ: ಧರ್ಮಪುರ ಹೋಬಳಿಯ ಸುತ್ತಮುತ್ತ ಆಲಿಕಲ್ಲು ಮಳೆಯಿಂದ ಅಪಾರ ನಷ್ಟ ಸಂಭವಿಸಿದ್ದು, ರೈತರ ಸ್ಥಿತಿ ಶೋಚನೀಯವಾಗಿದೆ.
ಹರಿಯಬ್ಬೆ ಗ್ರಾಮದಲ್ಲಿ ಫಸಲಿಗೆ ಬಂದಿದ್ದ ಸುಮಾರು 40 ಎಕರೆ ಪ್ರದೇಶದ ಅಡಿಕೆ ಗಿಡಗಳು ನೆಲಕ್ಕುರುಳಿವೆ. ಇದೇ ಗ್ರಾಮದಲ್ಲಿ 300 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಆಲಿಕಲ್ಲು ಹೊಡೆತಕ್ಕೆ ನಾಶವಾಗಿದೆ. ದಾಳಿಂಬೆ ಗಿಡಗಳು ನೆಲಕಚ್ಚಿದೆ. ರಾಗಿ, ಭತ್ತ ನೀರಿನಲ್ಲಿ ಕೊಚ್ಚಿ ಹೋಗಿವೆ. ಸುಮಾರು ರೂ. 6 ಕೋಟಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ರಂಗೇನಹಳ್ಳಿ, ಶ್ರವಣಗೆರೆಯಲ್ಲೂ ಆಲಿಕಲ್ಲು ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಹಾನಿಯಾಗಿದೆ.
ಪಾಂಡವಪುರ ವರದಿ: ಭಾರಿ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ಅಪಾರ ನಷ್ಟ ಉಂಟಾಗಿದ್ದು, ಹುಲ್ಕೆರೆ ಗ್ರಾಮದಲ್ಲಿ ಸತೀಶ್ ಎಂಬುವವರಿಗೆ ಸೇರಿದ ಸುಮಾರು 2,500 ಕೋಳಿ ಮರಿಗಳು ಸಾವನ್ನಪ್ಪಿವೆ. ಅಲ್ಲದೇ, ಸುಮಾರು 8 ಎಕರೆಯಷ್ಟು ಬೀನ್ಸ್ ಬೆಳೆ ಹಾನಿಯಾಗಿದೆ. ಗ್ರಾಮದಲ್ಲಿ ತೋಟದ ಬೆಳೆ ಬೆಳೆಯುವ ರೈತರೇ ಹೆಚ್ಚಾಗಿದ್ದು, ಮಳೆಯಿಂದಾಗಿ ಕಟಾವಿಗೆ ಬಂದ ಬೆಳೆ ನಷ್ಟ ಉಂಟಾಗಿರುವುದರಿಂದ ಕಂಗಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.